ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಲಿ
ಕ.ಪ್ರ.ವಾರ್ತೆ ಪಾವಗಡ ಆ. 31
ಸಮರ್ಪಕ ಕುಡಿಯುವ ನೀರಿನ ಅನುಷ್ಠಾನ ಸೇರಿದಂತೆ ಗ್ರಾಮೀಣ ಪ್ರದೇಶದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಬದ್ಧತೆಯಿಂದ ಕೆಲಸ ಮಾಡಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅಧಿಕಾರಿಗಳಿಗೆ ಆದೇಶಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ(ಕೆಡಿಪಿ)ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳಿಂದ ತಾಲೂಕು ಮಟ್ಟದ ವಿವಿಧ ಇಲಾಖೆ ಯೋಜನೆಗಳ ಪ್ರಗತಿಯ ಸಂಕ್ಷಿಪ್ತ ವಿವರ ಪಡೆದ ಶಾಸಕರು ಗ್ರಾಮೀಣ ಪ್ರದೇಶದಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧರಾಗಿ ಕೆಲಸ ಮಾಡುವಂತೆ ಎಚ್ಚರಿಸಿದರು.
ಕುಡಿಯುವ ನೀರಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಾಟರ್ ಟ್ಯಾಂಕ್ಗಳ ನಿರ್ಮಾಣ, ಸಮಸ್ಯೆ ಇರುವ ಗ್ರಾಮಗಳ ವಿವರ ಸೇರಿದಂತೆ ಅನುದಾನ ಬಳಕೆಯ ಪೂರ್ಣ ಮಾಹಿತಿ ಮತ್ತು ಈಗಾಗಲೇ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಿದ ಬಗ್ಗೆ ಜಿಪಂ ಸಹಾಯಕ ಎಂಜಿನಿಯರ್ ಬಸವಲಿಂಗಯ್ಯ ಎಂಬವರಿಂದ ಮಾಹಿತಿ ಪಡೆದ ಶಾಸಕರು, ಕುಡಿಯುವ ನೀರು ಹಾಗೂ ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಗ್ರಾಮೀಣ ಸಮಸ್ಯೆ ಬಗ್ಗೆ ಕೂಡಲೇ ಗಮನಕ್ಕೆ ತನ್ನಿ ಎಂದರು.
ಇಲಾಖೆಗೆ ಅಧಿಕಾರಿಗಳ ಸದಾ ಗೈರು, ಯೋಜನೆಗಳ ಸಮರ್ಪಕ ಬಳಕೆ ಸೇರಿದಂತೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಪ್ರತಿ ಕೆಲಸದ ಮೇಲೆ ನಿಗಾ ವಹಿಸಲಾಗಿದ್ದು, ನಮ್ಮ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದ ಶಾಸಕರು, ಕರ್ತವ್ಯಕ್ಕೆ ಗೈರು ಹಾಜರಾಗುವ ಜಿಪಂ ಸಹಾಯಕ ಎಂಜಿನಿಯರ್ಗಳ ಬಗ್ಗೆ ಮಾಹಿತಿ ಇದೆ ಆಂಥವರ ವಿರುದ್ಧ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಅಭಿವೃದ್ಧಿ ವಿಚಾರದಲ್ಲಿ ಸಮರ್ಪಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗೌರವಿಸುವುದಲ್ಲದೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಆಂಥವರಿಂದ ಹೆಚ್ಚಿನ ಕೆಲಸ ನಿರೀಕ್ಷೆ ಮಾಡಲಾಗುವುದಾಗಿ ಸಭೆಯಲ್ಲಿ ತಿಳಿಸಿದ ಅವರು, ಬರಕ್ಕೆ ತುತ್ತಾದ ತಾಲೂಕಿನ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿ ಎಂದರು. ಗ್ರಾಮಸಭೆ ನಡೆಸದೇ ಸುಳ್ಳು ವರದಿ ನೀಡಿ ಮನೆ ಇತರೆ ಯೋಜನೆಗಳನ್ನು ದುರುಪಯೋಗಪಡಿಸುವುದರಿಂದ ಗ್ರಾಪಂಗಳಲ್ಲಿ ಬಡ ಆರ್ಹರಿಗೆ ಸೌಲಭ್ಯ ದೊರೆಯುತ್ತಿಲ್ಲವೆಂದು ನೋಡಲ್ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಜಿಪಂ ಸದಸ್ಯ ಆರ್.ಸಿ. ಅಂಜಿನಪ್ಪ, ಗ್ರಾಮಸಭೆ ನಡೆದಿರುವ ಬಗ್ಗೆ ವಿವರ ಪಡೆದು ಗ್ರಾಪಂ ನೋಡಲ್ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒ ಕಾರ್ಯದರ್ಶಿಗಳ ವೈಖರಿ ಬಗ್ಗೆ ತೀವ್ರ ಆಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳ ಬಗ್ಗೆ ತೀವ್ರ ಆಸಮಾಧಾನ ವ್ಯಕ್ತಪಡಿಸಿದ ಆರ್.ಸಿ. ಅಂಜಿನಪ್ಪ, ಸಮಾಜ ಕಲ್ಯಾಣಾಧಿಕಾರಿ ಚೌಧರಿ ಹಾಸ್ಟೆಲ್ಗಳ ಸಮರ್ಪಕ ನಿರ್ವಹಣೆಯಲ್ಲಿ ವಿಫಲರಾಗಿದ್ದು, ನಿಲಯಪಾಲಕರಿಗೆ ಸೂಕ್ತ ನಿರ್ದೇಶನ ನೀಡಿ ಎಸ್ಸಿ, ಎಸ್ಟಿ ಹಾಸ್ಟೆಲ್ಗಳು ನಿರ್ವಹಿಸಿ ಎಂದು ಎಚ್ಚರಿಸಿದರು.
