ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ರು. 2 ಕೋಟಿ ಬಿಡುಗಡೆ
ಕುಣಿಗಲ್: ತಾಲೂಕಿನ ಎಂಟು ಸರ್ಕಾರಿ ಪ್ರೌಢಶಾಲೆಗಳ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಅಭಿಯಾನ ಯೋಜನೆಯಡಿಯಲ್ಲಿ ಎರಡು ಕೋಟಿ ರು.ಬಿಡುಗಡೆಯಾಗಿದೆ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು. ಗುರುವಾರ, ಪಟ್ಟಣದ ದೊಡ್ಡಪೇಟೆಯಲ್ಲಿನ ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿನ ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಶಿಕ್ಷಕರಿಗೆ ತರಬೇತಿ ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ತಾಲೂಕಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ದುರದೃಷ್ಟಕರ, ಸರ್ಕಾರದ ಅನುದಾನದ ಸಮರ್ಪಕ ಬಳಕೆ ಜೊತೆಯಲ್ಲಿ, ಗುಣಾತ್ಮಕ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ಗಳಿಸುವ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಬೇಕೆಂದರು.
ಸವಾಲಾಗಿ ಸ್ವೀಕಾರ: ಕಡಿಮೆ ಸವಲತ್ತುಗಳಿದ್ದರೂ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದನ್ನು ಸರ್ಕಾರಿ ಶಾಲೆ ಶಿಕ್ಷಕರು ಸವಾಲಾಗಿ ಸ್ವೀಕರಿಸಿ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸದೆ, ಜವಾಬ್ದಾರಿಯಿಂದ ಜಾರಿಕೊಂಡಲ್ಲಿ, ಮುಂದಿನ ದಿನಗಳಲ್ಲಿ ಕೋಟ್ಯಂತರ ರು. ವ್ಯಯಿಸಿ ನಿರ್ಮಿಸಲಾಗುತ್ತಿರುವ ಈ ಶಾಲಾ ಕಟ್ಟಡಗಳು ಪಾಳುಕೊಂಪೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು. ಬಿಇಒ ಸಿದ್ದಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಿ.ಕೃಷ್ಮ, ಪ್ರಾಚಾರ್ಯ ಪುಟ್ಟರಾಮೇಗೌಡ, ಉಪಪ್ರಾಚಾರ್ಯ ಬೋರೇಗೌಡ, ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಬಿ.ಟಿ. ನಾಗರತ್ನಮ್ಮ ಇತರರು ಇದ್ದರು.
ಮಕ್ಕಳಿಗೆ ಲೋಟ ವಿತರಣೆ
ತುರುವೇಕೆರೆ: ತಾಲೂಕಿನ ಮುನಿಯೂರಿನ ಸೇಂಟ್ ಲಿಟ್ಲ್ ಫ್ಲವರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಟಿ.ಎನ್. ಬಸವರಾಜು ಪ್ರತಿಷ್ಠಾನದ ಟಿ.ಎನ್.ಮಂಜುನಾಥ್, ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಕರಿಬಸವಯ್ಯ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ರಂಗಧಾಮಯ್ಯ ಅವರು ಸ್ಟೀಲ್ ಲೋಟವನ್ನು ಕೊಡುಗೆಯಾಗಿ ನೀಡಿದರು. ಸರ್ಕಾರ ಕ್ಷೀರ ಭಾಗ್ಯವನ್ನು ನೀಡಿದೆ. ಶಾಲೆಯಲ್ಲಿ ಓದುತ್ತಿರುವ ಹಲವಾರು ಮಕ್ಕಳು ಬಡತನದಿಂದ ಬಂದಿದ್ದಾರೆ. ಇಂತಹ ಮಕ್ಕಳಿಗೆ ಅನುಕೂಲವಾಗಲಿ ಎಂದು ಲೋಟವನ್ನು ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಜಿ.ಪುಷ್ಪಾ ಪ್ರಾನ್ಸಿಸ್, ಮುಖ್ಯ ಶಿಕ್ಷಕ ಪ್ರಭಾಕರ್ ಇತರರು ಇದ್ದರು.