ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಆಶಾದೀಪ

Srinivasa Murthy VN
Updated On : 2 Feb 2013, 11:03 am

ಶಿರಾ: ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಅದ್ಭುತ ಜ್ಞಾನ ಭಂಡಾರ ಹಾಗೂ ಯುವ ಚಿಂತನೆಯ ಆಶಾದೀಪ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿರೇಶಾನಂದ ಸರಸ್ವತಿ ಸ್ವಾಮೀಜಿಯವರು ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಅವರಣದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ, ರಾಮಕೃಷ್ಣ ಶಾರದಾ ಸತ್ಸಂಗ ಕೇಂದ್ರ, ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆ ಹಾಗೂ ಯುವ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮ ಗಾಂಧಿ ತಮ್ಮ ಆತ್ಮ ಚರಿತ್ರೆಯಲ್ಲಿ ವಿವೇಕಾನಂದರ ಜೀವನ ಮತ್ತು ಸಂದೇಶವನ್ನು ಅಧ್ಯಯನ ಮಾಡಿದ ಮೇಲೆ ನನ್ನ ರಾಷ್ಟ್ರ ಭಕ್ತಿ 1000 ಪಟ್ಟು ಹೆಚ್ಚಾಯಿತು ಎಂದು ಬರೆದಿದ್ದಾರೆ. ಚಕ್ರವರ್ತಿ ರಾಜಗೋಪಾಲಚಾರಿ ಅವರು ವಿವೇಕಾನಂದರು ಭಾರತ ದೇಶದಲ್ಲಿ ಜನಿಸದಿದ್ದರೆ ಭಾರತಕ್ಕೆ ಸ್ವಾತಂತ್ರವೆ ಸಿಗುತ್ತಿರಲಿಲ್ಲ ಮತ್ತು ನಮ್ಮ ಧರ್ಮ ಉಳಿಯುತ್ತಿರಲಿಲ್ಲ ಎಂದಿದ್ದಾರೆ. ವಿವೇಕಾನಂದರ ಆಗಮನದಿಂದ ಭಾರತೀಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದೆಯುಬ್ಬಿಸಿ ನಿಲ್ಲುವಂತಾಗಿದೆ ಎಂದು ತಿಳಿಸಿದರು.
ಭರವಸೆ: ನೂರಾರು ದೇವರಗಳನ್ನು ನಂಬುವುದಕ್ಕಿಂತ ನಿಮ್ಮನ್ನು ನೀವು ನಂಬಿರಿ ಎನ್ನುವ ಹೊಸ ವೇದಾಂತವನ್ನು ವಿವೇಕಾನಂದರು ಹುಟ್ಟು ಹಾಕಿದರು. ನನ್ನ ಶಕ್ತಿಯುತ ಚಿಂತನೆಗಳನ್ನು ಆನಂದಿಸುವ, ಬದುಕಿನಲ್ಲಿ ಸಕಾರಗೊಳಿಸುವ ತಾಕತ್ತು ಇರುವುದು ಯುವಜನತೆಗೆ ಮಾತ್ರ ಎನ್ನುವುದು ವಿವೇಕಾನಂದರ ನಂಬಿಕೆಯಾಗಿತ್ತು. ಅದಕ್ಕೆ ಅವರು ಮುಂದಿನ ನೂರು ವರ್ಷಗಳ ನಂತರ ಮತ್ತೆ ಹುಟ್ಟಿ ಬರುತ್ತೇನೆ. ಸಾವಿರಾರು ಯುವಕರ ಹೃದಯವನ್ನು ಪ್ರವೇಶ ಮಾಡುತ್ತೇನೆ. ನನ್ನ ಕನಸುಗಳನ್ನು ಕಾಳ್ಗಿಚ್ಚಿನಂತೆ, ಚಂಡಮಾರುತದಂತೆ ಯುವಕರು ಸಕಾರಗೊಳಿಸಲಿದ್ದಾರೆ ಎನ್ನುವ ಭರವಸೆಯ ಮಾತನ್ನು ಶ್ರೀ ವಿವೇಕಾನಂದರು ನೀಡಿದ್ದರು ಎಂದರು.
ಸಾಮರಸ್ಯ ಜೀವನ ಅಗತ್ಯ: ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ ಅವರು ಮನುಷ್ಯರು ಸಾಮರಸ್ಯ ಜೀವನ ನಡೆಸಬೇಕು. ಕಾವಿ ಒಂದು ತ್ಯಾಗ, ಬಲಿದಾನದ ಸಂಕೇತ ಜಾತಿಗಳ ಹೆಸರಿನಲ್ಲಿ ಮಠಗಳನ್ನು ಕಟ್ಟುತ್ತಿದ್ದಾರೆ, ಆದರೆ ತುಮಕೂರಿನ ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿ ಸ್ವಾಮಿಗಳು ಯಾವುದೇ ಜಾತಿ ಮತದ ಹೆಸರಿಲ್ಲದೆ ಜನರನ್ನು ಮನುಷ್ಯರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಶಿರಾದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಯುವ ಜನೋತ್ಸವ ಕಾರ್ಯಕ್ರಮ ಯುವಕರಿಗೆ ದಾರಿದೀಪ ತೊರಿಸುವ ಕಾರ್ಯಕ್ರಮವಾಗಿದೆ. ಶಿರಾ ನಗರದಲ್ಲಿ ಒಂದು ರಾಮಕೃಷ್ಣ ಮಠಕ್ಕೆ 4 ಎಕರೆ ಭೂಮಿಯನ್ನು ಸೂಚಿಸಿದ್ದು ಇದನ್ನು ಶೀಘ್ರದಲ್ಲೆ ಮಠಕ್ಕೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ಪ್ರಶಸ್ತಿ ಪಡೆದಿದ್ದಾರೆ: ದಾವಣಗೆರೆಯ ರಸಾಯನ ಶಾಸ್ತ್ರ ಉಪನ್ಯಾಸಕಿ ಅನಸೂಯ ಅವರು ವಿವೇಕಾನಂದರ ವೈಜ್ಞಾನಿಕ ಚಿಂತನೆ ಬಗ್ಗೆ ಮಾತನಾಡಿ ನಮ್ಮ ಭಾರತ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ನಮ್ಮ ಪುರಾಣ ಪುರುಷರು ಹೇಳಿರುವುದನ್ನು ಇಂದು ಬೇರೆ ದೇಶದವರು ಬಳಸಿಕೊಂಡು ಹಲವಾರು ಸಂಶೋಧನೆಗಳನ್ನು ಮಾಡಿ ನೊಬೆಲ್ ಪ್ರಶಸ್ತಿಯಂತಹ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ಭಾರತೀಯರಾದ ನಾವು ಅವುಗಳನ್ನು ನಂಬದೆ ಅನುಮಾನದ ದೃಷ್ಟಿಯಿಂದ ನೋಡಿ ಸುಮ್ಮನಾಗುತ್ತಿದ್ದೆವೆ ಎಂದರು.
ಹಾವೇರಿ ಶ್ರೀ ರಾಮಕೃಷ್ಣ ಮಠದ ಶ್ರೀ ಪ್ರಕಾಶನಂದ ಜೀ  ಮಾತನಾಡಿ ವಿವೇಕಾನಂದರು ಸೇವೆಗಳ ಬಗ್ಗೆ ಮಹತ್ತರವಾದ ವಾಕ್ಯವನ್ನು ಹೇಳಿದ್ದಾರೆ. ಸೇವೆಯನ್ನು ಮಾಡುವವರು ಸೇವೆ ಮಾಡಿಸಿಕೊಂಡವರಿಗೆ ಧನ್ಯವಾದ ಹೇಳಬೇಕು. ಸೇವೆ ಅತ್ಯಂತ ಆನಂದ ಕೊಡುವ ಕೆಲಸವಾಗಿದೆ ಎಂದರು.
ಸಮ್ಮೇಳನದಲ್ಲಿ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಜನಾರ್ದನಯ್ಯ, ನಗರಸಭೆ ಆಯುಕ್ತ ಬಿ.ಟಿ.ರಂಗಸ್ವಾಮಿ, ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೆಶಕ ಜಯಪ್ರಕಾಶ್, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೆಶಕ ಸಿ.ಬಿ.ರಂಗಯ್ಯ, ಪ್ರಾಚಾರ್ಯ ಕೆ.ಸೋಮಶೇಖರಪ್ಪ, ಮುಖಂಡ ಎಸ್.ಎನ್.ಕೃಷ್ಣಯ್ಯ, ಮತ್ತಿತರರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement