ಜಗತ್ತಿನ ಮೊದಲ ಗುರು ವಾಲ್ಮೀಕಿ: ನರಸಿಂಹಮೂರ್ತಿ
ಚಿಕ್ಕನಾಯಕನಹಳ್ಳಿ: ಜಗತ್ತಿಗೇ ಮಾರ್ಗದರ್ಶನ ನೀಡಿದ ಮೊಟ್ಟಮೊದಲ ಗುರು ವಾಲ್ಮೀಕಿ ಎಂದು ಗುಬ್ಬಿ ತಾಲೂಕಿನ ಕೆ.ಮತಿಗಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ನರಸಿಂಹಮೂರ್ತಿ ನುಡಿದರು. ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುಗಳೊಂದಿಗೆ ಒಂದು ದಿನ - ನೆನಪಿಗೆ ಬಣ್ಣಹಚ್ಚುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಯಾರೋ ಹೇಳಿದರೆಂಬ ಕಾರಣಕ್ಕೆ, ಸಂಪ್ರದಾಯ ಪಾಲಿಸಬೇಕೆಂಬ ದಾಕ್ಷಿಣ್ಯಕ್ಕೆ ಬೇರೆಯವರ ಮಾತನ್ನು ನಂಬಬೇಡ, ನಂಬುವುದಾದರೆ ಗುರುಗಳು ಹೇಳಿದ ಮಾತನ್ನು ನಂಬು. ಚಾರಿತ್ರ ರೂಪಿಸುವ ಶಿಕ್ಷಣ ನೀಡುವ ಗುರು ಎಂದೂ ದಾರಿತಪ್ಪಿಸುವ ಮಾತನ್ನು ಹೇಳಲಾರ. ಕುವೆಂಪು ಹೇಳಿರುವಂತೆ ಅಂದು ನಮ್ಮ ಮುಂದಿದ್ದ ಗುರಿ ಮುಟ್ಟಿಸಲು ಹಿಂದೆ ಗುರುವಿರುತ್ತಿದ್ದರು. ಆದರೆ ಇಂದು ಅದು ತಿರುಗುಮುರುಗಾಗಿದೆ. ಇಂದಿನ ಗುರುಗಳಿಗೇ ತಮ್ಮ ಮುಂದೆ ನಿರ್ದಿಷ್ಟ ಗುರಿಯಿಲ್ಲ, ಅಂದಮೇಲೆ ವಿದ್ಯಾರ್ಥಿಗಳನ್ನಿನ್ನೇನು ಗುರಿಮುಟ್ಟಿಸುತ್ತಾನೆ ಎಂದು ಪ್ರಶ್ನಿಸಿದರು. ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಗೋವಿಂದರಾಜು ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸಮೂರ್ತಿ, ಬಿ.ಕೆ.ಶಂಕರಾವ್, ಅಶ್ವತ್ಥನಾರಾಯಣ ಶಾಸ್ತ್ರಿ, ಬಿ.ನಾಗರಾಜು, ಬಿ.ಲೋಕೇಶ್ ಮುಂತಾದವರಿದ್ದರು.