ಜಾನಪದ ನೃತ್ಯ: ರಾಜ್ಯಮಟ್ಟಕ್ಕೆ ಆಯ್ಕೆ
ಹುಳಿಯಾರು: ತುಮಕೂರಿನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಜಾನಪದ ನೃತ್ಯ ಪ್ರದರ್ಶನದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೇಘನ, ಭುವನ, ಮಾನಸ, ಯಶಸ್ವಿನಿ, ರಮ್ಯ, ನಿಶ್ಚಿತ ಜಾನಪದ ನೃತ್ಯ ಪ್ರದರ್ಶನದಲ್ಲಿ ಪ್ರಥಮ ಸ್ಥಾನ, ಮೇಘನ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಲಘುಸಂಗೀತ ಗಾಯನ ಸ್ಪರ್ಧೆಯಲ್ಲಿ ಚಿನ್ಮಯಿ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಅಮಿತ್ ಹಾಗೂ ಪ್ರಸನ್ನ ದ್ವಿತೀಯ ಸ್ಥಾನ ಪಡೆದಿದ್ದು, ಶಾಲೆಯ ಅಧ್ಯಕ್ಷರಾದ ಕೆ.ಎಸ್. ಕಿರಣ್‌ಕುಮಾರ್, ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಪ್ರಾಂಶುಪಾಲ ಟಿ.ಎಸ್. ರವಿ ಮಕ್ಕಳನ್ನು ಅಭಿನಂದಿಸಿದರು.
ಬಾಲಕ ನಾಪತ್ತೆ, ಠಾಣೆಯಲ್ಲಿ ದೂರು
ತಿಪಟೂರು: ಪಟ್ಟಣದ ಹಬೀಬ್ ಎಂಬುವರ ಮಗ ರೋಷನ್ (14) ಈಚೆಗೆ ನಡೆದ ಗಣೇಶ ಉತ್ಸವಕ್ಕೆ ಎಂದು ಬಂದವನು ಉತ್ಸವ ಮುಗಿದರೂ ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವ ಘಟನೆ ನಗರಠಾಣೆಯಲ್ಲಿ ದೂರು ದಾಖಲಾಗಿದೆ. ರೋಷನ್ ಗಣಪತಿ ಉತ್ಸವಕ್ಕೆಂದು ಹೋದವನು ಮನೆಗೆ ಬಂದಿಲ್ಲದ್ದರಿಂದ ಸಂಬಂಧಿಗಳು ಮತ್ತು ಸ್ನೇಹಿತರ ಮನೆಗಳೆಲ್ಲಾ ಹುಡುಕಿದರೂ ಪತ್ತೆಯಾಗಿಲ್ಲ. ಈತನ ಚಹರೆ ಕೋಲುಮುಖ, ಸಾಧಾರಣ ಮೈಕಟ್ಟು, ಮೂಗಿನ ಮೇಲೆ ಕಪ್ಪು ಮಚ್ಚೆ ಇರುತ್ತದೆ. 4 ಅಡಿ ಎತ್ತರ, ಕನ್ನಡ ಮತ್ತು ಉರ್ದು ಮಾತನಾಡುತ್ತಾನೆ. ಈತನ ಸುಳಿವು ಸಿಕ್ಕಲ್ಲಿ ನಗರಠಾಣೆ ಪಿಎಸ್‌ಐ ಅವರಿಗಾಗಲಿ ಅಥವಾ 08134-251041 ಗೆ ಸಂಪರ್ಕಿಸಬಹುದೆಂದು ನಗರಠಾಣೆ ಸಬ್‌ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಮರಳು ತುಂಬಿದ ಲಾರಿ ಹರಿದು ವ್ಯಕ್ತಿ ಸಾವು
ಮಧುಗಿರಿ: ವ್ಯಕಿಯೊಬ್ಬ ರಸ್ತೆ ಬದಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಮರಳು ತುಂಬಿದ ಲಾರಿಯೊಂದು ಆ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಧುಗಿರಿ ತಾಲೂಕಿನ ಪುರವರ ಹೋಬಳಿ ಗಿರಿಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗಣ್ಣ(34) ಲಾರಿ ಹರಿದು ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
23 ಕ್ಕೆ ಕುಟುಂಬಕ್ಕಾಗಿ ನಾವು ನೀವು ಸಂವಾದ ಕಾರ್ಯಕ್ರಮ
ಹುಳಿಯಾರು: ಪ್ರಸ್ತುತ ಕುಟುಂಬ ವ್ಯವಸ್ಥೆ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಕುಟುಂಬಕ್ಕಾಗಿ ನಾವು-ನೀವು ಸಂವಾದ ಕಾರ್ಯಕ್ರಮವನ್ನು 23ರ ಸೋಮವಾರದಂದು ಸಂಜೆ 6ಕ್ಕೆ ಪಟ್ಟಣದ ಶ್ರೀಸೀತಾರಾಮ ಕಲ್ಯಾಣಮಂದಿರದಲ್ಲಿ ಆಯೋಜಿಸಲಾಗಿದೆ. ಸಂಘದ ಹಿರಿಯ ಪ್ರಚಾರಕ ಮತ್ತು ಕುಟುಂಬ ಪ್ರಬೋಧನ್ ಪ್ರಮುಖ ಸು.ರಾಮಣ್ಣ ಅವರೊಂದಿಗೆ ಸಂವಾದವಿದ್ದು, ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ವಿವರಕ್ಕೆ ಗಂಗಾಧರ್ (9141769949), ಚನ್ನಬಸವಣ್ಣ(9739355162) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.