ಚಿರತೆ ಬಂತು.. ಚಿರತೆ: ರಾತ್ರಿ ಇಡೀ ನಿದ್ದೆಗೆಟ್ಟ ನಾಗರಿಕರು
ಕುಣಿಗಲ್: ಚಿರತೆ ಬಂತು.. ಚಿರತೆ.. ಸೋಮವಾರ ರಾತ್ರಿ ಪಟ್ಟಣದ 12ನೇವಾರ್ಡ್ನಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಇದನ್ನು ನಾಗರಿಕರೊಬ್ಬರು ನೋಡಿ ಕೂಗಿದ ಪರಿಣಾಮ ಇಡೀ ರಾತ್ರಿ ನಾಗರಿಕರು ಆತಂಕದಲ್ಲಿ ಕಾಲ ಕಳೆದ ಘಟನ ನಡೆದಿದೆ. ಸೋಮವಾರ ರಾತ್ರಿ 12 ನೇವಾರ್ಡ್ನ ವಾನಂಬಾಡಿ ಕಾಲೋನಿಗೆ ಹೊಂದುಕೊಂಡಿರುವ ಪ್ರದೇಶದಲ್ಲಿ ಎರಡು ಚಿರತಗೆಳು ಅಹಾರಕ್ಕಾಗಿ ಅರಸಿ, ಕಾಲೋನಿಗೆ ನುಗ್ಗಿದಾಗ, ಬೀದಿ ನಾಯಿಗಳು ಅರಚಾಟ ಕೇಳಿ ನಾಗರಿಕರೊಬ್ಬರು ಹೊರಬಂದು ನೋಡಿದ್ದು, ಚಿರತೆಗಳು ಕಣ್ಣಿಗೆ ಬಿದ್ದಕೂಡಲೆ, ಜೋರಾಗಿ ಕೂಗಿದ ಮೇರೆಗೆ, ಎಚ್ಚೆತ್ತು ಹೊರಬಂದ ಇತರರು ಗದ್ದಲ ಎಬ್ಬಿಸಿದರು. ನಂತರ ಪುರಸಭಾ ಸದಸ್ಯ ರಂಗಸ್ವಾಮಿ ಗಮನಕ್ಕೆ ತಂದರು.
ರಂಗಸ್ವಾಮಿ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ್ದು, ನಾಗರಿಕರಿಂದ ಹೆಚ್ಚಿನ ಮಾಹಿತಿ ಪಡೆದು ನಂತರ, ಕಾಲೋನಿಯು ಗದ್ದೆಬಯಲು ಪ್ರದೇಶಕ್ಕೆ ಹೊಂದಿಕೊಂಡ ಸರಹದ್ದು ಪ್ರದೇಶದಲ್ಲೆಲ್ಲಾ, ಪೊಲೀಸ್ ವಾಹನದ ಸೈರನ್ ಹಾಕಿಕೊಂಡು ತಡರಾತ್ರಿವರೆಗೂ ಸಂಚರಿಸಿದರು. ಪೊಲೀಸ್ ವಾಹನದ ಜೊತೆಯಲ್ಲಿ ವಾರ್ಡ್ನ ಮೂವತ್ತಕ್ಕೂ ಹೆಚ್ಚು ಯುವಕರು ತಮ್ಮ ಬೈಕ್ಗಳಲ್ಲಿ ಜೋರಾಗಿ ಶಬ್ದ ಮಾಡುತ್ತಾ ಸಂಚರಿಸಿ, ಚಿರತೆಗಳನ್ನು ಹಿಮ್ಮೆಟ್ಟಿಸಲು ಹರಸಾಹಸ ಪಟ್ಟಿದ್ದು, ರಾತ್ರಿ ಇಡೀ ನಾಗರಿಕರು ಆತಂಕದಲ್ಲೆ ಕಾಲ ಕಳೆದರಲ್ಲದೆ, ಒಬ್ಬಂಟಿಯಾಗಿ ಗದ್ದೆಬಯಲು ಪ್ರದೇಶದ ಕಡೆಗೆ ತೆರಳಲಿಲ್ಲ.