ವೈವಿಧ್ಯಮಯ ಭಾಷೆ ಕನ್ನಡ: ನರೇಶ್ಬಾಬು
ಶಿರಾ: ಕನ್ನಡ ಭಾಷೆ ವಿವಿಧ ಘಟ್ಟಗಳನ್ನು ದಾಟಿ ವೈವಿಧ್ಯಮಯವಾಗಿ, ಚಲನಶೀಲವಾಗಿ ಬೆಳೆದು ಬಂದ ಭಾಷೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷಚ್ ಶಿರಾ ಘಟಕದ ಅಧ್ಯಕ್ಷ ವೈ. ನರೇಶ್ ಬಾಬು ಅವರು ತಿಳಿಸಿದರು.
ಅವರು ತಾಲೂಕಿನ ಹುಯಿಲ್ ದೊರೆಯ ಶ್ರೀನಿವಾಸ ಪ್ರೌಢಶಾಲೆಯಲ್ಲಿ ಕಸಾಪ ವತಿಯಿಂದ ಏರ್ಪಡಿಸಿದ್ದ ವಚನ ಸಾಹಿತ್ಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳಿಂದ ಕನ್ನಡ ಭಾಷೆಯ ಹುಟ್ಟು, ಬೆಳವಣಿಗೆ ಅದರ ಸದುದ್ದೇಶಗಳ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ ಎಂದರು. ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಬಸವಮೂರ್ತಿ ಅವರು ಕನ್ನಡ ಭಾಷಾ ಸಾಹಿತ್ಯದ ಘಟ್ಟಗಳಲ್ಲಿಯೇ ವಚನ ಸಾಹಿತ್ಯ ಅತ್ಯಂತ ಮಹತ್ವವಾದ ಸಾಹಿತ್ಯ ಪ್ರಕಾರವಾಗಿದ್ದು, ಅದು ಸಮಾಜದ ಎಲ್ಲಾ ವರ್ಗದ ಜನರ ಬೌದ್ಧಿಕ ಮಟ್ಟಕ್ಕೆ ನಿಲುಕುವಂತದ್ದಾಗಿತ್ತು ಎಂದರು. ಬಸವಣ್ಣನವರ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ವಚನವು ಮನುಷ್ಯನಿಗೆ ಆತ್ಮಶುದ್ಧಿಯ ಗುಟ್ಟನ್ನು ಅನಾವರಣಗೊಳಿಸುತ್ತದೆ. ವಚನಕಾರರ ಕಾಯಕ ತತ್ವಕ್ಕೆ ನೀಡಿದ ಮಹತ್ವವು ಯಾವತ್ತಿಗೂ ಮಾದರಿಯಾಗಿರುವಂತದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಕಾರ್ಯದರ್ಶಿಗಳಾದ ಕೋಟೆ ಚಂದ್ರಶೇಖರ್, ಕುಮಾರ್, ಲೋಕೇಶ್, ಸಿ.ಆರ್.ಪಿ. ಗಳಾದ ಎಚ್.ಎಚ್.ಗೌಡ, ಸಾಹಿತಿಗಳಾದ ಕೆ.ಎಸ್.ಚಿದಾನಂದ, ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ನಾಗರಾಜು ನಿರೂಪಿಸಿ ವಂದಿಸಿದರು.