ಮಂಕುತಿಮ್ಮನ ಕಗ್ಗದ ಮೂಲಕ ಜೀವನ ದರ್ಶನ
ಕ.ಪ್ರ.ವಾರ್ತೆ ತುಮಕೂರು ಡಿ. 12
ಕನ್ನಡ ಸಾಹಿತ್ಯದ ಅಭಿಜಾತ ಪ್ರತಿಭೆ ಡಿ.ವಿ.ಜಿಯವರು ಯಾವುದೇ ವಿಶ್ವವಿದ್ಯಾನಿಲಯಗಳ ಪದವಿಗಳನ್ನು ಪಡೆಯದೆ ತಮ್ಮ ಅಪಾರವಾದ ಲೋಕಾನುಭವದಿಂದ ಬದುಕಿಗೆ ಬೇಕಾದ ಎಲ್ಲಾ ಜೀವನ ಮೌಲ್ಯಗಳನ್ನು ತಮ್ಮ ಮೇರುಕೃತಿ ಮಂಕುತಿಮ್ಮನ ಕಗ್ಗದಲ್ಲಿ ಕಟ್ಟಿಕೊಡುವುದರ ಮೂಲಕ ಜೀವನದರ್ಶನ ಮಾಡಿಸಿದ್ದಾರೆ ಎಂದು ಶಿರಾ ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಲೋಕೇಶ್ ಅಗ್ರಹಾರ ಹೇಳಿದರು.
ಅವರು ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 230 ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿ.ವಿ.ಜಿಯವರ ಬದುಕು-ಬರಹ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕರ್ನಾಟಕದ ಮನೆಮಾತಾದ ಕವಿಭೂಷಣ ಡಿ.ವಿ.ಜಿ.ಯವರು ತಮ್ಮ ಕೃತಿ ಮಂಕುತಿಮ್ಮನ ಕಗ್ಗದಲ್ಲಿ 945 ಮುಕ್ತಕಗಳನ್ನು ರಚಿಸಿದ್ದು ನಮ್ಮ ನಾಡಿನ ಜನರ ಪುಣ್ಯವಿಶೇಷದಿಂದ ಮಾತ್ರ ಲಭ್ಯವಾಗಿರುವ ಶ್ರೇಷ್ಠಕೃತಿಯಾಗಿದೆ ಎಂದರು.
ವಿಶಿಷ್ಟ ಕೃತಿ: ಈ ಕೃತಿಯನ್ನು ನೂರು ಜನ ವಿದ್ವಾಂಸರು ಓದಿದರೆ ನೂರು ತರಹದ ಅರ್ಥ ವ್ಯಾಖ್ಯೆಯನ್ನು ಕೊಡುವಂತಹ ವಿಶಿಷ್ಟ ಕೃತಿಯಾಗಿದೆ. ಪ್ರಚಾರಪ್ರಿಯ ಮನಸ್ಸುಗಳಿಗೆ ಚಾಟಿ ಏಟು ಬೀಸುವ ಡಿ.ವಿ.ಜಿಯವರು ಬದುಕನ್ನು ಹೇಗೆ ನಡೆಸಿಕೊಂಡು ಹೋಗಬೇಕೆನ್ನುವುದಕ್ಕೆ ಸ್ಪಷ್ಟವಾದ ಮಾರ್ಗದರ್ಶನ ನೀಡಿದ್ದಾರೆ. ಆ ಕಾರಣಕ್ಕಾಗಿ ಡಿ.ವಿ.ಜಿಯವರು ನಮಗೆಲ್ಲಾ ಇಷ್ಟವಾಗುತ್ತಾರೆ. ಜೊತೆಗೆ ಅವರು ಈ ಕೃತಿಯಲ್ಲಿ ಬದುಕಿಗೆ ಯಾವತ್ತೂ ವಿಮುಖನಾಗಬೇಡ ಎಂದು ಒತ್ತಿ ಹೇಳುತ್ತಾ ನಮ್ಮಲ್ಲಿ ಪ್ರಜ್ಞಾವಂತಿಕೆಯನ್ನು ತುಂಬುತ್ತಾ ಕನ್ನಡಿಗರ ಮನೆ, ಮನಗಳಲ್ಲಿ ಸೇರಿಹೋಗಿದ್ದಾರೆ ಎಂದರು.
ಇಂದು ಪ್ರಜ್ಞಾವಂತಿಕೆಯ ಕೊರತೆಯು ಎಲ್ಲೆಲ್ಲೂ ಎದ್ದು ಕಾಣುತ್ತಿದ್ದು ನಾವು ಎಷ್ಟರಮಟ್ಟಿಗೆ ಪ್ರಜ್ಞಾವಂತರನ್ನು ಸೃಷ್ಟಿಸುತ್ತಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಮಾಜಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇಂದು ದುಷ್ಟರ ಉಪಟಳಕ್ಕಿಂತ ಹೆಚ್ಚಿನ ಅಪಾಯಕಾರಿ ಸಂಪನ್ನರ ಮೌನವಾಗಿದೆ. ಆದ್ದರಿಂದ ಅನ್ಯಾಯ ಅಕ್ರಮಗಳನ್ನು ಖಂಡಿಸದೆ ಹೋದರೆ ನಮ್ಮಂಥ ಆಷಾಢಭೂತಿ ಇನ್ನೊಬ್ಬರಿಲ್ಲ. ಕುವೆಂಪು, ಬೇಂದ್ರೆ, ಡಿ.ವಿ.ಜಿ. ಮುಂತಾದ ಮಹನೀಯರು ಬದುಕಿದ ರೀತಿಯು ಶ್ರೇಷ್ಠವಾಗಿದ್ದು ಅವರ ದಾರಿ ನಮಗೆ ಆದರ್ಶವಾಗಬೇಕು. ನಮ್ಮ ಬದುಕನ್ನು ನಿಜವಾಗಿ ರೂಪಿಸುವ ಸಾಹಿತ್ಯವೇ ಶಾಶ್ವತವಾದ ಸತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಈ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ. ಕೆ. ರಾಜಶೇಖರ್ ಅವರು ಮಾತನಾಡಿ ಲೋಕೇಶ್ ಅಗ್ರಹಾರದವರು ಸರ್ಕಾರಿ ಬಸ್ಸಿನ ಚಾಲಕರಾಗಿ ಸಾಹಿತ್ಯ ಜ್ಞಾನ ಸಂಪಾದಿಸಿ ಉತ್ತಮ ವಾಕ್ ಚಾತುರ್ಯದಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದಕ್ಕೆ ಅವರ ಸಂಸ್ಕಾರ, ಸಜ್ಜನರ ಒಡನಾಟ ಮುಖ್ಯವಾಗಿದೆ. ಮೈಸೂರಿನ ಯದುವಂಶ 25 ತಲೆಮಾರುಗಳವರೆಗೆ ಬೆಳೆದು ಮಕ್ಕಳಿಲ್ಲದೆ ಕೊನೆಗೊಂಡಿದೆ. ಇಂದು ಮೈಸೂರು ಅರಸರ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಆರಂಭಕ್ಕೆ ಮುನ್ನ ಸತ್ಸಂಗ ಕೇಂದ್ರದ ಸದಸ್ಯರೆಲ್ಲಾ ಅಗಲಿದ ಮೈಸೂರಿನ ಶ್ರೀಕಂಠದತ್ತ ಒಡೆಯರ್ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು. ಕೆ.ಟಿ. ಸುಶೀಲ ಪ್ರಾರ್ಥಿಸಿದರು.
ಈ ಸತ್ಸಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಸಂಚಾಲಕ ಆರ್. ಬಸವರಾಜಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.