ಗೋಣಿತುಮಕೂರಿನ ಸರ್ಕಾರಿ ಶಾಲೆ ಶತಮಾನೋತ್ಸವ
ರು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ 2 ಕೊಠಡಿಗಳ ಉದ್ಘಾಟನೆ
ಕನ್ನಡಪ್ರಭ ವಾರ್ತೆ ತುರುವೇಕೆರೆ ಡಿ.19
ಸರ್ಕಾರಿ ಶಾಲೆಯೊಂದು ಶತಮಾನ ಕಂಡಿದೆ. ಆ ಶಾಲೆಯಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ತಮಗೆ ವಿದ್ಯೆ ನೀಡಿದ ಶಾಲೆಯ ಶತಮಾನೋತ್ಸವಕ್ಕೆ ಬಹಳ ಸಡಗರ ಸಂಭ್ರಮದಿಂದ ಆಗಮಿಸಿದ್ದರು.
ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಶತಮಾನೋತ್ಸವ ನಡೆಸುವುದು ಕಷ್ಟ ಸಾಧ್ಯ. ಆದರೂ ತಾಲೂಕಿನ ಗೋಣಿತುಮಕೂರಿನ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಹಳೇ ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಆಧಾರ ಸ್ಥಂಭವಾಗಿದ್ದ ಶಾಲೆಯ ಶತಮಾನದ ವೈಭವವನ್ನು ವಿರಾಜಿಸಲೇಬೇಕು ಎಂದು ನಿಶ್ಚಯಿಸಿ ಕಾರ್ಯಕ್ರಮವನ್ನು ರೂಪಿಸಿದ್ದರು.
ತುರುವೇಕೆರೆಗೆ ಕೇವಲ 4 ಕಿ ಮೀ ದೂರದಲ್ಲಿರುವ ಗೋಣಿತುಮಕೂರಿನ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಶತಮಾನದ ಹೊಸ್ತಿಲಿನಲ್ಲಿ ನಿಂತಿದೆ. ಅರಸರು ಗ್ರಾಮದ ಅರಸಮ್ಮ ದೇವಾಲಯವನ್ನು ನೋಡಲು ಬಂದವರು ಶಾಲೆ ನಿರ್ಮಾಣಕ್ಕೆ ಮುಂದಾದರು. 1913 ರಲ್ಲಿ ನಿರ್ಮಿಸಿದ್ದ ಹೆಂಚಿನ ಕಟ್ಟಡಗಳು ಇಂದಿಗೂ ಗಟ್ಟಿ ಮುಟ್ಟಾಗಿದೆ. ಮರಿಲಿಂಗಯ್ಯ ಎಂಬ ಶಿಕ್ಷಕರಿಂದ ಪ್ರಾರಂಭವಾದ ಈ ಶಾಲೆ
ಇದುವರೆಗೂ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿಗೆ ಜ್ಞಾನಾರ್ಜನೆ ಮಾಡಿದ ಕೇಂದ್ರ ಸ್ಥಾನವಾಗಿದೆ.
ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಶಾಲೆಯಲ್ಲೇ ಮಕ್ಕಳ ಸಾಸ್ಕೃತಿಕ ಕಲೆಯನ್ನು ಬಿಂಬಿಸಲು ಕುವೆಂಪು ವೇದಿಕೆಯನ್ನು ಅನಾವರಣ ಮಾಡಲಾಯಿತು. ಕುವೆಂಪು ವೇದಿಕೆಯನ್ನು ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಕೃಷ್ಣಪ್ಪ ಶತಮಾನೋತ್ಸವದ ನಿಮಿತ್ತ ಸುಮಾರು 10 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ 2 ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.
ಸಂತಸದ ಸಂಗತಿ: ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಸರ್ಕಾರಿ ಶಾಲೆಗಳು ಸಾರ್ವಜನಿಕರಿಂದ ದೂರ ಇರುವುದು ಸಾಮಾನ್ಯ. ಆದರೆ ಇಲ್ಲಿಯ ಜನರು ತಮ್ಮ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಬಹಳ ಮುತುವರ್ಜಿಯಿಂದ ಬೆಳೆಸಿ, ಪೋಷಿಸಿ ಅದರ ಶತಮಾನೋತ್ಸವವನ್ನೂ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ತಮ್ಮ ಗ್ರಾಮದ ಶಾಲೆ ಶತಮಾನೋತ್ಸವ ಕಂಡಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕ ಈಶ್ವರಯ್ಯ ಮುಖ್ಯ ಶಿಕ್ಷಕರ ಕೊಠಡಿಯನ್ನು ಉದ್ಘಾಟಿಸಿದರು.
ಗ್ರಾಮದ ಮುಖಂಡ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಎಂ.ಲಕ್ಷ್ಮೀಕಾಂತ್ ಮಾತನಾಡಿ ಶತಮಾನ ಕಂಡಿರುವ ಕಟ್ಟಡಗಳು ಇಂದಲ್ಲಾ ನಾಳೆ ಬೀಳುವ ಸ್ಥಿತಿ ತಲುಪಿವೆ. ಆದ್ದರಿಂದ 4 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸರ್ಕಾರವನ್ನು ಕೋರಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಬಿ. ಜಗದೀಶ್, ಇ ಓ ವಾಳ್ವೇಕರ್, ಲೇಖಕ ಕೆ. ಭೈರಪ್ಪ, ತಹಸೀಲ್ದಾರ್ ನಂಜಪ್ಪ, ಬಿಇಓ ರಂಗಧಾಮಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಯ್ಯ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಪ್ಪ, ಮುಖ್ಯೋಪಧ್ಯಾಯ ಮಂಜಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಮ್ಮ, ಕೈಗಾರಿಕೋದ್ಯಮಿ ಗೋವಿಂದಯ್ಯ, ಮಾಜಿ ಸೈನಿಕ ವಿ.ಎ.ಗಂಗಣ್ಣ ಭಾಗವಹಿಸಿದ್ದರು. ಎಸ್.ಡಿ. ಎಂ.ಸಿ ಅಧ್ಯಕ್ಷ ಜಿ.ಕೆ.ನಂಜುಂಡೇಗೌಡ ಶಾಲಾ ಕಾರ್ಯಕ್ರಮಗಳ ಚಾಲನೆಗಾಗಿ ಧ್ವಜಾರೋಹಣ ಮಾಡಿದರು.