ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಡಿಸಿ ಕಚೇರಿ ಎದುರು ದುಡಿಯುವ ಮಹಿಳೆ ಹಕ್ಕಿಗಾಗಿ ಧರಣಿ

Srinivasa Murthy VN
Updated On : 21 Dec 2013, 11:48 am

ಕ.ಪ್ರ.ವಾರ್ತೆ ತುಮಕೂರು ಡಿ. 21
ದುಡಿಯುವ ಮಹಿಳೆಯ ಹಕ್ಕಿಗಾಗಿ ಸಿಐಟಿಯು ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ  ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು ಉದಾರೀಕರಣ ನೀತಿಯಿಂದಾಗಿ ದುಡಿಯುವ ಮಹಿಳೆಯರ ಹೈರಾಣರಾಗಿದ್ದಾರೆ. ಅಸಂಘಟಿತ ವಲಯದ ಹಾಗೂ ಸಾಂಪ್ರದಾಯಿಕ ಉದ್ದಿಮೆಯಲ್ಲಿ ದುಡಿಯುವ ಮಹಿಳೆಯರಿಗೆ ಸಾಮಾಜಿಕ ಭದ್ರತೆಗಳು ಯಾವುದೇ ರಕ್ಷಣೆಗಳು ಇಲ್ಲದೆ ಸಂಕಷ್ಟದಲ್ಲಿದೆ ಎಂದರು.
ಸರ್ಕಾರದ ವಿವಿಧ ಯೋಜನೆಗಳಲ್ಲಿ ಅಪೌಷ್ಟಿಕತೆ, ಶಿಕ್ಷಣ, ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಷಗಟ್ಟಲೆ ದುಡಿಯುವ ಮಹಿಳೆಯರಿಗೆ ಕನಿಷ್ಠ ಕಾನೂನಿನ ರಕ್ಷಣೆಗಳು ಇಲ್ಲದೆ ದುಡಿಸಲಾಗುತ್ತಿದೆ. ಹೊರಗುತ್ತಿಗೆ ಹಾಗೂ ಗೃಹಾಧಾರಿತ ಉದ್ದಿಮೆಗಳಲ್ಲಿಯೂ ಸಹಾ ಮಹಿಳೆಯರನ್ನು ಕಾನೂನು ಬಾಹಿರವಾಗಿ ದುಡಿಸಿಕೊಂಡು ಉಪಯೋಗಿಸಿ ಬಿಸಾಡು ಎಂಬ ನೀತಿಯನ್ನು ಜಾರಿಮಾಡಲಾಗುತ್ತಿದೆ ಎಂದರು.
ದುಡಿಯುವ ಮಹಿಳೆಯರ ಮೂಲಭೂತ ಹಕ್ಕುಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ ಹೆರಿಗೆ ರಜೆ ಭತ್ಯೆ, ವಿಶ್ರಾಂತಿಕೊಠಡಿ, ಪ್ರತ್ಯೇಕ ಶೌಚಾಲಯಗಳು, ನೀಡುವಲ್ಲಿ, ಅತಿಯಾದ ನಿರಾಸಕ್ತಿ ಹಾಗೂ ನಿರ್ಲಕ್ಷ್ಯವನ್ನು ಖಂಡಿಸಿ ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ಕಿರುಕುಳಗಳು ತಡೆಗಟ್ಟುವಂತೆ ಆಗ್ರಹಿಸಿದರು.
ಧರಣಿಯಲ್ಲಿ ತಿಪಟೂರು ತಾಲೂಕಿನ ಅನುಸೂಯ, ಪಾವಗಡ ತಾಲೂಕಿನ ಸುಶೀಲ, ಶಿರಾ ತಾಲೂಕಿನ ನಾಗರತ್ನ, ಕುಣಿಗಲ್ ತಾಲೂಕಿನ ಗುಲ್ಜಾರ್ ಬಾನು, ಶಾಂತಕುಮಾರಿ, ಸಿಐಟಿಯುಟಿನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಸಂಚಾಲಕ ಕಮಲ, ಕೊಳಗೇರಿ ನಿವಾಸಿಗಳ ಹಿತರಕ್ಷಾಣ ಸಮಿತಿಯ ನರಸಿಂಹಮೂರ್ತಿ ಮಾತನಾಡಿದರು. ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯನವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಧರಣಿ ನೇತೃತ್ವನ್ನು ವಿಜಯಮ್ಮ, ರಂಗಮ್ಮ, ಸುನಂದ, ಡಿ,ವೈ.ಎಫ್.ಐ.ನ ರಾಘವೇಂದ್ರ, ಕಟ್ಟಡ ಕಾರ್ಮಿಕರ ಫೆಡರೇಷನ್‌ನ ಬಿ. ಉಮೇಶ್, ತಿಪಟೂರು ಶೈಲ, ಕೊರಟಗೆರೆ ಶಾಂತ, ಪಾವಗಡ ಸುಕನ್ಯ, ಮಧುಗಿರಿ ಹಾಲಮ್ಮ ಮೊದಲಾದವರು ವಹಿಸಿದ್ದರು.
ಮನವಿ ಸ್ವೀಕರಿಸಲು ಬಂದ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮಹಿಳೆಯರು ಶೌಚಾಲಯದ ಕನಿಷ್ಠ ಅಗತ್ಯತೆಯನ್ನು ಒದಗಿಸದೆ ಇರುವ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಯಿಸಿದ ಪೆದ್ದಪ್ಪಯ್ಯನವರು ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement