ಕಸಾಯಿ ಖಾನೆಗೆ ಆಕಳ ಸಾಗಾಣಿಕೆ: ಬಂಧನ
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಾರೇಹಳ್ಳಿ ಸಂತೆಯಲ್ಲಿ ಖರೀದಿಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆಕಳು ಮತ್ತು ಕರುಗಳನ್ನು ಪೊಲೀಸರು ಹಿಡಿದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಹುಳಿಯಾರು ಹೋಬಳಿ ಕಾರೇಹಳ್ಳಿ ಸಂತೆಯಲ್ಲಿ ಖರೀದಿಸಿದ 23 ಆಕಳು ಕರು, 6 ಎಮ್ಮೆಕರು, ಹಾಗೂ 3 ಆಕಳುಗಳನ್ನು ಒಂದೇ ಕ್ಯಾಂಟರ್‌ನಲ್ಲಿ ಅಮಾನವೀಯವಾಗಿ ತುಂಬಿಕೊಂಡು ಸಾಗಿಸುತ್ತಿದ್ದರು. ಮಾಹಿತಿ ತಿಳಿದ ಪೊಲೀಸರು ಬೆನ್ನತ್ತಿ ಕಂದಿಕೆರೆ ಹೋಬಳಿ ಜಾಣೇಹಾರ್ ಬಳಿ ಲಾರಿ ಸಮೇತ ಆರೋಪಿಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದಾರೆ. ಹುಳಿಯಾರು ಹೋಬಳಿ ಕಂಪನಹಳ್ಳಿಯ ಮೆಹಬೂಬ್ ಸಾಬ್(23), ಕಂಪನಹಳ್ಳಿ, ತುಮಕೂರು ಗ್ರಾಮಾಂತರ ನಾಗವಲ್ಲಿಯ ಎಸ್‌ಎ ಲಾಯದ ಇಂತಿಯಾಜ್ (53) ಬಂಧಿತ ಆರೋಪಿಗಳು. ಪಿಎಸ್‌ಐ ಮುನಿರಾಜು ಪ್ರಕರಣ ದಾಖಲಿಸಿ ಆರೋಪಿಗಳನ್ನು ಹಾಜರುಪಡಿಸಿದ್ದಾರೆ.
ಇಂದು ಪುರದ ಚನ್ನಬಸವಣ್ಣನ ಕಾರ್ತೀಕ
ಹುಳಿಯಾರು: ಹೋಬಳಿ ಕೆಂಕೆರೆ ಪುರದಮಠದ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವ ಗ್ರಾಮದೇವತೆ ಶ್ರೀಕಾಳಿಕಾಂಬದೇವಿಯ ಸಮ್ಮುಖದಲ್ಲಿ ಡಿ.16 ಸೋಮವಾರ ಮಧ್ಯಾಹ್ನ ನಡೆಯಲಿದೆ. ಬೆಳಿಗ್ಗೆ ಕೆಂಕೆರೆಯಿಂದ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪುರದ ಮಠಕ್ಕೆ ಕರೆದೊಯ್ದ ನಂತರ ಬಸವಣ್ಣನ ಉತ್ಸವ,ನಂದಿಧ್ವಜ ಕುಣಿತ, ವೀರಗಾಸೆ ನೃತ್ಯ ನಡೆಯಲಿದೆ. ಆಗಮಿಸುವ ಭಕ್ತಾದಿಗಳಿಗೆ ಮುದ್ದೆ ಸಾರಿನ ದಾಸೋಹ ಇಲ್ಲಿ ವಿಶೇಷವಾಗಿದೆ.
ವಿಶ್ವ ವಿಕಲಚೇತನರ ದಿನ ಇಂದು
ತುಮಕೂರು: ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 16 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ಎಂ.ಜಿ.ರಸ್ತೆಯಲ್ಲಿರುವ ಜಿಲ್ಲಾ ಬಾಲಭವನದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಮಾರಂಭ ಉದ್ಘಾಟಿಸುವರು. ತುಮಕೂರು ಶಾಸಕ ಡಾ. ಎಸ್. ರಫೀಕ್ ಅಹಮದ್ ಅಧ್ಯಕ್ಷತೆ ವಹಿಸುವರು.
ಇಂದು ಮುಖ್ಯ ಶಿಕ್ಷಕರ ಸಭೆ
ತುಮಕೂರು: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಆಶ್ರಯದಲ್ಲಿ ಡಿಸೆಂಬರ್ 16 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ದಕ್ಷಿಣ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕ ಸಭೆ ಕರೆಯಲಾಗಿದೆ. ಸಭೆಯಲ್ಲಿ ಏಪ್ರಿಲ್-2013 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳಿಗೆ ನಗದು ಹಾಗೂ ಸ್ಮರಣ ಸಂಚಿಕೆ ವಿತರಣಾ ಸಮಾರಂಭ ಹಾಗೂ ಏಪ್ರಿಲ್-14ರಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸುವಂತೆ ಉಪನಿರ್ದೇಶಕ ಈಶ್ವರಯ್ಯ ಕೋರಿದ್ದಾರೆ.