ಮೌನ ಮೆರವಣಿಗೆ
ತಿಪಟೂರು: ಹೃದಯಾಘಾತದಿಂದ ನಿಧನರಾದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ವಿದ್ಯಾಪೀಠದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಪಟ್ಟಣದ ಹೆದ್ದಾರಿಯಲ್ಲಿ ಮೌನ ಮೆರವಣಿಗೆಯೊಂದಿಗೆ ಸಾಗಿ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಷಡಕ್ಷರಿ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರ ಸಾವು ಇಡೀ ನಾಡಿಗೆ ಆಘಾತವನ್ನುಂಟು ಮಾಡಿದೆ. ಅವರ ಸಾಧನೆ ಅಪಾರ, ಸೇವೆ ಅವೀಸ್ಮರಣೀಯ ಎಂದು
ಸ್ಮರಿಸುತ್ತಾ ಅವರು ಮತ್ತೊಮ್ಮೆ ಅವತರಿಸಲಿ. ಅವರ ಪತ್ನಿ ಹಾಗೂ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದರು.
ಶ್ರೀ ವಿದ್ಯಾಪೀಠದ ಸಂಸ್ಥಾಪಕರಾದ ಎಸ್.ಕೆ. ರಾಜಶೇಖರ್ ಮಾತನಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಜಾಪ್ರಭುತ್ವ ಸರ್ಕಾರದ ಅಸ್ತಿತ್ವಕ್ಕೆ ಕಾರಣಿಭೂತರಾದ ಮೈಸೂರು ಮಹಾಸಂಸ್ಥಾನದ ಒಡೆಯರ ಪ್ರಭುತ್ವದ ಪಾತ್ರ ಮಹತ್ತರವಾದದ್ದು ಎಂದರು.
ಕೆಜೆಪಿ ಮುಖಂಡ ಲೋಕೇಶ್ವರ ಮಾತನಾಡಿದರು. ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಇಡೀ ನಾಡಿಗೆ ಮಹಾರಾಜರ ಕೊಡುಗೆ ಅಪರಿಮಿತವಾದದ್ದು, ಕೃಷಿ, ಕೈಗಾರಿಕೆ, ಶಿಕ್ಷಣ ಅದರಲ್ಲೂ ವಿಶೇಷವಾಗಿ ನೀರಾವರಿ ಪರಿಸರ ಕಾಳಜಿ ಒಡೆಯರ್‌ಗೆ ಬಹುವಾಗಿತ್ತು. ದೀನ ದಲಿತರ, ಹಿಂದುಳಿದವರ ಏಳಿಗೆಗಾಗಿ ಅಪಾರ ಶ್ರಮಿಸಿದ್ದರು. ಸಾಂಸ್ಕೃತಿಕವಾಗಿ ಮೈಸೂರು ಸಂಸ್ಥಾನದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇಂತಹ ಯದುವಂಶದ ಕೊನೆಯ ಕುಡಿ ದರ್ಬಾರ್ ಅನ್ನು ಬಿಟ್ಟು ಅಗಲಿರುವುದು ದುಃಖದ ಸಂಗತಿ ಎಂದರು.
ಈ ಸಂದರ್ಭದಲ್ಲಿ ತರಕಾರಿ ನಾಗರಾಜು, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪರಮಶಿವಯ್ಯ, ಲೋಕೇಶ್, ಸಾಹಿತಿ ಎಂ.ಸಿ. ರಾಮಲಿಂಗಯ್ಯ, ಉಪನ್ಯಾಸ ರೇಣುಕಯ್ಯ, ನಗರಸಭಾ ಸದಸ್ಯರಾದ ಲಿಂಗರಾಜು, ಟಿ.ಎನ್.ಪ್ರಕಾಶ್, ಕಾಂಗ್ರೆಸ್ ಮುಖಂಡ ಶಶಿಧರ್, ಕಿರುತೆರೆ ನಟ ದಯಾನಂದ ಸಾಗರ್ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಿ ಮೌನ ಆಚರಿಸಿ ಆತ್ಮಕ್ಕೆ ಶಾಂತಿ ಕೋರಿದರು.