ಪ್ರವಚನ ಸಪ್ತಾಹ
ತಿಪಟೂರು: ಪಟ್ಟಣದ ಚಿನ್ಮಯ ಮಿಷನ್ ವತಿಯಿಂದ ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗ ಆಧಾರಿತ ನನ್ನ ಏಳ್ಗೆಗೆ ನಾನೇ ಶಿಲ್ಪಿ ಎಂಬ ಜೀವನ ಮೌಲ್ಯಗಳ ಕುರಿತು ಪ್ರವಚನ ಸಪ್ತಾಹವನ್ನು ಬ್ರಹ್ಮಚಾರಿ ಸುಧರ್ಮ ಚೈತನ್ಯ ರಿಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಶುಕ್ರವಾರದಿಂದ ಡಿ.19ರವರೆಗೆ ಪ್ರತಿದಿನ ಸಂಜೆ 6ರಿಂದ 7.30ರವರೆಗೆ ಏರ್ಪಡಿಸಲಾಗಿದೆ. ಈ ಜ್ಞಾನ ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಚಿನ್ಮಯ ಮಿಷನ್ ಕಾರ್ಯದರ್ಶಿ ಎನ್.ಪ್ರಸಾದ್ ತಿಳಿಸಿದ್ದಾರೆ.
ನಾಳೆ ಹನುಮ ಜಯಂತಿ
ತುಮಕೂರು: ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿ ಡಿ.14 ರಂದು ಹೂವಿನ ಅಲಂಕಾರ ಏರ್ಪಡಿಸಲಾಗಿದೆ. ಸಂಜೆ 6-30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಾಟಾಗಿದೆ. ರಾತ್ರಿ 9 ಕ್ಕೆ ಸಿಡಿಮದ್ದು ಏರ್ಪಡಿಸಲಾಗಿದೆ.
ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಇತಿಹಾಸ ಪ್ರಸಿದ್ಧ ಬೊಮ್ಮರಸನಹಳ್ಳಿ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ 21 ನೇ ವರ್ಷದ ಶ್ರೀಹನುಮಜಯಂತಿ ಮಹೋತ್ಸವವನ್ನು ಡಿ.14 ರಂದು ಏರ್ಪಡಿಸಲಾಗಿದೆ ಎಂದು ಹನುಮಜಯಂತಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಹನುಮಜಯಂತಿ ಅಂಗವಾಗಿ ಪಂಚಾಮೃತ ಅಭಿಷೇಕ, ಸುಪ್ರಭಾತ ಹಾಗೂ ವಿಶೇಷ ಅಲಂಕಾರಗಳನ್ನು ಹಮ್ಮಿಕೊಂಡಿದ್ದು ಮಧ್ಯಾಹ್ನ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಭಾರಿ ಇತಿಹಾಸ ಪ್ರಸಿದ್ಧ ಬೊಮ್ಮರಸನಹಳ್ಳಿ ಶ್ರೀಆಂಜನೇಯಸ್ವಾಮಿಗೆ ವಿಶೇಷವಾಗಿ ವೆಂಕಟರಮಣಸ್ವಾಮಿ ಅಲಂಕಾರವನ್ನು ಏರ್ಪಡಿಸಲಾಗಿದೆ.
