ಬೇರುಸಮೇತ ಸಾಮಾಜಿಕ ಪಿಡುಗು ಕಿತ್ತುಹಾಕಿ: ಅಮೀರ್ ಪಾಷ
ಕ.ಪ್ರ.ವಾರ್ತೆ ತಿಪಟೂರು ಆ. 31
ಜಾತೀಯತೆ ಮನುಕುಲದ ಬಹುದೊಡ್ಡ ಶಾಪ. ಅದನ್ನು ತೊಡೆದು ಹಾಕಿ ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಶಿಕ್ಷಣ ತಜ್ಞ ಸೈಯದ್ ಅಮೀರ್ ಪಾಷ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ವೇದಿಕೆ, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಯುವ ರೆಡ್‌ಕ್ರಾಸ್, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರ ಹಾಗೂ ರಾಜ್ಯ ನಮಗೆ ಎಲ್ಲವನ್ನೂ ನೀಡಿದ್ದು, ಆದ್ದರಿಂದ ಅದರ ಋಣ ತೀರಿಸುವುದು ಎಲ್ಲರ ಕರ್ತವ್ಯ. ಬಡತನ, ಅನಕ್ಷರತೆ, ಕೋಮುಗಲಭೆ ಈ ರಾಷ್ಟ್ರದ ಬಹುದೊಡ್ಡ ಸಾಮಾಜಿಕ ಪಿಡುಗಳಾಗಿದ್ದು,ಅದನ್ನು ರಾಷ್ಟ್ರದಿಂದ ಬೇರುಸಮೇತ ಕಿತ್ತುಹಾಕಲು ಪ್ರತಿಯೊಬ್ಬ ಯುವಕ- ಯುವತಿಯರು ಕಂಕಣಬದ್ಧರಾಗಬೇಕು. ಇಂದಿನ ಯುವಕರೆ ರಾಷ್ಟ್ರದ ಭವಿಷ್ಯ ಎಂದರು.
ಹಾಸ್ಯ ಸಾಹಿತಿ ತುರುವೇಕೆರೆ ಪ್ರಸಾದ್ ಮಾತನಾಡಿ, ಯುವಕರು ಶಿಕ್ಷಣದ ಜೊತೆಗೆ ಸಮಾಜದ ಅಂಕು- ಡೊಂಕು ಸರಿಪಡಿಸುವ ಮಹತ್ತರ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಪಠ್ಯ ಕಲಿಕೆಯಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲವಾದ್ದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ ಮತ್ತು ಇತರೆ ಕ್ಷೇತ್ರಗಲ್ಲಿ ತೊಡಗಿಸುವುದನ್ನು ರೂಢಿಸಿಕೊಳ್ಳಬೇಕೆಂದರು ಕರೆ ನೀಡಿದರು.
ಅಧ್ಯಕ್ಷತೆಯನ್ನು ಶಿವಸ್ವಾಮಿ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಸೈಯದ್ ಮುಷ್ತಾಕ್ ಅಹಮದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಹಾಗೂ ಶಿಕ್ಷಣ ತಜ್ಞ ಸೈಯದ್ ಅಮೀರ್ ಪಾಷ ಹಾಗೂ ಹಾಸ್ಯ ಸಾಹಿತಿ ತುರುವೇಕೆರೆ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಜಿ ಕಾರ್ಯದರ್ಶಿ ಎಂ.ಚಂದ್ರಶೇಖರ್, ಖಜಾಂಚಿ ವಿಶ್ವನಾಥ್ ಮತ್ತಿತರಿದ್ದರು.