ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಭಿವೃದ್ಧಿಗೆ ಶ್ರೀಗಳ ಕೊಡುಗೆ ಅಪಾರ

Srinivasa Murthy VN
Updated On : 17 Dec 2013, 11:46 am

ತುಮಕೂರು: ನಗರದ ಅಶೋಕ ನಗರದಲ್ಲಿರುವ ಕೆಂಪೇಗೌಡ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ವತಿಯಿಂದ ದಿ. ಶಿವಕುಮಾರನಾಥಸ್ವಾಮೀಜಿ ಅವರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಸಭೆಯ ಪ್ರಾರಂಭಕ್ಕೂ ಮುನ್ನ ಎರಡು ನಿಮಿಷಗಳ ಮೌನಾಚರಣೆಯ ಮೂಲಕ  ಸ್ವಾಮೀಜಿಗಳ ಆತ್ಮಕ್ಕೆ ಶಾಂತಿಕೋರಲಾಯಿತು. ಬ್ಯಾಂಕಿನ ಅಧ್ಯಕ್ಷ ಎಚ್.ಎಸ್. ಶೇಷಾದ್ರಿ ಮಾತನಾಡಿ, ಸಾಮಾಜಿಕ ಕಳಕಳಿ, ಆದಿಚುಂಚನಗಿರಿ ಮಹಾಸಂಸ್ಥಾನಮಠದ ಅಭಿವೃದ್ಧಿಗೆ ಶ್ರೀಗಳ ಕೊಡುಗೆ ಅಪಾರವಾಗಿದೆ. ಕಲ್ಪತರು ಆಶ್ರಮದ ಏಳಿಗೆಗಾಗಿ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರೀಗಳು ಅವಿರತ ಶ್ರಮಿಸಿದ್ದು, ಅವರ ಸೇವೆ ಅವಿಸ್ಮರಣಿಯೇ ಎಂದು ಬಣ್ಣಿಸಿದರು.
ತುರುವೇಕೆರೆಯ ಬಳಿ ಸಣ್ಣದಾಗಿ ಕಲ್ಪತರು ಆಶ್ರಮವನ್ನು ಪ್ರಾರಂಭಿಸಿ ಇಂದು ಸಾವಿರಾರು ಜನ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆಯನ್ನು ನೀಡುತ್ತಾ ಜ್ಞಾನದಾಸೋಹ ಕೇಂದ್ರವಾಗಿ ಅಭಿವೃದ್ಧಿ ಪಡಿಸಿದ್ದಾರೆ. ನಮ್ಮ ಸಮಾಜಕ್ಕೆ ಇವರ ಸಾವಿನಿಂದ ತುಂಬಲಾರದ ನಷ್ಟವಾಗಿದೆ. ಕಲ್ಪತರು ಆಶ್ರಮವೂ ಅನಾಥವಾಗಿದೆ. ಹಿರಿಯ ಶ್ರೀಗಳು ಈ ಮಠಕ್ಕೆ ಒಳ್ಳೆಯ ಗುರುಗಳನ್ನು ನೇಮಿಸಿ ಪರಂಪರೆಯನ್ನು ಉಳಿಸಿಕೊಂಡು ಹೋಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಸಾಕಷ್ಟು ಶ್ರಮಿಸಿದ್ದರು: ಬ್ಯಾಂಕಿನ ಉಪಾಧ್ಯಕ್ಷ ಎಸ್. ಪುಟ್ಟೀರಪ್ಪ ಮಾತನಾಡಿ, ಸಮಾಜವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಬಹಳಷ್ಟು ಶ್ರಮಿಸಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು.
ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಕೆಂಪಯ್ಯ ಮಾತನಾಡಿ, ನಾವು ಚಿಕ್ಕವರಾಗಿದ್ದಾಗ ಬೆಳ್ಳೂರು ಕ್ರಾಸ್‌ನಲ್ಲಿ ಚಿಕ್ಕದಾಗಿ ಆದಿಚುಂಚನಗಿರಿ ಮಠ ಪ್ರಾರಂಭವಾದಾಗ ಅಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತ್ತಿತ್ತು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪಟ್ಟಾಭಿಷೇಕದ ನಂತರ ಮಠ ಬೃಹದಾಕಾರವಾಗಿ ಬೆಳೆದಿದೆ. ಆ ಮಠದ ಬೆಳವಣಿಗೆಯಲ್ಲಿ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿಗಳ ಮಹತ್ತರ ಪಾತ್ರವಿದೆ. ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಹಿರಿಯ ಶ್ರೀಗಳು ಇವರೊಂದಿಗೆ ಚರ್ಚಿಸುತ್ತಿದ್ದರು.  ಅಚ್ಚುಮೆಚ್ಚಿನ ಶಿಷ್ಯರಾಗಿ ಶಿವಕುಮಾರನಾಥರು ಗುರುಶಿಷ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದರೂ ಎಂದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಆರ್. ಕಾಮರಾಜು. ಅರ್. ದೊಡ್ಡಲಿಂಗಪ್ಪ, ಎನ್.ಎನ್. ಗೋವಿಂದರಾಜು, ಕೆ.ಪಿ.ನರಸಿಂಹಮೂರ್ತಿ, ರಾಮಚಂದ್ರ, ಎಚ್.ಎಲ್. ಚಂದ್ರಶೇಖರಗೌಡ, ಬ್ಯಾಂಕಿನ ವ್ಯವಸ್ಥಾಪಕ  ಎಂ.ವಿ. ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಒಕ್ಕಲಿಗರ ಸಂಘದಿಂದ ಸ್ವಾಮೀಜಿಗೆ ಶ್ರದ್ಧಾಂಜಲಿ
ತಿಪಟೂರು:
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠವಾದ ಕಲ್ಪತರು ಆಶ್ರಮ ಮಾಯಸಂದ್ರದ ಶ್ರೀ ಶಿವಕುಮಾರನಾಥ ಸ್ವಾಮೀಜಿಯವರಿಗೆ ಶ್ರದ್ದಾಂಜಲಿ ಸಭೆಯನ್ನು ತಾಲೂಕು ಒಕ್ಕಲಿಗರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್. ಚಿದಾನಂದ್ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಮತ್ತು ಸಮಾಜ-ಬಾಂಧವರು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷರಾದಂತಹ ಡಿ.ಬಿ.ಲಕ್ಷ್ಮಣಗೌಡ, ಜಿ.ಟಿ.ಶಂಕರೇಗೌಡ ಸ್ವಾಮೀಜಿಗಳವರ ಸಾಮಾಜಿಕ ಕಳಕಳಿ, ಶೈಕ್ಷಣಿಕ ಸೇವೆ, ಭಕ್ತರೊಂದಿಗಿನ ಒಡನಾಟಗಳನ್ನು ಸ್ಮರಿಸಿಕೊಂಡು ನುಡಿ ನಮನ ಸಲ್ಲಿಸಿದರು. ಕಾರ್ಯದರ್ಶಿ ಬಸವರಾಜು ವಂದಿಸಿದರು.

