ಸಾಲ ಮರುಪಾವತಿಗೆ ಬ್ಯಾಂಕ್ ಒತ್ತಾಯ: ರೈತರ ಪ್ರತಿಭಟನೆ
ತುರುವೇಕೆರೆ: ಬರದ ಬೇಗೆಯಲ್ಲಿ ರೈತರು ಬಳಲುತ್ತಿದ್ದರೂ ಸಹ ವಾಣಿಜ್ಯ ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕೆಂದು ರೈತರಿಗೆ ಒತ್ತಾಯ ಮಾಡುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ದೊಡ್ಡಾಘಟ್ಟದಲ್ಲಿ ಇರುವ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡಿರುವ ಸಾಲವನ್ನು ಮರು ಪಾವತಿಸಿಕೊಳ್ಳುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲು ಏರುವ ಹಂತವನ್ನು ತಲುಪಿದೆ. ಸಾಲ ಮರು ಪಾವತಿ ಮಾಡಿಸಿಕೊಳ್ಳಲು ಕಾನೂನು ಪ್ರಾಧಿಕಾರದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲೂ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಗೆ ಏಕಾಏಕಿ ಮುಂದಾಗಿವೆ. ಅಲ್ಲದೇ ಕಾನೂನು ಪ್ರಾಧಿಕಾರ ನಡೆಸಿದ ಸಂಧಾನ ಸಭೆಯ ವೇಳೆಯೂ ಸಾಲ ಮರುಪಾವತಿ ಮಾಡಲು ಕೇವಲ ಒಂದು ತಿಂಗಳ ಅವಧಿಯನ್ನು ನೀಡಿದೆ. ಆ ವೇಳೆ ಹಲವಾರು ಮಂದಿಗೆ ಬಡ್ಡಿಯನ್ನು ಮನ್ನಾ ಮಾಡುವ ಭರವಸೆಯನ್ನೂ ಸಹ ನೀಡಿದೆ. ಇಂತಹ ಸ್ಥಿತಿಯನ್ನು ಕಂಡೂ ಸಹ ಬ್ಯಾಂಕ್ ಅಧಿಕಾರಿಗಳು ರೈತರ ಮೇಲೆ ಗಧಾ ಪ್ರಹಾರ ನಡೆಸಲು ಮುಂದಾಗಿದ್ದಾರೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲೇನಹಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ.
ರಸ್ತೆ ತಡೆ: ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮುಂಭಾಗ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆಯನ್ನೂ ಮಾಡಲಾಯಿತು. ರೈತರು ಸರ್ಕಾರ ಹಾಗೂ ಬ್ಯಾಂಕ್ ವಿರುದ್ಧ ಘೋಷಣೆ ಕೂಗಿದರು. ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರನ್ನು ಸಾಲದಿಂದ ಮುಕ್ತರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು. ರೈತರ ಮನವಿಯನ್ನು ಆಲಿಸಿದ ಬ್ಯಾಂಕ್ನ ಸೀನಿಯರ್ ಮ್ಯಾನೇಜರ್ ಎಲ್. ಸೂರ್ಯನಾರಾಯಣ್ ಮಾತನಾಡಿ ಕಾನೂನು ಪ್ರಾಧಿಕಾರದ ಮುಂದೆ 1 ತಿಂಗಳ ಗಡುವನ್ನು ನೀಡಲಾಗಿತ್ತು. ಈ ಗಡುವನ್ನು ಮಾರ್ಚ್ ತಿಂಗಳ ಅಂತ್ಯಕ್ಕೆ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.