ನಗರಸಭೆ ಆವರಣದಲ್ಲಿ ಕಾರ್ಯಕ್ರಮ
ತುಮಕೂರಿನ ಖಾಸಗಿ ಬಸ್ ನಿಲ್ದಾಣದ ಮಾಜಿ ಗುತ್ತಿಗೆದಾರರಿಗೆ, ಅಂಗಡಿ ಮಳಿಗೆ ತೆರೆಯಲು ಜಿಲ್ಲಾಡಳಿತಕ್ಕೆ ಪಾವತಿಸಿದ್ದ ಮುಂಗಡ ಹಣವನ್ನು ನ್ಯಾಯಾಲಯದ ಆದೇಶದಂತೆ ಬಡ್ಡಿ ಸೇರಿಸಿ ಹಿಂತಿರುಗಿಸುವ ಕಾರ್ಯಕ್ರಮ ಏರ್ಪಾಟಾಗಿದೆ ಎಂದು ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಾಲೀಕರ ಸಂಘದ ಕಾರ್ಯದರ್ಶಿ ಎನ್.ಎಸ್. ಪಂಡಿತ್ ಜವಹರ್ ಹಾಗೂ ಅಧ್ಯಕ್ಷ ಫಯಾಜ್ ಉಲ್ಲಾಖಾನ್ ತಿಳಿಸಿದ್ದಾರೆ. ಡಿ.13 ರಂದು ಬೆಳಗ್ಗೆ 10-30 ಕ್ಕೆ ತುಮಕೂರು ನಗರಶಾಸಕ ಡಾ. ರಫೀಕ್ ಅಹಮದ್ ಚೆಕ್ ವಿತರಿಸಲಿದ್ದಾರೆ.
ಒಡೆಯರ್‌ಗೆ ಜೆಡಿಯು ಸಂತಾಪ
ತುಮಕೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ತುಮಕೂರು ಜಿಲ್ಲಾ ಜೆಡಿಯು ಸಂತಾಪ ಸೂಚಿಸಿದೆ. ಜೆಡಿಯು ಜಿಲ್ಲಾಧ್ಯಕ್ಷ ಕೆಜಿಎಲ್ ರವಿ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಯ್ಯ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಇಂದು ನಗೆ ಹಬ್ಬ
ಹುಳಿಯಾರು: ಪಟ್ಟಣದ ಮಾರುತಿ ನಗರದ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿಯ ಹನುಮಜಯಂತಿ ಕಾರ್ಯಕ್ರಮ ಅಂಗವಾಗಿ ತಾ.13ರ ಶುಕ್ರವಾರ ಸಂಜೆ ದೇವಾಲಯದ ಆವರಣದಲ್ಲಿ ನಗೆಹಬ್ಬ ಕಾರ್ಯಕ್ರಮವನ್ನು ಆಂಜನೇಯಸ್ವಾಮಿ ಭಕ್ತ ಮಂಡಳಿಯವರು ಆಯೋಜಿಸಿದ್ದಾರೆ. ಸಂಜೆ 6.30ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾಸ್ಯಕಲಾವಿದರಾದ ಗಂಗಾವತಿಯ ಪ್ರಾಣೇಶ್, ನರಸಿಂಹಜ್ಯೋಶಿ, ಬಸವರಾಜು ಕಟ್ಟಿಮನಿ ತಂಡವರು ಪಾಲ್ಗೊಳ್ಳಲಿದ್ದು ಹಾಸ್ಯದ ಸುಧೆಯನ್ನು ನೀಡಲಿದ್ದಾರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಾಸ್ಯದ ಔತಣವನ್ನು ಸವಿಯುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಮಹಾಬ್ರಹ್ಮರಥೋತ್ಸವ
ಹುಳಿಯಾರು: ಸಮೀಪದ ಹೊಸದುರ್ಗ ತಾಲೂಕಿನ ಸುಕ್ಷೇತ್ರ ಬೆಲಗೂರಿನಲ್ಲಿ ಇತಿಹಾಸ ಪ್ರಸಿದ್ದ ಶ್ರೀ ವೀರಪ್ರತಾಪ ಅಂಜನೇಯ ಸ್ವಾಮಿಯ ಮಹಾಬ್ರಹ್ಮರಥೋತ್ಸವ ನಾಳೆ (ತಾ.14) ಶನಿವಾರ ನಡೆಯಲಿದೆ. ಇದರ ಅಂಗವಾಗಿ ವಾರಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗಿದೆ. ಖ್ಯಾತನಾಮರು ಭಾಗವಹಿಸಲಿದ್ದಾರೆ.