ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗು ರಕ್ಷಣೆ
ಕುಣಿಗಲ್: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ ಕೆರೆಗೆಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದನ್ನು ಕಂಡ ಸಾರ್ವಜನಿಕರು ಸಕಾಲದಲ್ಲಿ ಪೊಲೀಸರಿಗೆ ತಿಳಿಸಿದಾಗ ಅವರು ಮಹಿಳೆ ಮತ್ತು ಮಗುವನ್ನು ರಕ್ಷಿಸಿರುವ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ಇಪ್ಪಾಡಿ ಗ್ರಾಮದ 28 ವರ್ಷದ ಮಹಿಳೆ ಪ್ರಮಿಳಾ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ, ಪಟ್ಟಣದ ದೊಡ್ಡಕೆರೆ ಏರಿಯ ಮೇಲೆ ಮಂಗಳವಾರ ಬೆಳಗ್ಗೆ ಅನುಮಾನಾಸ್ಪದವಾಗಿ ತೆರಳುತ್ತಿದ್ದಾಗ, ಶಂಕೆಗೊಂಡ ಸಾರ್ವಜನಿಕರು ಕುಣಿಗಲ್ ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು, ಮಹಿಳೆ ಮತ್ತು ಮಗುವನ್ನು ಠಾಣೆಗೆ ಕರೆತಂದು, ವಿಚಾರಿಸಿದಾಗ, ಮಹಿಳೆಯು ತನ್ನ ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದಾಗಿ ತಿಳಿಸಿದಳು. ಪೊಲೀಸರು ಆಕೆಯ ಪೋಷಕರನ್ನು ಕರೆಸಿ, ಮಹಿಳೆಗೆ ಆತ್ಮಸ್ತೈರ್ಯ ತುಂಬಿ ಬುದ್ಧಿಹೇಳಿ ಕಳುಹಿಸುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಮಗುವನ್ನು ರಕ್ಷಿಸಿದ್ದಾರೆ.
ಚಿರತೆ ದಾಳಿಗೆ ಮೇಕೆ ಬಲಿ
ಹೆಬ್ಬೂರು: ಚಿರತೆಯ ದಾಳಿಗೆ ಮೇಕೆಯೊಂದು ಸಾವನ್ನಪ್ಪಿರುವ ಘಟನೆ ಸಮೀಪದ ರಾಮೇನಹಳ್ಳಿ ರಸ್ತೆಯ ಬೈರಪ್ಪನವರ ಹೊಲದಲ್ಲಿ ಮಂಗಳವಾರ ಬೆಳಗ್ಗೆ 12.30 ಕ್ಕೆ ನಡೆದಿದೆ.
ಮಂಗಳವಾರ ಬೆಳಗ್ಗೆ ಬೈರಪ್ಪನವರ ಹೊಲದಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಚಿರತೆ ದಾಳಿ ಮಾಡಿದೆ. ಇದನ್ನು ಕಂಡ ಬೈರಪ್ಪ ಚಿರತೆಯನ್ನು ಓಡಿಸಲು ಹೋದಾಗ ಅವನ ಮೇಲೂ ಎರಗಲು ಯತ್ನಿಸಿತು. ಅಷ್ಟರಲ್ಲಿ ಅಕ್ಕಪಕ್ಕದವರ ಚೀರಾಟದಿಂದ ಚಿರತೆ ಕಂಬಿ ಕಿತ್ತಿತ್ತು. ಹೆಬ್ಬೂರಿನ ಸುತ್ತಮುತ್ತ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು ಜನ ಭಯಭೀತರಾಗಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಬೋರೇಗೌಡ ಭೇಟಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.