ರಂಗಾಪುರ ಶ್ರೀ ಸಂತಾಪ
ತಿಪಟೂರು:
ಆದಿಚುಂಚನಗಿರಿಶಾಖಾ ಮಠ ತುರುವೇಕೆರೆ ತಾಲೂಕು ಮಾಯಸಂದ್ರದ ಕಲ್ಪತರು ಆಶ್ರಮದ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರನಾಥ ಸ್ವಾಮೀಜಿ ಅವರ ಅಕಾಲಿಕ ಮರಣಕ್ಕೆ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.  ಶ್ರೀ ಶಿವಕುಮಾರನಾಥ ಶ್ರೀಗಳ ಕ್ರೀಯಾಶೀಲತೆ, ಆದರ್ಶ ಮೊದಲಾದ ಸದ್ಗುಣಗಳನ್ನು ಸ್ಮರಿಸಿರುವ ಶ್ರೀ ಗುರುಪರದೇಶಿಕೇಂದ್ರ ಶ್ರೀಗಳು, ಶ್ರೀಮಠದೊಂದಿಗೆ ಮತ್ತು ತಮ್ಮೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶಿವಕುಮಾರನಾಥ ಶ್ರೀಗಳು ನಾಡಿನ ಕೃಷಿಕರ ಬಗ್ಗೆ ಹೆಚ್ಚಿನ ಚಿಂತಿತರಾಗಿದ್ದು, ಶ್ರೀಗಳ ಅಗಲಿಕೆ ಎಲ್ಲರಿಗೂ ಅಪಾರ ನೋವು ಉಂಟು ಮಾಡಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement