ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಮಾಷೆ ಜೀವ ತೆಗೆಯಿತು

Srinivasa Murthy VN
Updated On : 21 Dec 2013, 11:51 am

ಚಿಕ್ಕಬಳ್ಳಾಪುರ/ಗುಡಿಬಂಡೆ: ವಿದ್ಯಾರ್ಥಿ ನಿಲಯದಲ್ಲಿ ಶಾಲಾ ವಿದ್ಯಾರ್ಥಿಗಳ ನಡುವೆ ನಡೆದ ತಳ್ಳಾಟದಲ್ಲಿ ನಿಯಂತ್ರಣ ತಪ್ಪಿ ಗೋಡೆ ಮೇಲೆ ಬಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಪೆರೇಸಂದ್ರ ಸಮೀಪದ ಮೊರಾರ್ಜಿ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ಖಾಜಾ ಮೊಯಿನುದ್ದೀನ್ ಮತ್ತು ಫರೀದಾ ದಂಪತಿಗಳ ಪುತ್ರ ಮಹಮದ್ ಸಲ್ಲಾವುದ್ದೀನ್ (14) ಎಂದು ಗುರ್ತಿಸಲಾಗಿದೆ.
ಶನಿವಾರ ರಾತ್ರಿ 10.30 ರ ಸಮಯದಲ್ಲಿ ವಸತಿ ನಿಲಯದ ಕೊಠಡಿಯಲ್ಲಿ ಮಹಮದ್ ಸಲಾವುದ್ದೀನ್ ಮತ್ತು ಸಹಪಾಠಿ ಅಬ್ಬಾಸ್ ಖಾನ್ ಚೆಂಡಾಟವಾಡುತ್ತಿದ್ದರು. ಈ ಸ್ಪರ್ಧೆಯಲ್ಲಿ ಚೆಂಡನ್ನು ಕಿತ್ತುಕೊಳ್ಳುವ ಆತುರದಲ್ಲಿ ಅಬ್ಬಾಸ್ ಖಾನ್ ಜೋರಾಗಿ ತಳ್ಳಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿ ಗೋಡೆಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸಲ್ಲಾವುದ್ದೀನ್ ತಲೆಗೆ ತೀವ್ರ ಪೆಟ್ಟು ತಗುಲಿದ ಹಿನ್ನೆಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೊಠಡಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಸಲ್ಲಾವುದ್ದೀನ್‌ಗೆ ನೀರು ಕುಡಿಸಲು ಯತ್ನಿಸಿದ್ದರ ಜೊತೆಗೆ ವಾರ್ಡನ್ ಮಂಜುನಾಥ್ ಮತ್ತು ಪ್ರಾಂಶುಪಾಲ ಶ್ರೀನಿವಾಸ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸಮೀಪದ ಪೆರೇಸಂದ್ರ ಆಸ್ಪತ್ರೆಗೆ, ಆ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಲ್ಲಾವುದ್ದೀನನ್ನು ಕರೆದುಕೊಂಡು ಬಂದಿದ್ದು ತಪಾಸಣೆ ನಡೆಸಿದ ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆಯ ಸ್ಥಳಕ್ಕೆ ಗುಡಿಬಂಡೆ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಮತ್ತು ಚಿಕ್ಕಬಳ್ಳಾಪುರ ಸರ್ಕಲ್ ಇನ್ಸ್ ಪೆಕ್ಟರ್ ಬಾಲಾಜಿ ಸಿಂಗ್ ಭೇಟಿ ನೀಡಿ ಪರಿಶೀಲಿಸಿ ವಿಚಾರಣೆ ನಡೆಸಿದರು. ಶವಪರೀಕ್ಷೆಗೆ ಕ್ರಮ ಕೈಗೊಂಡರು.
ವಿದ್ಯಾರ್ಥಿಗಳು ಆಟವಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದೆ ಎಂದು ಸದ್ಯ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
10 ನೇ ತರಗತಿ ಪರೀಕ್ಷೆಗೆ ಸಿದ್ಧವಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ವಸತಿ ನಿಲಯದ ಶಿಕ್ಷಕರು ಮಗ್ನರಾಗಿದ್ದರು. ಈ ನಡುವೆ ಸುಮಾರು 8 ಮಂದಿಯಿದ್ದ ಕೊಠಡಿಯಲ್ಲಿ ಸಲ್ಲಾವುದ್ದೀನ್ ಮತ್ತು ಅಬ್ಬಾಸ್ ಖಾನ್ ಆಟವಾಡುತ್ತಿದ್ದರು. ಆಗ ದುರ್ಘಟನೆ ನಡೆದಿದೆ ಎಂದು ನಿಲಯದ ಸಿಬ್ಬಂದಿ ತಿಳಿಸಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಯ ಮುಂಭಾಗ ಮೃತ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement