ಶಿವಕುಮಾರನಾಥ ಶ್ರೀ ವಿಧಿವಶ
ಕ.ಪ್ರ.ವಾರ್ತೆ ತುರುವೇಕೆರೆ ಡಿ. 15
ತುರುವೇಕೆರೆಯ ತಾಲೂಕಿನ ಮಾಯಸಂದ್ರದ ಸೊರವನಹಳ್ಳಿ ಗೇಟ್ ಬಳಿ ಇರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖಾ ಮಠವಾದ ಕಾಲಭೈರವೇಶ್ವರ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ (57) ಭಾನುವಾರ ಬೆಳಗ್ಗೆ 11.45 ರಲ್ಲಿ ವಿಧಿವಶರಾದರು.
ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದ್ದ ಆದಿಚುಂಚನಗಿರಿ ಮಹಾಸಂಸ್ಧಾನದ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಯವರಿಗೆ ಗುರವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಲುವಾಗಿ ಶ್ರೀಗಳು ಬೆಳಗ್ಗೆ ಆಶ್ರಮದಿಂದ ಪ್ರಯಾಣ ಬೆಳಸಿದ್ದಾರೆ. ಪೀಣ್ಯ ಬಳಿ ಶಿವಕುಮಾರನಾಥ ಸ್ವಾಮೀಜಿಯವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಚಾಲಕ ಗಂಗಾಧರ್ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್‌ಗೆ ದಾಖಲು ಮಾಡಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಶಿವಕುಮಾರನಾಥ ಸ್ವಾಮೀಜಿಯವರ ಪ್ರಾಣ ಪಕ್ಷಿ ಹಾರಿಹೋಯಿತು ಎಂದು ಚಾಲಕ ಗಂಗಾಧರ್ ತಿಳಿಸಿದ್ದಾರೆ.
2ನೇ ದೊಡ್ಡ ಆಘಾತ: ಆದಿಚುಂಚನಗಿರಿಗೆ ಇದು ವರ್ಷದಲ್ಲಿ ಎರಡನೇ ದೊಡ್ಡ ಆಘಾತವಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಮಹಾ ಸಂಸ್ಥಾನ ಮಠದ ಜಗದ್ಗುರುಗಳಾದ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ದೈವಾದೀನರಾಗಿದ್ದರು. ಈಗ ಶಿವಕುಮಾರನಾಥ ಸ್ವಾಮೀಜಿ ನಿಧನರಾಗಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಪ್ರಥಮವಾಗಿ ದೀಕ್ಷೆ ಪಡೆದ ಹೆಗ್ಗಳಿಕೆ ಇವರದ್ದಾಗಿತ್ತು. ಸ್ವಾಮಿಗಳ ನಿಧನದ ನಂತರ ನಿರ್ಮಲಾನಂದನಾಥ ಸ್ವಾಮೀಜಿ ಅಥವಾ ಶಿವಕುಮಾರನಾಥ ಸ್ವಾಮೀಜಿ ಇವರಲ್ಲಿ ಓರ್ವರಿಗೆ ಮಠದ ಉತ್ತರಾಧಿಕಾರತ್ವ ನೀಡುವ ಸಂಧರ್ಭ ಬಂದೊದಗಿದ್ದಾಗ ಸ್ವತಃ ಶಿವಕುಮಾರನಾಥ ಸ್ವಾಮೀಜಿಯವರೇ ತಮಗೆ ಉತ್ತರಾಧಿಕಾರತ್ವ ಬೇಡ, ನಿರ್ಮಲಾನಂದರಿಗೆ ಉತ್ತರಾದಿಕಾರತ್ವ ನೀಡಿ ಎಂದು ಮಹಾಸ್ವಾಮೀಜಿಗಳಿಗೆ ತಿಳಿಸುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದರು.
ಉತ್ತಮ ಬಾಂಧವ್ಯ: ತಿಪಟೂರಿನ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಾಲಯದ ಜವಾಬ್ದಾರಿಯನ್ನೂ ಹೊತ್ತು, ಉತ್ತಮ ಸ್ಥಿತಿಗೆ ತಂದಿದ್ದರು. ಸದ್ಯ ತಾಲೂಕಿನ ಶಾಖಾ ಮಠವಾದ ಕಾಲಭೈರವೇಶ್ವರ ಕಲ್ಪತರು ಆಶ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ತಾಲೂಕಿನಲ್ಲಿ ಹಲವಾರು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಆರೋಗ್ಯ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ಸರ್ವರನ್ನೂ ಸಮಾನಭಾವದಿಂದ ಕಾಣುತ್ತಿದ್ದ ಸ್ವಾಮೀಜಿಯವರ ಸಾವು ಭಕ್ತಾದಿಗಳಲ್ಲಿ ಬಹಳ ನೋವು ತಂದಿದೆ.
ಸಂಸ್ಕೃತದಲ್ಲೂ ಪಾಂಡಿತ್ಯ: ಶಿವಕುಮಾರನಾಥ ಸ್ವಾಮೀಜಿಯವರು ನಾಗಮಂಗಲ ತಾಲೂಕು ಬೆಟ್ಟದ ಮಲ್ಲೇನಹಳ್ಳಿ ಗ್ರಾಮದವರಾಗಿದ್ದಾರೆ. ತಾಯಿ ಸೀತಮ್ಮ ಹಾಗೂ ತಂದೆ ಹಲಗೇಗೌಡರ ಪುತ್ರರಾಗಿದ್ದಾರೆ. ಅವರಿಗೆ ಓರ್ವ ಸಹೋದರ, ನಾಲ್ವರು ಸಹೋದರಿಯರು ಇದ್ದಾರೆ. ಶ್ರೀಗಳ ಪೂರ್ವಾಶ್ರಮದ ಹೆಸರು ಈರಣ್ಣಗೌಡ, ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದ ಅವರು ನಂತರ ಆದಿಚುಂಚನಗಿರಿ ಮಠದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದರು. ಸಂಸ್ಕೃತದಲ್ಲೂ ಹೆಚ್ಚಿನ ತರಬೇತು ಪಡೆದಿದ್ದರು. ಆದಿಚುಂಚನಗಿರಿ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರ ಕಾಲದಲ್ಲೇ ಮಠಕ್ಕೆ ಸೇರ್ಪಡೆಯಾಗಿದ್ದರು. ಶ್ರೀಗಳು ಕೇವಲ 20 ವರ್ಷದವರಾಗಿದ್ದಾಗಲೇ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಪ್ರಥಮವಾಗಿ ದೀಕ್ಷೆ ಪಡೆದರು.
ತಾಲೂಕಿನಲ್ಲಿ ಆದಿಚುಂಚನಗಿರಿ ಮಠದ ಶಾಖಾ ಮಠವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದ ವೇಳೆ ಮಾಯಸಂದ್ರದ ಪ್ರದೇಶದಲ್ಲಿ ಸುಮಾರು 250 ಎಕರೆ ಜಮೀನು ಮಠದ ಹೆಸರಿನಲ್ಲಿ ಇತ್ತು. ಅದರ ನಿರ್ವಹಣೆ ಮಾಡಲು ಶಿವಕುಮಾರನಾಥ ಸ್ವಾಮೀಜಿಯವರನ್ನು ನೇಮಿಸಲಾಗಿತ್ತು. ಇವರಿಗೆ ಕಬ್ಬಳ್ಳಿಯ ದೇವಾಲಯ ಹಾಗೂ ದಸರೀಘಟ್ಟದ ಚೌಡೇಶ್ವರಿ ದೇವಾಲಯದ ಜವಾಬ್ದಾರಿಯನ್ನೂ ನೀಡಲಾಗಿತ್ತು.
ಸಂತಾಪ: ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿಗಳ ನಿಧನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ್, ಹಿರಿಯ ಕಾಂಗ್ರೆಸ್ ಮುಖಂಡ ಚೌದ್ರಿ ರಂಗಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎ.ಬಿ.ಜಗದೀಶ್, ಶ್ರೀನಿವಾಸ್, ಉಗ್ರಯ್ಯ, ಮಂಗಳ ಗೌರಮ್ಮ, ಲತಾ ವಿಶ್ವನಾಥ್, ಮಾಜಿ ಸದಸ್ಯರಾದ ಎನ್.ಆರ್.ಜಯರಾಂ, ಕೆಜೆಪಿ ಮುಖಂಡ ಮಸಾಲಾ ಜಯರಾಂ, ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಕಾಂತ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ. ಸೋಮವಾರ ಶಿವಕುಮಾರನಾಥ ಸ್ವಾಮೀಜಿಯವರ ಅಂತ್ಯಕ್ರಿಯೆ ನಡೆಯಲಿದೆ. ಆದಿ ಚುಂಚನಗಿರಿ ಮಠದಲ್ಲಿ ಶ್ರೀಗಳ ಅಂತ್ಯ ಸಂಸ್ಕಾರ ನಡೆಯಲಿ ಎಂದು ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಹಲವಾರು ಭಕ್ತಾದಿಗಳು ಶ್ರೀಗಳನ್ನು ಶಾಖಾ ಮಠದ ಆವರಣದ್ದೇ ಸಮಾಧಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಂತಿಮ ದರ್ಶನ
ಶಿವಕುಮಾರನಾಥ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಕಲ್ಪತರು ಆಶ್ರಮದ ಆವರಣದಲ್ಲಿ ಸುಮಾರು 3 ಗಂಟೆಗಳ ಕಾಲ ಇರಿಸಲಾಗಿತ್ತು. ಸಾವಿರಾರು ಮಂದಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ತಾಲೂಕಿನ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ನಾರಾಯಣ ಸ್ವಾಮಿ, ಮಾಜಿ ಶಾಸಕರಾದ ಎಸ್.ರುದ್ರಪ್ಪ, ಎಚ್.ಬಿ.ನಂಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಚೌದ್ರಿ ಶಂಕರ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿದ್ದೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಬಿ.ಜಗದೀಶ್, ಶ್ರೀನಿವಾಸ್, ಮಾಜಿ ಸದಸ್ಯ ಎನ್.ಆರ್.ಜಯರಾಂ, ಕಾಂಗ್ರೆಸ್ ನ ಹಿರಿಯ ಮುಖಂಡ ಚೌದ್ರಿ ರಂಗಪ್ಪ, ಟಿ.ಎಸ್.ದಾನಿಗೌಡ, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಮಾಜಿ ಅಧ್ಯಕ್ಷ ಕೋಳಾಲ ನಾಗರಾಜು, ಯಲಚವಾಡಿ ನಾಗರಾಜು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬೋರೇಗೌಡ, ತಾಲೂಕು ಬಿಜೆಪಿ ಮುಖಂಡರಾದ ಅರಳೀಕೆರೆ ರವಿಕುಮಾರ್, ಟಿ.ಎಸ್.ಬೋರೇಗೌಡ, ವಕೀಲ ಧನಪಾಲ್ ಮೊದಲಾದವರು ದರ್ಶನ ಪಡೆದರು.
ಸಾಯಂಕಾಲ 6.15 ರ ವೇಳೆಗೆ ಶಿವಕುಮಾರನಾಥ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಆದಿಚುಂಚನಗಿರಿ ಮಠಕ್ಕೆ ಕೊಂಡೊಯ್ಯಲಾಯಿತು.
ಶ್ರೀಮಠದಲ್ಲಿ ಅಂತ್ಯಕ್ರಿಯೆ
ನಾಗಮಂಗಲ: ಮಾಯಸಂದ್ರ ಕಲ್ಪತರು ಆಶ್ರಮದಲ್ಲಿ ಶಿವಕುಮಾರನಾಥಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಆದಿಚುಂಚನಗಿರಿ ಕ್ಷೇತ್ರದ ತಪ್ಪಲಿನಲ್ಲಿರುವ ತೋಟದಲ್ಲಿ ನಾಥಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಶ್ರೀಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ, ಕಿರಿಯ ಸ್ವಾಮೀಜಿಗಳಾದ ಪುರುಷೋತ್ತಮಾನಂದನಾಥಸ್ವಾಮೀಜಿ, ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ಶ್ರೀಮಠದ ಎಲ್ಲ ಶಾಖೆಗಳ ಸ್ವಾಮೀಜಿಗಳು, ಸಾಧುಸಂತರು, ಗಣ್ಯರು ಹಾಗೂ ಸಾವಿರಾರು ಭಕ್ತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.