ಜಿಲ್ಲಾದ್ಯಂತ ಒಡೆಯರ್‌ಗೆ ಶ್ರದ್ಧಾಂಜಲಿ
ತುಮಕೂರು: ಮೈಸೂರು ರಾಜಮನೆತನದ ಕೊನೆಯ ಕೊಂಡಿಯಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಕೆಜೆಪಿ ಪಕ್ಷದ ಕಚೇರಿಯಲ್ಲಿ ಮಂಗಳವಾರ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಎರಡು ನಿಮಿಷಗಳ ಮೌನದ ನಂತರ ಕೆ.ಜೆ.ಪಿ.ಪಕ್ಷದ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಮಾತನಾಡಿ, ರಾಜ್ಯಕ್ಕೆ ಮೈಸೂರು ರಾಜರ ಕೊಡುಗೆ ಆಪಾರವಾಗಿದೆ. ರಾಜಮನೆತನದ ಕಾಲದಲ್ಲಿ, ಬ್ರಿಟೀಷ್ ಅಳ್ವಿಕೆಯಲ್ಲಿ, ಸ್ವತಂತ್ರ್ಯ ಭಾರತದಲ್ಲಿಯೂ ಮೈಸೂರು ಪ್ರಾಂತ್ಯವನ್ನು ಆಳುತ್ತಿದ್ದ ಯದುವಂಶದ ದೊರೆಗಳು ತಮ್ಮ ತನು, ಮನ, ಧನವನ್ನು ನಾಡಿನ ಜನರ ಏಳಿಗೆಗಾಗಿ ಅರ್ಪಿಸುವ ಮೂಲಕ ನಾಡನ್ನು ಸಂವೃದ್ಧಗೊಳಿಸಿದ್ದಾರೆ ಎಂದರು.
ಇಂತಹ ವಂಶದ ಕೊನೆಯ ಕೊಂಡಿ ಹಠಾತ್ ನಿಧನರಾಗಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ಇವರ ಆತ್ಮಕ್ಕೆ ಶಾಂತಿ ದೊರೆಯಲಿ, ಕುಟುಂಬಕ್ಕೆ ಇವರ ಸಾವಿನ ನೋವು ಭರಿಸುವಂತಹ ಶಕ್ತಿ ದೊರೆಯಲಿ ಎಂದು ತಿಳಿಸಿದರು.
ಕೊಡುಗೆ ಅಪಾರ: ಕೆಜೆಪಿ ಯುವ ಮುಖಂಡ ಜ್ಯೋತಿ ಗಣೇಶ್ ಮಾತನಾಡಿ, ಮೈಸೂರು ಪ್ರಾಂತ್ಯ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಬೆಳವಣಿಗೆ ಹೊಂದಲು ರಾಜಮನೆತನದ ಕೊಡುಗೆ ಆಪಾರವಾಗಿದೆ. ಮೀಸಲಾತಿಯ ಮೂಲಕ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಸರಕಾರಿ ಸವಲತ್ತುಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ನಾಂದಿ ಹಾಡಿದ್ದ ಮೈಸೂರು ರಾಜವಂಶಸ್ಥರು, ತಮ್ಮ ಕುಟುಂಬದ ಚಿನ್ನಾಭರಣಗಳನ್ನು ಅಡವಿಟ್ಟು ಕನ್ನಂಬಾಡಿಯ ಬಳಿ ಕಾವೇರಿಗೆ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಿಸುವ ಮೂಲಕ ಆ ಭಾಗದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಉನ್ನತ್ತೀಕರಣಕ್ಕೆ ನೆರವು ನೀಡಿದ್ದರು ಎಂದರು.
ವಿಶ್ವವಿಖ್ಯಾತ ದಸರಾ ಉತ್ಸವದ ಮೂಲಕ ಇಡೀ ದೇಶ ಕರ್ನಾಟಕದ ಕಡೆ ನೋಡುವಂತೆ ಮಾಡಿದ ಕೀರ್ತಿ ರಾಜಮನೆತನಕ್ಕೆ ಸೇರುತ್ತದೆ. ಇಂತಹವರ ಹಠಾತ್ ನಿಧನದಿಂದ ನಾಡು ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದರು. ರಂಗಾನಾಯ್ಕ್, ಸದಾಶಿವಯ್ಯ, ಧನಿಯಕುಮಾರ್, ಡಿ.ಗಂಗರಾಜು, ಹನುಮಂತರಾಜು, ವಿಷ್ಣು, ,ವಿರೂಪಾಕ್ಷ, ಭೋಜರಾಜ್, ಲಿಂಗಪ್ಪ, ನಂದೀನಾಥ್, ಚಂದ್ರಶೇಖರ್, ಶಂಭುಲಿಂಗಸ್ವಾಮಿ, ಬಿ.ಎನ್. ರಾಧ ಗಂಗಾಧರ್, ನಗರಸಭಾ ಸದಸ್ಯರಾದ ಕರುಣಾರಾಧ್ಯ, ಇಂದ್ರಕುಮಾರ್, ವೆಂಕಟೇಶ್, ಕೆ.ಜೆ.ಪಿ.ಮುಖಂಡರಾದ ರುದ್ರೇಶ್, ಶಂಕರ್, ಕೈಲಾಸ್, ಪ್ರೀತಂ, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.
ಬೋರನಕಣಿವೆ ಜಲಾಶಯ ನೆನೆಪಿಸಿದ ಪುರಸಭೆ ಸದಸ್ಯ
ಚಿಕ್ಕನಾಯಕನಹಳ್ಳಿ: ಮೈಸೂರು ರಾಜರು ತಮ್ಮ ಆಡಳಿತಕಾಲದಲ್ಲಿ ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು ಎಂಬುದಕ್ಕೆ ಅವರ ಕಾಲದಲ್ಲಿ ನಿರ್ಮಾಣವಾದ ತಾಲೂಕಿನ ಅತಿದೊಡ್ಡ ಜಲಾಶಯವಾದ ಬೋರನಕಣಿವೆ ಸಾಕ್ಷಿ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ನುಡಿದರು.
ಬುಧವಾರ ಅವರು ಪುರಸಭೆಯಲ್ಲಿ ಏರ್ಪಡಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ದಕ್ಷಿಣ ಆಫ್ರಿಕಾದ ನೆಲ್ಸನ್ ಮಡೇಲಾರ ನಿಧನಕ್ಕೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮೂಲಭೂತ ಸಮಸ್ಯೆಗಳಾದ ನೀರಾವರಿ, ವಿದ್ಯುತ್, ಬ್ಯಾಂಕಿಗ್ ವ್ಯವಸ್ಥೆಗಳನ್ನು ಜಾರಿಗೆ ತರುವ ಮೂಲಕ ತಮ್ಮ ಜನಪರ ಕಾಳಜಿಗೆ ಒಡೆಯರ್ ಸಾಕ್ಷಿಯಾಗಿಸಿದ್ದಾರೆ. ಇಂತಹ ಜನೋಪಯೋಗಿ ಕಾರ್ಯಗಳನ್ನು ಅವರು ಎಂದೂ ತಮ್ಮ ಸ್ವಾರ್ಥಕ್ಕೆ ಉಪಯೋಗಿಸದೆ ಸಮಾಜಕ್ಕೆ ಅರ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂತೆಯೇ ತಾಲೂಕಿನ ಬೋರನಕಣಿವೆ ಮತ್ತು ಹೊಸದುರ್ಗ ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಗಳನ್ನು ನಿರ್ಮಿಸುವ ಮೂಲಕ ತಾವು ಪ್ರಗತಿಪರರಾಗಿ ಚಿಂತಿಸುವುದನ್ನು ದೃಢಪಡಿಸಿದರು ಎಂದರು. ಇದೇ ರೀತಿ ಸಮಾಜಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಮತ್ತೋರ್ವ ಧೀಮಂತ ವ್ಯಕ್ತಿ ದಕ್ಷಿಣ ಆಫ್ರಿಕಾದ ನೇಲ್ಸನ್ ಮಂಡೇಲಾ ಅವರು. ವರ್ಣಭೇದ ನೀತಿಯ ವಿರುದ್ಧ ಹೋರಾಟದ ಪರಿಣಾಮ ಸತತ 28 ವರ್ಷಗಳ ಕಾಲ ಸೆರಮನೆ ವಾಸ ಅನುಭವಿಸಿ, ದೇಶಕ್ಕೆ ಪ್ರಜಾಪ್ರಭುತ್ವ ಆಡಳಿತ ತಂದುಕೊಡುವಲ್ಲಿ ಯಶಸ್ವಿಯಾದರು.ಪ್ರಜಾಪ್ರಭುತ್ವದಡಿಯಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ದೇಶದ ಮೊದಲ ಕರಿಯ ಜನಾಂಗದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಿದ ವ್ಯಕ್ತಿಯಾದರು ಎಂದರು.