ಏಡ್ಸ್ ಮಹಾ ಅಪಾಯಕಾರಿ: ಶ್ರೀನಿವಾಸ್
ತಿಪಟೂರು: ಜಗತ್ತಿನಲ್ಲಿ ಹಲವು ಮಾರಣಾಂತಿಕ ರೋಗಗಳು ಇದ್ದರೂ ಸಾವಿನ ದವಡೆಗೆ ತಳ್ಳಲ್ಪಡುವ ಭಯಾನಕ ರೋಗವೇ ಏಡ್ಸ್ ಎಂದು ತಾಲೂಕು ಕ್ಷೇತ್ರ ವೈದ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಎಸ್.ವಿ.ಪಿ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ರೆಡ್ ರಿಬ್ಬನ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಏಡ್ಸ್ ರೋಗದ ಅರಿವು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾತನಾಡಿದ ಅವರು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಉಂಟಾಗುವ ಈ ಕಾಯಿಲೆ ಮನುಷ್ಯನನ್ನು ಜೀವಂತ ಶವವನ್ನಾಗಿಸುತ್ತದೆ.
ಅವರಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹಂತಹಂತವಾಗಿ ಕುಂಠಿತಗೊಳಿಸುತ್ತದೆ. ಅಂತಹ ರೋಗಿಗಳನ್ನು ನಾವೆಲ್ಲರೂ ಅಸ್ಪೃಶ್ಯರಂತೆ ನೋಡದೆ ಸಮಾಧಾನದ ಮಾತುಗಳಿಂದ ಅವರಿಗೆ ಧೈರ್ಯ ತುಂಬಬೇಕು ಎಂದರು.
ಉಪನ್ಯಾಸಕ ಕೆ.ಎನ್.ರೇಣುಕಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹದಿರೆಯದವರು ಜಾರುವ ಮನಸ್ಸುಗಳನ್ನು ಹತೋಟಿಯಲ್ಲಿಟ್ಟುಕೊಂಡು ವಿವೇಚನೆಯಿಂದ ವರ್ತಿಸಿ ನಡೆದುಕೊಳ್ಳಬೇಕು. ಆಯತಪ್ಪಿ ಲೈಂಗಿಕ ಸುಖಗಳಿಗೆ ಮನಸೋತರೆ ಅವರ ಆಯಸ್ಸು ಕೂಡ ಅಷ್ಟೇ ಬೇಗ ಕಡಿಮೆಯಾಗಿ ಜೀವನದಲ್ಲಿ ಅಂತ್ಯಹೊಂದುತ್ತಾರೆ. ಅಪಾರ ಆತ್ಮವಿಶ್ವಾಸ ತುಂಬಿಕೊಂಡು ದೃಢವಾದ ಸಂಕಲ್ಪದಿಂದ ಮುನ್ನೆಡೆದರೆ ಬದುಕು ಬಂಗಾರವಾದುತ್ತದೆ ಎಂದರು.
ಉಪನ್ಯಾಸಕರಾದದ ವಿ.ಆರ್. ಅಂಗಡಿ, ಎ.ಅರುಣ್ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕಾವ್ಯ ಮತ್ತು ಲೀಲಾ ಪ್ರಾರ್ಥಿಸಿ, ಭೂಮಿಕಾ ಸ್ವಾಗತಿಸಿ, ವಂದಿಸಿದರು.