210 ಬೂತ್ಗಳಲ್ಲಿ ಯುವಕರ ಸಮಿತಿ
ಗುಬ್ಬಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತಗಳ ಅಂತರದಿಂದ ಗೆಲ್ಲಿಸುವ ದೃಷ್ಟಿಯಿಂದ ಗುಬ್ಬಿ ವಿಧಾನ ಸಭಾ ಕ್ಷೇತ್ರದ 210 ಬೂತ್ಗಳಲ್ಲಿ ಯುವಕರ ಸಮಿತಿಗಳನ್ನು ರಚಿಸಿ ಆ ಮೂಲಕ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲಾಗುತ್ತಿದೆ ಎಂದು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಂದ ತಿಳಿಸಿದರು.
ಪಟ್ಟಣ ಪ್ರವಾಸಿಮಂದಿರಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು ಆ ಯೋಜನೆಗಳು ಪ್ರತಿಯೊಬ್ಬ ಮತದಾರರಿಗೂ ತಲುಪುವ ಮಹದುದ್ದೇಶದಿಂದ ಪ್ರತಿ ಬೂತ್ನಲ್ಲಿ 11 ಮಂದಿ ಯುವ ಸದಸ್ಯರನ್ನು ನೇಮಿಸಿ ಮುಂಬರುವ ಲೋಕಸಭಾ ಚುನಾವಣೆಗೆ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಗ್ರಾಮ ಮಟ್ಟದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕಾರ್ಯವನ್ನು ಭರದಿಂದ ಮಾಡಲಾಗುತ್ತಿದೆ ಎಂದರು.
ವಿಶೇಷ ಆದ್ಯತೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ದುಡಿಯುವ ಯುವ ಕಾರ್ಯಕರ್ತರನ್ನು ಗುರುತಿಸುವ ಕಾರ್ಯವನ್ನು ಬೂತ್ ಮಟ್ಟದ ಸಮಿತಿ ರಚನೆಯಲ್ಲಿ ಮಾಡಲಾಗುತ್ತಿದ್ದು ಪಕ್ಷ ಯುವಕರಿಗೆ ವಿಶೇಷ ಆದ್ಯತೆ ನೀಡುತ್ತಿದ್ದು ರಾಜ್ಯ ಸರ್ಕಾರ ವಿಶೇಷವಾಗಿ ಗ್ರಾಮೀಣ ಕಡುಬಡವರಿಗೆ ರೂಪಿಸಿರುವ ಅನ್ನಭಾಗ್ಯ ಯೋಜನೆಯನ್ನು ಅರ್ಹ ಫಲಾನಿಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಗ್ರಾಮೀಣ ಯುವಕರು ಮಹತ್ವದ ಕಾರ್ಯ ಮಾಡಲಿದ್ದಾರೆಂದರು.
ಸಹಕಾರ ಅಗತ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಉದ್ಯೋಗ ಖಾತರಿ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಪಕ್ಷದ ಕಾರ್ಯಕರ್ತರ ಸಹಕಾರ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ ಜತೆಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ ಯೋಜನೆಯ ಸಫಲತೆಗೆ ದುಡಿದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿಗೆ ಶ್ರಮಿಸಿ ಎಂದು ಕರೆ ನೀಡಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಕೆಲಸಗಳು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಪಂಚಾಯಿತಿ ಮತ್ತು ಬೂತ್ ಮಟ್ಟದಲ್ಲಿ ಅಧ್ಯಕ್ಷರ ಆಯ್ಕೆ ಪೂರ್ಣಗೊಳಿಸಲಾಗಿದೆ. ನಮ್ಮಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಹತ್ತಿರದಲ್ಲಿರುವ ಸ್ಥಳೀಯ ಚುಣಾವಣೆಗಳ ಬಗ್ಗೆ ಕೂಡ ಕಾರ್ಯಕರ್ತರು ಚಿಂತಿಸಬೇಕಿದೆ ಎಂದರು.
ಸಮಿತಿ ರಚನೆ: ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಭರತ್ಗೌಡ ಮಾತನಾಡಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ಈಗಾಗಲೇ ಬೂತ್ ಮಟ್ಟದಲ್ಲಿಯುವಕರ ಸಮಿತಿಗಳನ್ನು ರಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಹುತೇಕ ಎಲ್ಲಾ ಚುನಾವಣೆಗಳನ್ನು ಧೈರ್ಯದಿಂದ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದ ಅವರು ಪಕ್ಷದ ಎಲ್ಲಾ ಕಾರ್ಯಕರ್ತರೂ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು. ಪಕ್ಷದ ಮುಖಂಡರಾದ ಬೀರಮಾರನಹಳ್ಳಿ ನರಸೇಗೌಡ, ಚನ್ನಿಗರಾಮಯ್ಯ, ನಿಟ್ಟೂರು ಕೃಷ್ಣಮೂರ್ತಿ, ದೊಡ್ಡಯ್ಯ, ಇಸ್ಮಾಯಿಲ್, ನಾಸಿರುದ್ದೀನ್, ಪೃಥ್ವಿರಾಜ್, ಕುಮಾರ್ ಮುಂತಾದವರು ಉಪಸ್ಥಿತರಿದ್ದರು.