ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅತಿ ಮುಖ್ಯ
ಕನ್ನಡಪ್ರಭ ವಾರ್ತೆಹಾಸನಆ. 31
ಸ್ವರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಕ್ಕಾಗಿ ಇಂಗ್ಲಿಷ್ ಕಲಿಯುವ ಅವಶ್ಯಕತೆ ಇದೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಆಂಗ್ಲ ಭಾಷಾ ಪ್ರಾಂಶುಪಾಲರು, ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಆಂಗ್ಲ ಭಾಷೆಗೆ ಒತ್ತು ನೀಡದೆ ಇರುವ ಸರ್ಕಾರಿ ಶಾಲೆಯನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಕನ್ನಡ ನಾಡಲ್ಲಿ ಹುಟ್ಟಿದರೂ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಕ್ಕಾಗಿ ಇತರೆ ಭಾಷೆಯನ್ನು ಕಲಿಯುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಅನೇಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಷ್ಟಸಾಧ್ಯವಾಗಿದ್ದು, ಪಾಸ್ ಮಾಡಲು ಹರಸಾಹಸ ಮಾಡುವ ಪ್ರವೃತ್ತಿ ಇಂದಿಗೂ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಭಾರತದಲ್ಲಿ ಏಕರೂಪ ಶಿಕ್ಷಣಕ್ಕಾಗಿ ಪ್ರಯೋಗ ನಡೆದಿದೆ ಎಂದು ತಿಳಿಸಿದರು.
ಹೊಸ ಪಠ್ಯಕ್ರಮ ಬೋಧನೆ ಜಾರಿಗೆ ತರುವ ಮೊದಲು ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಿದ್ಧತೆ ಆಗಬೇಕು. ಹೊಸ ಅಧ್ಯಯನಕ್ಕೆ ಅನುಭವದ ಅವಶ್ಯಕತೆ ಇದೆ. ಯಾವ ರೀತಿ ಬೋಧನೆ ಮಾಡಬೇಕು ಎಲ್ಲವನ್ನೂ ತಿಳಿಸುವಲ್ಲಿ ಸರ್ಕಾರ ಮೊದಲು ನಿರ್ಧರಿಸುವುದು ಉತ್ತಮ.
ಇದೇ ವಿಚಾರವಾಗಿ ಸದನದಲ್ಲಿ ಅನೇಕ ಬಾರಿ ಗಮನ ಸೆಳೆಯಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿಕೊಡುವುದು. ಇಂತಹ ವೇಳೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಕಷ್ಟಕರವಾಗಬಹುದು. ಹೊಸ ಪಠ್ಯಕ್ರಮ ಬಂದಾಗ ಮೊದಲು ತರಬೇತಿ ನೀಡುವುದು ಮುಖ್ಯ ಎಂದರು.
ಆಂಗ್ಲ ಭಾಷೆ ಚೆನ್ನಾಗಿ ಮಾತನಾಡಲು ಹಾಗೂ ಬರೆಯಲು ಬರದಿದ್ದರೆ ಯಾವ ಪರೀಕ್ಷೆಯನ್ನು ಎದುರಿಸಲು ಆಗದೆ ಆತನ ಬದುಕು ಶೂನ್ಯ ಆಗುತ್ತದೆ ಎಂದು ಹೇಳಿದರು. ಇದೇ ವೇಳೆ ಕುಮಾರಯ್ಯನವರ ಪಿಯುಸಿ ಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಮಾಡಲಾಯಿತು.
ಮಹಾಲಕ್ಷ್ಮಿ ವಿದ್ಯಾಸಂಸ್ಥೆ ಅಧ್ಯಕ್ಷ ಎಲ್.ಬಿ. ಸಿದ್ಧೇಗೌಡ, ಕೀ ನೋಟ್ ಅಡ್ರಸ್ ಸಂಘದ ಅಧ್ಯಕ್ಷ ಕೆ.ಆರ್. ಪರಮೇಶ್, ಉದಯ ಭಾರತಿ ವಿದ್ಯಾ ಸಂಸ್ಥೆಯ ಪ್ರವೀಣ್, ಎನ್.ಪಿ. ನಾಗರಾಜ್, ಕನೀಜಫಾತೀಮ ಆಂಗ್ಲ ಭಾಷಾ ಉಪನ್ಯಾಸಕರು ಮೊದಲಾದವರು ಇದ್ದರು. ಕಾರ್ಯದರ್ಶಿ ವೈ.ಎಸ್. ಸಿದ್ಧೇಗೌಡ ಸ್ವಾಗತಿಸಿದರು.