ಸಿಲಿಂಡರ್ ಸಬ್ಸಿಡಿಗೆ ಆಧಾರ್ವೇಕೆ?
ಎಲ್ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯವಲ್ಲವೆಂದು ಕೇಂದ್ರ ಸಚಿವರೂ ಹೇಳಿದ್ದರೂ ಮುಗಿಯದ ಗೊಂದಲ
-ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ.ವಾರ್ತೆ ತುಮಕೂರು ಆ.31
ಆಧಾರ್ ಪೈಲಟ್ ಪ್ರಾಜೆಕ್ಟ್ ಯೋಜನೆಯಡಿ ಆಯ್ಕೆಯಾದ ತುಮಕೂರು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಆಧಾರ್ ನಂಬರ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಆಧಾರ್ ಪ್ರಕ್ರಿಯೆ ಮಾತ್ರ ಇನ್ನೂ ಮುಗಿದಿಲ್ಲ. ಗೊಂದಲಗಳಿಗೆ ತೆರೆ ಎಳೆದಿಲ್ಲ.
ಸಮಗ್ರ ಆಧಾರ್ ಮಾಹಿತಿ ಕುರಿತಂತೆ ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಈವರೆಗೆ ಬಾಯ್ಬಿಟ್ಟಿಲ್ಲ. ಜನತೆ ಆತಂಕ ತಪ್ಪಿಲ್ಲ. ಗ್ಯಾಸ್ ಸಬ್ಸಿಡಿಗೆ ಆಧಾರ್ ನೀಡಲು ಆ. 31 ಕಡೆಯ ದಿನಾಂಕ ಎಂದು ಈಗಾಗಲೇ ಸರ್ಕಾರ ಘೋಷಿಸಿದೆ. ಆದರೆ, ಆಧಾರ್ ಸುಗಮವಾಗಿ ಪಡೆಯಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಲ್ಲದಿರುವುದು ಮಾತ್ರ ಕಣ್ಣಿಗೆ ರಾಚುತ್ತಿದೆ.
ಹೇಳಿಕೆಗೆ ಬೆಲೆಯಿಲ್ಲವೇ?: ಎಲ್ಪಿಜಿ ಸಬ್ಸಿಡಿ ಕುರಿತಂತೆ ಕೇಂದ್ರ ಯುಪಿಎ ಸರ್ಕಾರ ಈಗಾಗಲೇ ದ್ವಂದ್ವ ನಿಲುವು ಪ್ರದರ್ಶಿಸಿರುವುದು ಗೋಚರಿಸಿದೆ. ಕೇಂದ್ರ ಯುಪಿಎ ಸರ್ಕಾರದ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜೀವ್ ಶುಕ್ಲಾ, ಗ್ಯಾಸ್ ಸೇರಿದಂತೆ ಸರ್ಕಾರದ ಯಾವುದೇ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿರುವುದು ಈಗಾಗಲೇ ಆ. 24 ರ ಕನ್ನಡಪ್ರಭ ಸೇರಿದಂತೆ ದಿನಪತ್ರಿಕೆಗಳಲ್ಲಿ ವರದಿಯಾಗಿದೆ.
ಯಾವುದಾದರೂ ಸರ್ಕಾರಿ ಸಂಸ್ಥೆಗಳು ಆಧಾರ್ ಅಥವಾ ಆಧಾರ್ ಲಿಂಕ್ ಬ್ಯಾಂಕ್ ಖಾತೆ ಕೇಳುತ್ತಿದ್ದರೆ ಅದನ್ನು ನಾವು ಸರಿಪಡಿಸುತ್ತೇವೆ ಎಂದು ರಾಜ್ಯಸಭೆಯಲ್ಲಿ ಕೇರಳದ ಸಿಪಿಐ(ಎಂ) ಸಂಸದ ಅಚ್ಯುತನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಮೇಲಿನಂತೆ ಭರವಸೆ ನೀಡಿದ್ದಾರೆ.
