ದೇವರಾಯನದುರ್ಗ ಅರಣ್ಯದಲ್ಲಿ ಸಿಕ್ತಾನ ಹುಲಿರಾಯ
-ಉಗಮ ಶ್ರೀನಿವಾಸ್
ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದ ಸೇರಿದಂತೆ ಕಲ್ಪತರು ಜಿಲ್ಲೆಯಾದ ತುಮಕೂರಿನಲ್ಲಿ ಹರಿದು ಹಂಚಿ ಹೋಗಿರುವ ಅರಣ್ಯದಲ್ಲಿ ಈ ಬಾರಿಯಾದರೂ ಹುಲಿರಾಯ ಪತ್ತೆಯಾಗುತ್ತಾನೆಯೇ?
ದೇಶಾದ್ಯಂತ ಅರಣ್ಯ ಇಲಾಖೆಯವರು ಹುಲಿ ಗಣತಿ ಕಾರ್ಯವನ್ನು ಆರಂಭಿಸಲಿದ್ದು ಇದರ ಭಾಗವಾಗಿ ತುಮಕೂರು ಜಿಲ್ಲೆಯಲ್ಲೂ ಈ ಕಾರ್ಯ ನಡೆಯಲಿದೆ. ಹೀಗಾಗಿ ಈ ಬಾರಿಯಾದರೂ ಹುಲಿರಾಯ ಪತ್ತೆಯಾಗುತ್ತಾನೆಯೇ ಎಂಬ ಜಿಜ್ಞಾಸೆ ಆರಂಭವಾಗಿದೆ.
ಕಳೆದ 2008 ರಲ್ಲಿ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಯಾಗಿತ್ತು. ಅಂದಿನ ವಲಯ ಸಂರಕ್ಷಣಾಧಿಕಾರಿ ಎಂ.ಎನ್. ನಾಯಕ್ ಹಾಗೂ ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ. ಶ್ರೀನಿವಾಸ್ ಹಾಗೂ ಗಾರ್ಡ್ ಕೆ.ಪಿ. ಗಂಗಣ್ಣ ಅವರ ಕಣ್ಣಿಗೆ ತನ್ನ ಮರಿಯೊಂದಿಗೆ ಹುಲಿರಾಯ ಕಾಣಿಸಿಕೊಂಡಿತ್ತು.
ತುಮಕೂರಿನಿಂದ ದೇವರಾಯನದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಊರ್ಡಿಗೆರೆ ರಸ್ತೆ ಬಳಿ ಇರುವ ಅರಣ್ಯದಲ್ಲಿ ಹುಲಿಯೊಂದು ತನ್ನ ಎರಡು ಮರಿಯೊಂದಿಗೆ ಕಾಣಿಸಿಕೊಂಡಿತ್ತು.
2008 ಫೆಬ್ರವರಿ ರಾತ್ರಿ ನಾಯಕ್ ಅವರು ಸಿಬ್ಬಂದಿಯೊಂದಿಗೆ ಕಾರಿನಲ್ಲಿ ಅರಣ್ಯದಲ್ಲಿ ಹೋಗುತ್ತಿದ್ದಾಗ ಎರಡು ಹುಲಿ ಮರಿಗಳು ಕಾಣಿಸಿಕೊಂಡವು. ತಕ್ಷಣ ಕಾರು ನಿಲ್ಲಿಸಿದರು. ಆಗ ಕಾರಿನ ಹಿಂಬದಿಯಿಂದ ಹೆಣ್ಣು ಹುಲಿ ಬಂದು ಆ ಮರಿಗಳನ್ನು ಸೇರಿಕೊಂಡಿತ್ತು ಎನ್ನುತ್ತಾರೆ ನಾಯಕ್.
ದಾಂಡೇಲಿ, ಭದ್ರಾ ಸೇರಿದಂತೆ ರಾಜ್ಯದ ಹಲವಾರು ವೈವಿಧ್ಯಮಯ ಅರಣ್ಯಪ್ರದೇಶದಲ್ಲಿ ಕೆಲಸ ಮಾಡಿರುವ ನಾಯಕ್ ಪ್ರಕಾರ 2008 ರಲ್ಲಿ ಹುಲಿ ಕಾಣಿಸಿಕೊಂಡಿತ್ತು.
ಹೆಜ್ಜೆ ಗುರುತು: ಅಲ್ಲದೇ ಆಗಾಗ ಸ್ಥಳೀಯರು, ಗಾರ್ಡ್ಗಳು ತಮ್ಮ ಕಣ್ಣಿಗೆ ಹುಲಿ ಬಿದ್ದ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದರು. ಇದಕ್ಕೆ ಪುಷ್ಟೀಕರಿಸುವಂತೆ ಆಗಾಗ ಹುಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು ಉಂಟು.
