ಪ್ರತಿಭಾಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಶೆಟ್ಟೀಕೆರೆ ಹೋಬಳಿ, ಗೋಡೇಕೆರೆ ಕ್ಲಸ್ಟರ್ನ ಸೊಂಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ವಿನಯ್ ಪ್ರಥಮ ಸ್ಥಾನ ಮತ್ತು ಲಘುಸಂಗೀತದಲ್ಲಿ ಶಿವರಾಜ್ ಪ್ರಥಮ ಸ್ತಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯಶಿಕ್ಷಕರಾದ ಕೃಷ್ಣಪ್ಪ, ಶಿಕ್ಷಕರಾದ ಆರ್.ಡಿ. ಚಂದ್ರಯ್ಯ, ಜಿ.ಎಸ್.ರವೀಶ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ: ದಂಡ
ಶಿರಾ: ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಲಾರಿ, ಜೆ.ಸಿ.ಬಿ ಮತ್ತು ಟ್ರಾಕ್ಟರ್ ಸೇರಿದಂತೆ ಒಟ್ಟು 610 ವಾಹನಗಳ ವಿರುದ್ಧ ಕ್ರಮ ಕೈಗೊಂಡು ಕಂದಾಯ ಇಲಾಖೆಯವರಿಂದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಶಪಡಿಸಿಕೊಂಡು ಒಟ್ಟು 71,76,550 ರು. ದಂಡ ವಿಧಿಸಲಾಗಿರುತ್ತದೆ ಎಂದು ಪೊಲೀಸ್ ಉಪ ಅಧೀಕ್ಷಕರು ತಿಳಿಸಿದ್ದಾರೆ. ಅಕ್ರಮ ಮರಳು ದಂದೆ ನಡೆಸುತ್ತಿದ್ದ 204 ಲಾರಿ, 9 ಜೆ.ಸಿ.ಬಿ, 2 ಹಿಟಾಚಿ, 4 ಟ್ರಾಕ್ಟರ್ಗಳ ವಿರುದ್ಧ ಮತ್ತು 428 ಜನ ಆರೋಪಿಗಳ ವಿರುದ್ಧ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ. ಮುಂದಿನ ದಿನಗಳಲ್ಲಿ ಅಕ್ರಮ ಮರಳು ಸಾಗಿಸುವ ವ್ಯಕ್ತಿಗಳು ಮತ್ತು ವಾಹನಗಳ ಮೇಲೆ ಕಟ್ಟುಕಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿ.ಪಿ.ಐ ಶಿರಾ ಗ್ರಾಮಾಂತರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭವಗದ್ಗೀತೆ ಮಾನವ ಜೀವನದ ಸಂವಿಧಾನ
ಶಿರಾ: ಭವಗದ್ಗೀತೆಯು ಮಾನವ ಜೀವನದ ಸಂವಿಧಾನ. ಈ ಗೀತೆಯಲ್ಲಿ 18 ಅಧ್ಯಾಯವಿದ್ದು, 700 ಶ್ಲೋಕಗಳಿವೆ. ಇದು ಕೃಷ್ಣಾರ್ಜುನರ ಸಂವಾದ. ಇದು ಜಗತ್ತಿನ ಎಲ್ಲಾ ಭಾಷೆಗಳಿಗೂ ತರ್ಜುಮೆಯಾಗಿದೆ ಭಗವದೀತೆಯನ್ನು ವರ್ಣಿಸಲು ಅಸಾಧ್ಯ ಎಂದು ಸರ್ಕಾರಿ ಮಹಿಳಾ ಪ.ಪೂ. ಕಾಲೇಜಿನ ಪ್ರಾಂಶುಪಾಲರು ಹಾಗೂ ಭಗವದ್ಗೀತಾ ಅಭಿಯಾನ ಶಿರಾ ಘಟಕದ ಗೌರವಾಧ್ಯಕ್ಷರೂ ಆದ ಪಿ.ಎಚ್. ಮಹೇಂದ್ರಪ್ಪ ಅಭಿಪ್ರಾಯಪಟ್ಟರು.