ಸಮನ್ವಯ ಕೊರತೆ: ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರ ಗಮನಕ್ಕೆ ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಮೇಲಿನಂತೆ ಮಾತನಾಡಿರುವ ವಿಷಯವನ್ನು ಪತ್ರಿಕೆ ಮುಂದಿಟ್ಟು ತಿಳಿಸಲಾಯಿತು. ಕೂಡಲೇ ಕೇಂದ್ರಕ್ಕೆ ಪತ್ರ ಬರೆದು ಮಾಹಿತಿ ಪಡೆಯುವುದಾಗಿಯೂ, ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಜಯಚಂದ್ರ 6 ದಿನಗಳೇ ಕಳೆದಿವೆ. ಈವರೆಗೆ ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಂದ ಯಾವುದೇ ಉತ್ತರವೂ ಇಲ್ಲ. ಮಾಹಿತಿಯೂ ಇಲ್ಲ. ಇದೊಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಒಂದೇ ಪಕ್ಷದ ನೇತೃತ್ವದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಗೊಂದಲ ಬಗೆಹರಿಯದೇ ಇರುವುದಕ್ಕೆ ಅತ್ಯುತ್ತಮ ಉದಾಹರಣೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸಮನ್ವಯ ಕೊರತೆ ಕಂಡು ಬಂದಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ಸುಳ್ಳು ಹೆಗ್ಗಳಿಕೆ: ಒಂದೂವರೆ ವರ್ಷದ ಹಿಂದೆಯೇ ಜಿಲ್ಲೆಯಲ್ಲಿ ಶೇ. 95 ರಷ್ಟು ಆಧಾರ್ ನೋಂದಣಿಯಾಗಿದೆ ಎಂಬ ಹೆಗ್ಗಳಿಕೆಯೇ ಸುಳ್ಳು ಎಂಬುದು ಜನತೆ ಆಧಾರ್ ನೋಂದಣಿ ಕೇಂದ್ರದ ಬಳಿ ಕ್ಯೂನಲ್ಲಿ ಪರದಾಡುತ್ತಿರುವುದು ಸಾಕ್ಷಿ. ಜಿಲ್ಲಾಡಳಿತ ಆಧಾರ್ಗೆ ಯಾವ ರೀತಿ ವ್ಯವಸ್ಥೆ ಮಾಡಿದೆ ಎಂಬುದಕ್ಕೆ ಉದಾಹರಣೆ. ಹೆಚ್ಚುವರಿ ಆಧಾರ್ ಕೇಂದ್ರ ತೆರೆಯದೆ ಜನತೆಯನ್ನು ಗೋಳು ಹೊಯ್ದುಕೊಂಡಿರುವ ಸರ್ಕಾರದ ಬೇಜವಾಬ್ದಾರಿಗೆ ಜನತೆ ಬಲಿಪಶುಗಳಾಗಿದ್ದಾರೆ.
ಸಿಲಿಂಡರ್ ಸಬ್ಸಿಡಿಗೆ ಆಧಾರ್ ನೋಂದಣಿ ಕಡ್ಡಾಯವಾಗಿದೆ. ಸಬ್ಸಿಡಿ ಪಡೆಯಲು ಆ. 31 ಕಡೆಯ ದಿನಾಂಕವಾಗಿದೆ. ಆ. 31 ರೊಳಗೆ ಆಧಾರ್ ನಂ. ಪಡೆಯಲು ಆಗದೆ, ಒಂದು ವೇಳೆ ಪಡೆದಿದ್ದರೂ ಬ್ಯಾಂಕ್ ಸೀಡಿಂಗ್ ಮಾಡಲಾಗದೆ ಇರುವ ಗ್ರಾಹಕರು ಆ.31 ರ ನಂತರ ಮಾರುಕಟ್ಟೆ ದರದಲ್ಲೇ ಅಂದರೆ 900 ಚಿಲ್ಲರೆ ಹಣ ನೀಡಿ ಸಿಲಿಂಡರ್ ಪಡೆಯುವುದು ಅನಿವಾರ್ಯ.
ಶೇ.70ಕ್ಕಿಂತ ಹೆಚ್ಚು ಸೀಡಿಂಗ್: ಗ್ಯಾಸ್ ಸಬ್ಸಿಡಿ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಶೇ. 70 ಕ್ಕಿಂತಲೂ ಹೆಚ್ಚು ಆಧಾರ್ ಸೀಡಿಂಗ್ ಆಗಿದೆ. ಜಿಲ್ಲೆಯಲ್ಲಿ 2.59 ಲಕ್ಷ ಎಲ್ಪಿಜಿ ಗ್ರಾಹಕರಿದ್ದು, ಇವರಲ್ಲಿ 2.01 ಲಕ್ಷ ಗ್ಯಾಸ್ ಏಜೆನ್ಸಿಯಲ್ಲಿ ಸೀಡಿಂಗ್ ಮಾಡಿಸಿದ್ದಾರೆ.
ಆದರೆ, ಇವರಲ್ಲಿ ಬ್ಯಾಂಕ್ ಖಾತೆ ಸೀಡಿಂಗ್ ಮಾಡಿಸಿರುವವರ ಸಂಖ್ಯೆ 1.45 ಲಕ್ಷ ಮಂದಿ ಮಾತ್ರ. ಈ ಅಂಕಿ- ಅಂಶಗಳೂ ಒಂದು ವಾರ ಹಳೆಯವು. ನಾನಾ ಕಾರಣಗಳಿಂದಾಗಿ ಸಾವಿರಾರು ಮಂದಿ ಎಲ್ಪಿಜಿ ಗ್ರಾಹಕರಿಗೆ ಬ್ಯಾಂಕ್ ಸೀಡಿಂಗ್ ಆಗಿಲ್ಲ. ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಸಹಕರಿಸುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ.
90 ಕೇಂದ್ರ ತೆರೆಯಲೇ ಇಲ್ಲ
ತುಮಕೂರು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಮಾತಿಗೆ ಕೊನೆಗೂ ಜಿಲ್ಲಾಡಳಿತ ಬೆಲೆ ಕೊಡಲಿಲ್ಲ. 90 ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರ ತೆರೆಯಲೇ ಇಲ್ಲ. ಸಾಮಾನ್ಯರ ಸಮಸ್ಯೆ ನೀಗಿಸಲೇ ಇಲ್ಲ ಎಂಬುದು ಸಾಬೀತಾಗಿದೆ.