ಸಿದ್ದರಕಟ್ಟೆ ಹೂಳು ಎತ್ತಿ ಸಂರಕ್ಷಿಸುವುದು ಆದ್ಯ ಕರ್ತವ್ಯ: ಶಾಸಕ ಕೆ.ಎನ್. ರಾಜಣ್ಣ
ಮಧುಗಿರಿ: ಪಟ್ಟಣದ ಬಹುತೇಕ ಬಡಾವಣೆಗಳಿಗೆ ನೀರು ಒದಗಿಸುವ ಸಾಮರ್ಥ್ಯವುಳ್ಳ ಐತಿಹಾಸಿಕ ಏಕಶಿಲಾ ಬೆಟ್ಟದ ಬುಡದಲ್ಲಿರುವ ಸಿದ್ದರಕಟ್ಟೆಯಲ್ಲಿ ಹೂಳು ತುಂಬಿರುವುದನ್ನು ಎತ್ತಿ ಸರಿಪಡಿಸಿ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಸಿದ್ದರಕಟ್ಟೆಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಈ ಕಟ್ಟೆಯ ಹೂಳು ಎತ್ತಿ ಅಭಿವೃದ್ಧಿ ಪಡಿಸುವುದರಿಂದ ಮಳೆ ಬಿದ್ದಾಗ ಬೆಟ್ಟದ ಝರಿಯ ನೀರು ಶೇಖರಣೆಗೊಂಡು ಅಂತರ್ಜಲದ ಮಟ್ಟ ವೃದ್ಧಿಯಾಗಿ ಪಟ್ಟಣದ ಜನತೆಗೆ ನೀರಿನ ಸಮಸ್ಯೆ ಪರಿಹಾರ ಒದಗಿಸಿದಂತಾಗುತ್ತದೆ. ಅಲ್ಲದೆ ಪೂರ್ವಿಕರು ಕಟ್ಟಿರುವ ಇಂತಹ ಐತಿಹಾಸಿಕ ಕೆರೆ-ಕಟ್ಟೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಿದೆ ಎಂದರು.
ಇದರ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಅಥವಾ ಪುರಸಭೆ ವತಿಯಿಂದ ಹಣ ಸಂಗ್ರಹಿಸಿ ಈ ಐತಿಹಾಸಿಕ ಕಟ್ಟೆಯನ್ನು ಪುನಶ್ಚೇತನಗೊಳಿಸುವ ಜತೆಗೆ ಏರಿ ಎತ್ತರ ಮಾಡಿ ದುರಸ್ತಿಪಡಿಸಿ ನೀರು ನಿಲ್ಲಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಪಟ್ಟಣದಲ್ಲಿನ ಬಾವಿ, ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದ್ದು, ಸಾರ್ವಜನಿಕರಿಗೆ ಸುಂದರ ತಾಣವಾಗಲಿದೆ. ಆ ನಿಟ್ಟಿನಲ್ಲಿ ಸಿದ್ದರಕಟ್ಟೆಯಲ್ಲಿರುವ ಹೂಳು ಎತ್ತಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜಣ್ಣ ಭರವಸೆ ನೀಡಿದರು.
ರಸ್ತೆ ದುರಸ್ತಿ ಶೀಘ್ರ: ಬಹುತೇಕ ಪಟ್ಟಣದ ಎಲ್ಲ ರಸ್ತೆಗಳು ಆಳುದ್ದ ಗುಂಡಿಗಳು ಬಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆದ ಕಾರಣ ಆದಷ್ಟು ಬೇಗ ರಸ್ತೆ ದುರಸ್ಥಿ ಪಡಿಸಿ ಜನತಗೆ ಅನುಕೂಲ ಮಾಡುವಂತೆ ಮತ್ತು ಹೊಸ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ಶಾಸಕ ರಾಜಣ್ಣ ಎಂಜಿನಿಯರ್‌ಗಳಿಗೆ ತಿಳಿಸಿದರು.
ತಹಸೀಲ್ದಾರ್ ಕೆ. ರಮೇಶ್, ಜಿ.ಪಂ.ಎಇಇ ಲೋಕೇಶ್ವರಯ್ಯ, ಪುರಸಭೆ ಮುಖ್ಯಾಧಿಕಾರಿ ಬಿ.ಶುಭಾ, ಎಂಜಿನಿಯರ್ ಶ್ರೀರಂಗಯ್ಯ, ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಸದಸ್ಯರಾದ ಎನ್.ಗಂಗಣ್ಣ, ಅಯೂಬ್, ಗುತ್ತಿಗೆದಾರರಾದ ದ್ವಾರಕನಾಥ್, ರಾಧೇಶ್ಯಾಮ್, ಭರತೇಶ್, ನಬಿಲ್ ಕೆ.ಪಾಳ್ಯ, ಸೀತರಾಮು, ಮುಖಂಡ ಎಂ.ಆರ್.ಜಗನ್ನಾಥ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.