ಪ್ರತಿಭಾ ಕಾರಂಜಿ ಕಾರ್ಯಕ್ರಮ ವರದಾನ: ಈರಣ್ಣ
ಮಧುಗಿರಿ: ಮಕ್ಕಳ ಬೌದ್ಧಿಕ ಮತ್ತು ಸರ್ವಾಂಗೀಣ ಪ್ರಗತಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ವರದಾನ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಣ್ಣ ಅಬಿಪ್ರಾಯಪಟ್ಟರು. ತುಮಕೂರು ತಾಲೂಕಿನ ಬೆಳಗುಂಬ ಕ್ಲಸ್ಟರ್ ವ್ಯಾಪ್ತಿಗೆ ಬರುವ ಯಲ್ಲಾಪುರ ಜ್ಞಾನಭಾರತಿ ಎಸ್‌ಎನ್ ಪ್ರೌಢಶಾಲೆ ಮತ್ತು ನ್ಯಾಷನಲ್ ಆಂಗ್ಲ ಶಾಲೆ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಸಮಗ್ರ ಬೆಳವಣಿಗೆಗೆ ಸಮುದಾಯದ ಪೋಷಕರು ಚಾಚು ತಪ್ಪದೇ ಭಾಗವಹಿಸಬೇಕು. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಪ್ರತಿಭಾ ಕಾರಂಜಿ ಧ್ಯೇಯೋದ್ದೇಶಗಳು ಸಾರ್ಥಕವಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಎಂ.ಪಿ. ಚಂದ್ರಶೇಖರರೆಡ್ಡಿ ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಸರ್ಕಾರ ರೂಪಿಸಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಏಳಿಗೆಗೆ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗ್ರಾಮೀಣ ಕಲೆಗಳ ಮೂಲಕ ಪ್ರತಿಭೆ ಹೊರ ಸೂಸಲು ಉತ್ತಮ ವೇದಿಕೆ ಎಂದ ಅವರು ಆಟ ಮತ್ತು ಮತ್ತಿತರೆ ಕ್ಷೇತ್ರಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೂ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾತಿ ಸದಸ್ಯ ವೈ.ಕೆ. ನರಸಿಂಹಮೂರ್ತಿ,ಇಸಿಓ ಬಷೀರ್ ಅಹಮದ್, ಸಿ.ಎಸ್.ಹನುಮಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಹನುಮಯ್ಯ ಸ್ವಾಗತಿಸಿ ವಂದಿಸಿದರು.