ಮೌಢ್ಯದ ಹೆಸರಲ್ಲಿ ಮಾನವ ಹಕ್ಕು ಉಲ್ಲಂಘನೆ
ಕ.ಪ್ರ.ವಾರ್ತೆ ತುಮಕೂರು ಡಿ. 11
ಮೌಢ್ಯ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕೆಳಜಾತಿ ಮಹಿಳೆಯರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಚಿಂತಕ ಪ್ರೊ. ಕೆ. ದೊರೈರಾಜು ಆತಂಕ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನದ ಅಂಗವಾಗಿ ಮಾನವ ಹಕ್ಕುಗಳು ಮತ್ತು ಮಹಿಳೆಯರ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನವ ಹಕ್ಕುಗಳನ್ನು ಹುಟ್ಟಿನಿಂದಲೇ ಪ್ರಕೃತಿ ದತ್ತವಾಗಿ ಪಡೆದುಕೊಂಡಿರುತ್ತಾನೆ. ಅವುಗಳಿಗೆ ಸಂವಿಧಾನ ಮತ್ತು ಕಾನೂನಿನ ಮನ್ನಣೆಯಿದೆ. ಕಾನೂನಿನನ್ವಯ ಎಲ್ಲರೂ ಸಮಾನರು. ಆದರೆ ಸರ್ಕಾರ ಮತ್ತು ಪ್ರಭುತ್ವಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ಅಂತಹ ಸರ್ಕಾರವೇ ಔಪಚಾರಿಕವಾಗಿ ಮಾನವ ಹಕ್ಕುಗಳ ದಿನಾಚರಣೆಯನ್ನು ಮಾಡುತ್ತಿರುವುದು ನಾಮ್ ಕೇ ವಾಸ್ಥೆ ಮತ್ತು ಹಾಸ್ಯಾಸ್ಪದವೇ ಆಗಿದೆ ಎಂದರು.
ಸಮಾಜದಲ್ಲಿ ಮಹಿಳೆಯರು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಹೆಚ್ಚು ಮಾನವ ಹಕ್ಕುಗಳಿಂದ ವಂಚನೆಗೆ ಒಳಗಾಗಿದ್ದಾರೆ. ಅದರಲ್ಲೂ ಕೆಳಜಾತಿ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿಯೂ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಮಹಿಳೆಯರನ್ನು ಹಕ್ಕುಗಳಿಂದ ವಂಚಿಸಲಾಗುತ್ತಿದೆ. ಮಹಿಳೆಯರಲ್ಲಿ ಅನಕ್ಷರತೆ ಮತ್ತು ಮೌಢ್ಯತೆಯೂ ಹಿಂದುಳಿಯುವಿಕೆಗೆ ಕಾರಣವಾಗಿದೆ. ಆದ್ದರಿಂದ ಶಿಕ್ಷಿತರಾಗಿ ವೈಚಾರಿಕ ಮನೋಭಾವವನ್ನು ಬೆಳೆಸಿಕೊಂಡು, ಸಂಘಟಿತ ಹೋರಾಟದ ಮೂಲಕ ನಮ್ಮ ವಿಮೋಚನೆಯನ್ನು ಕಂಡುಕೊಳ್ಳಬೇಕೆಂದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಡಾ. ಅರುಂಧತಿ ಅವರು ಇಂದು ಸನಾತನ ಹಿಂದೂ ಧರ್ಮ ಆಚರಣೆ ಮತ್ತು ಲಿಂಗ ಅಸಮಾನತೆಯಿಂದ ಮಹಿಳೆಯರಿಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.
ಪ್ರತಿ ಪ್ರಜೆಗೂ ಆರೋಗ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಆದ್ದರಿಂದ ನಾವು ಎತ್ತೆಚ್ಚ ಮಹಿಳೆರಿಂದಲೇ ಮಾನವ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದೆಂದರು.
ತಾರತಮ್ಯ: ಮಾನವ ಹಕ್ಕುಗಳ ಮತ್ತು ಮಹಿಳೆಯರು ವಿಷಯವನ್ನು ಕುರಿತು ಮಾತನಾಡಿದ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು ಇಂದು ಅಸಂಘಟಿತ ವಲಯದಲ್ಲಿ, ದೇಶದಲ್ಲಿ 90 ಇದರಲ್ಲಿ ಶೇ.50 ರಷ್ಟು ಹೆಣ್ಣು ಮಕ್ಕಳಿದ್ದೂ ಸಹಜವಾಗಿ ಲಿಂಗಾಧಾರಿತವಾಗಿ ಕೂಲಿ, ವೇತನವನ್ನು ನಿಗದಿಪಡಿಸಲಾಗುತ್ತಿದ್ದು-ತಾರತಮ್ಯವನ್ನು ಆಚರಿಸಲಾಗುತ್ತಿದೆ.
ಗುತ್ತಿಗೆ ಪೌರಕಾರ್ಮಿಕ ಮಹಿಳೆಯರು ಮತ್ತು ಮನೆಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಹೆಣ್ಣುಮಕ್ಕಳು, ಕಟ್ಟಡ ಕಾರ್ಮಿಕರ ಮಹಿಳೆಯರಿಗೆ ಸರ್ಕಾರವೇ ಕನಿಷ್ಠ ವೇತನ ನೀಡದೇ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದರು.
ಕಾರ್ಮಿಕ ಕಾನೂನು ಎಲ್ಲಾ ಇದ್ದರೂ ಬದುಕಲು ಸಾಧ್ಯವಿಲ್ಲದ ಸನ್ನಿವೇಶಗಳಿವೆ. ಅಭಿವೃದ್ಧಿ ಹೆಸರಲ್ಲೂ ವಂಚಿತಸಮುದಾಯಗಳ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸರ್ಕಾರವೇ ಮಾಡುತ್ತಿವೆ ಎಂದು ಆರೋಪಿಸಿದರು.
ವಿಚಾರಸಂಕಿರಣದಲ್ಲಿ ಎ. ನರಸಿಂಹಮೂರ್ತಿ, ಸೈಯದ್ ಅಲ್ತಾಪ್, ರಾಮಕ್ಕ, ಶೆಟ್ಟಾಳಯ್ಯ, ಗಾಯಿತ್ರಿ ರಘು. ಕೋಮಲ, ಶೃತಿ, ಲತಾ ಹಾಗೂ ವಿವಿಧ ಸ್ಲಂಗಳಿಂದ 150 ಮಹಿಳೆಯರು ಭಾಗವಹಿಸಿದ್ದರು.