ಈಗಾಗಲೇ ತುಮಕೂರು ಸಮೀಪದ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಹಲವಾರು ವೈವಿಧ್ಯಮಯ ಕಾಡು ಪ್ರಾಣಿಗಳು ಇವೆ. ಈ ಹಿನ್ನೆಲೆಯಲ್ಲಿ ಹುಲಿ ಕೂಡ ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ದೇಶಾದ್ಯಂತ ಹುಲಿ ಮತ್ತು ಇತರೆ ಮಾಂಸಾಹಾರಿ ಪ್ರಾಣಿಗಳ ಗಣಿತಿಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದು, ತುಮಕೂರು ಅರಣ್ಯ ವಿಭಾಗದಲ್ಲಿಯೂ ಸಹ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ವಾದ: ತುಮಕೂರು ಜಿಲ್ಲೆಯಲ್ಲೂ ಸಹ ಹುಲಿ ಗಣತಿ ಕಾರ್ಯ ಕೂಡ ನಡೆದಿಲ್ಲ. ಹುಲಿ ಹೆಜ್ಜೆಗುರುತು ಪತ್ತೆಯಾದಾಗ ಅಧಿಕಾರಿಗಳು ಒಂದಷ್ಟು ಎಚ್ಚರವಹಿಸಿದ್ದು ನಿಜ. ನಾಮದ ಚಿಲುಮೆ ಸುತ್ತಮುತ್ತ ಆಗಾಗ ಚಿರತೆ ಕಾಣಿಸಿಕೊಳ್ಳುವುದು ವಾಡಿಕೆ. ಹಾಗಾಗಿ ರಾತ್ರಿ ವೇಳೆ ಆ ಭಾಗದಲ್ಲಿ ಜನ, ವಾಹನ ಸಂಖ್ಯೆ ಇರುವುದಿಲ್ಲ. ರಾತ್ರಿ ವೇಳೆ ಹುಲಿರಾಯ ಸಂಚರಿಸುತ್ತಾನೆ ಎಂಬುದು ಸ್ಥಳೀಯರ ವಾದವಾಗಿದೆ.
ಈಗಾಗಲೇ ಹುಲಿ ತನ್ನ ಜಾಡನ್ನು ಬದಲಾಯಿಸುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು ದೇವರಾಯನದುರ್ಗ ಅರಣ್ಯದಲ್ಲಿ ಇರಬಹುದು. ಅಥವಾ ಆಗಾಗ ಬಂದು ಹೋಗಬಹುದು ಎಂಬುದು ಕೆಲವರ ವಾದವಾಗಿದೆ.
ಹುಲಿ ಗಣತಿ ಸಂಬಂಧ ಈಗಾಗಲೇ ಇಲಾಖೆಯು ಎಲ್ಲಾ ಅರಣ್ಯ ವೀಕ್ಷಕರು, ಅರಣ್ಯ ರಕ್ಷಕರು, ಉಪವಲಯ ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳಿಗೆ ಮತ್ತು ಆಸಕ್ತ ಸ್ವಯಂ ಸೇವಕರಿಗೆ ತರಬೇತಿಯನ್ನು ಸಹ ನೀಡಲಾಗಿದೆ.
ಹುಲಿ ತನ್ನ ಜಾಡನ್ನು ಬದಲಾಯಿಸುವುದು ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿದೆ. ಅಲ್ಲದೇ ಈ ಹಿಂದೆ ದೇವರಾಯನದುರ್ಗ ಅರಣ್ಯದಲ್ಲಿ ಹುಲಿ ಕಂಡಿರುವುದು ದೃಢಪಟ್ಟಿದೆ. ಅಲ್ಲದೇ ಹುಲಿಯ ಹೆಜ್ಜೆಗುರುತು ಕೂಡ ಪತ್ತೆಯಾಗಿದೆ. ಹೀಗಾಗಿ ಹುಲಿ ಈ ಅರಣ್ಯದಲ್ಲಿ ಇರಬಹುದು. ಅಥವಾ ಬಂದು ಹೋಗಿರುವ ಸಾಧ್ಯತೆಗಳಿವೆ.
-ಟಿವಿಎನ್ ಮೂರ್ತಿ, ಗೌರವ ಅರಣ್ಯ ಪಾಲಕ