ಬೆಂಬಲ ಬೆಲೆ ಯೋಜನೆಯಡಿ ಎಣ್ಣೆಬೀಜ ಖರೀದಿ
ತುಮಕೂರು: ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಂಘಗಳ ಒಕ್ಕೂಟ, ನಿಯಮಿತ, ಚಿತ್ರದುರ್ಗ, ತುಮಕೂರು ಶಾಖೆ ವತಿಯಿಂದ ಮುಂಗಾರು 2013-14 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ನ್ಯಾಫೆಡ್ ಪರವಾಗಿ ಬೆಂಬಲ ಬೆಲೆ ಯೋಜನೆಯಡಿ ಎಣ್ಣೆಬೀಜಗಳನ್ನು ಖರೀದಿಸಲು ತುಮಕೂರು ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ತುಮಕೂರು ನಗರದಲ್ಲಿ ಜಿಲ್ಲಾ ಕಚೇರಿ, ಪ್ರಾ.ಎ.ಬೀ.ಬೆ.ಸಂ.ನಿಯಮಿತ, 4ನೇ. ಕ್ರಾಸ್, ಎ.ಪಿ.ಎಂ.ಸಿ. ಯಾರ್ಡ್, ತುಮಕೂರು. ಶಿರಾ ನಗರದಲ್ಲಿ ಎ.ಪಿ.ಎಂ.ಸಿ. ಶಿರಾ. ಮಧುಗಿರಿಯಲ್ಲಿ ಎಪಿಎಂಸಿ ಆವರಣ. ಪಾವಗಡದಲ್ಲಿ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ,ದೊಮ್ಮತ್ತಮರಿ, ಕೋಟಗುಡ್ಡ, ಪಳವಳ್ಳಿ, ಮಂಗಳವಾಡ. ಎಫ್.ಎಕ್ಯೂ ಗುಣಮಟ್ಟದ ಶೇಂಗಾಕಾಯಿಗೆ ಬೆಂಬಲ ಬೆಲೆ ಕ್ವಿಂಟಾಲ್ಗೆ 4 ಸಾವಿರ ರು. ಮತ್ತು ಸೂರ್ಯಕಾಂತಿಗೆ 3700 ರು. ನಿಗದಿಯಾಗಿದೆ. ರೈತ ಬಾಂಧವರು ಇದರ ಸದುಪಯೋಗಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತರು ಜಿಲ್ಲಾ ವ್ಯವಸ್ಥಾಪಕರು, ಪ್ರಾ.ಎ.ಬೀ.ಬೆ.ಸ ಸಂಘ, ಎ.ಪಿ.ಎಂ.ಸಿ ತುಮಕೂರು ದೂ.ಸ. 0816-2280687 ಸಂಪರ್ಕಿಸಬಹುದು.
ಮದ್ಯದಂಗಡಿಗಳನ್ನು ಕೂಡಲೇ ತೆರವುಗೊಳಿಸಿ: ದಲಿತರ ಆಗ್ರಹ
ಪಾವಗಡ: ದಲಿತರ ಕಾಲೋನಿಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಮದ್ಯ ದಂಗಡಿಗಳನ್ನು ಕೂಡಲೇ ತೆರವುಗೊಳಿಸುವಂತೆ ಎಚ್ಆರ್ಎಫ್ಡಿನ ಜಿಲ್ಲಾ ಸಂಚಾಲಕ ಕಡಪಲಕೆರೆ ಪಿ.ಹನುಮಂತರಾಯ ಹಾಗೂ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಮಧುಗಿರಿ ವಿಭಾಗದ ಡಿವೈಎಸ್ಪಿ ಗುರುಸ್ವಾಮಿ ಅವರಿಗೆ ಮನವಿ ಮಾಡಿದರು. ಸ್ಥಳೀಯ ಸಮಸ್ಯೆಗಳ ಹಿನ್ನಲೆಯಲ್ಲಿ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ಗುರುಸ್ವಾಮಿ ಪಾವಗಡ ಪೊಲೀಸ್ ಠಾಣೆಗೆ ಭೇಟಿ ಕೂಟ್ಟು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವಾಗ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಹಾಗೂ ತಮಟೆ ಸಂಸ್ಥೆ, ವಿಮೋಚನೆ ಸಂಸ್ಥೆಯ ಅನೇಕ ಮಂದಿ ಪದಾಧಿಕಾರಿಗಳು ಡಿವೈಎಸ್ಪಿ ಅವರನ್ನು ಭೇಟಿ ಮಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಡಿಎಸ್ಪಿ ಜೊತೆ ಎಚ್ಆರ್ಎಫ್ಡಿಎಲ್ನ ಜಿಲ್ಲಾ ಸಂಚಾಲಕ ಕಡಪಲಕೆರೆ ಹನುಮಂತರಾಯ ಮಾತನಾಡಿ ವರ್ಷಗಳಿಂದ ನಿಯಮನುಸಾರ ಪಾವಗಡ ಠಾಣೆ ಸೇರಿದಂತೆ ದಲಿತರ ಕುಂದುಕೊರತೆಗಳ ಸಭೆ ನಡೆಸುತ್ತಿಲ್ಲ. ಅಲ್ಲದೇ ಈ ಬಗ್ಗೆ ಸಂಬಂಧಪಟ್ಟ ಠಾಣಾ ಮೇಲಾಧಿಕಾರಿಗಳು ದಲಿತ ಸಂಘಟನೆಯ ಪದಾಧಿಕಾರಿಗಳೊಂದಿಗೆ ಕೂಡ ಚರ್ಚಿಸುತ್ತಿಲ್ಲ. ಇದು ತಾಲೂಕಿನ ದಲಿತರ ವಿಪರ್ಯಾಸವೆಂದರು.