ತಾ. ಬಿಸಿಎಂ ತನಿಖಾಧಿಕಾರಿ ಪಾರ್ವತಮ್ಮ ಎಂಬವರ ವೈಖರಿ ಬಗ್ಗೆ ತೀವ್ರ ಆಸಮಾಧಾನ ವ್ಯಕ್ತಪಡಿಸಿ ಶಾಸಕ ತಿಮ್ಮರಾಯಪ್ಪ ಶನಿವಾರ, ಭಾನುವಾರ ಹಾಸ್ಟೆಲ್ನ ಬಡ ವಿದ್ಯಾರ್ಥಿಗಳನ್ನು ಬಲವಂತಪಡಿಸಿ ಸ್ವ ಗ್ರಾಮಗಳಿಗೆ ಕಳುಹಿಸುವುದರಿಂದ ವಿದ್ಯಾರ್ಥಿಗಳು ಆನೇಕ ಸಮಸ್ಯೆ ಎದುರಿಸುತ್ತಾರೆ. ಅಲ್ಲದೆ, ಪೋಷಕರು ನಗರ ಪ್ರದೇಶಗಳಿಗೆ ವಲಸೆ ಹೋದ ಕಾರಣ ಮನೆಗಳಲ್ಲಿ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇನ್ನೂ ಮುಂದೆ ಉತ್ತಮ ವಿದ್ಯಾಬ್ಯಾಸ ಸೇರಿದಂತೆ ಹಾಸ್ಟೆಲ್ ವಿದ್ಯಾರ್ಥಿಗಳ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಪರಿಣಾಮ ಎದುರಿಸುವ ಅನಿವಾರ್ಯವಿದೆ ಎಂದು ಪಾರ್ವತಮ್ಮನಿಗೆ ಎಚ್ಚರಿಸಿದರು.
ಪಟ್ಟಣದಲ್ಲಿ ಕುಡಿಯವ ನೀರು ಹಾಗೂ ಪಾರ್ಕ್ ಸೈಟ್ಗಳು ಸೇರಿದಂತೆ ಪುರಸಭೆ ಯೋಜನೆಗಳ ವಿವರ ಪಡೆದ ಶಾಸಕರು ಪಟ್ಟಣದಲ್ಲಿ ನೀರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡಿ ಎಂದು ಮುಖ್ಯಾಧಿಕಾರಿ ರಂಗಸಾಮಯ್ಯ ಅವರಿಗೆ ಎಚ್ಚರಿಸಿದರು. ತಾಪಂ, ಜಲಾನಯನ, ಕೃಷಿ, ಲೋಕೋಪಯೋಗಿ, ಸಿಡಿಪಿಒ ಮುಂತಾದ ಇಲಾಖೆಯಗಳ ವಿವರ ಪಡೆದು ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಸಿದರು. ಹಿರಿಯ ಮುಖಂಡ ಚಿಕ್ಕನಾಗಪ್ಪ, ಜಿಪಂ ಸದಸ್ಯೆ ರೇಖಾ ಅಂಜನೇಯಲು, ತಾಪಂ ಉಪಾಧ್ಯಕ್ಷ ಗೋವಿಂದಪ್ಪ, ತಹಸೀಲ್ದಾರ್ ಆಲಾಪ್ತ್ ಪಾಷ, ಇಒ ರಂಗನಾಥ್, ಪುರಸಭೆ ಮುಖ್ಯಾಧಿಕಾರಿ ರಂಗಸಾಮಯ್ಯ, ಜಿಪಂ ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ ಉಪಸ್ಥಿತರಿದ್ದರು.
ಕುಡಿಯುವ ನೀರು ಹಾಗೂ ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಗ್ರಾಮೀಣ ಸಮಸ್ಯೆ ಬಗ್ಗೆ ಕೂಡಲೇ ಗಮನಕ್ಕೆ ತನ್ನಿ. ಇಲಾಖೆಗೆ ಅಧಿಕಾರಿಗಳ ಸದಾ ಗೈರು, ಯೋಜನೆಗಳ ಸಮರ್ಪಕ ಬಳಕೆ ಸೇರಿದಂತೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಪ್ರತಿ ಕೆಲಸದ ಮೇಲೆ ನಿಗಾ ವಹಿಸಲಾಗಿದೆ. ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶವಿಲ್ಲ
- ಕೆ.ಎಂ. ತಿಮ್ಮರಾಯಪ್ಪ, ಶಾಸಕರು