ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ

Srinivasa Murthy VN
Updated On : 18 Feb 2013, 11:48 am

ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಹುಲಿಯೂರುದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್ ಅಭಿಮತ
ಕುಣಿಗಲ್: ಗ್ರಾಮಾಂತರ ಪ್ರದೇಶದ ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುವವರೆಗೂ ಸದೃಢ, ಶಕ್ತಿಶಾಲಿ ಸಮಾಜ ನಿರ್ಮಾಣ ಅಸಾಧ್ಯ ಎಂದು ಹುಲಿಯೂರುದುರ್ಗ ಗ್ರಾಪಂ ಅಧ್ಯಕ್ಷ ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಹುಲಿಯೂರುದುರ್ಗದ ಅಂಬೇಡ್ಕರ್ ಭವನದಲ್ಲಿ ಐಡಿಎಫ್ ಸುಜೀವನ ಒಕ್ಕೂಟದ ವತಿಯಿಂದ ಕೌಶಲ್ಯಾಧಾರಿತ ಉದ್ಯಮಶೀಲತೆ ತರಬೇತಿ ಯೋಜನೆಯಡಿಯಲ್ಲಿ, ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಕಳೆದ ಎರಡು ತಿಂಗಳಿನಿಂದ ನಡೆದ ಟೈಲರಿಂಗ್, ಕಸೂತಿ ಕಲೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ, ಯಶಸ್ವಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶದ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಟೈಲರಿಂಗ್, ಕಸೂತಿ ಕಲೆ ಸೇರಿದಂತೆ ಇತರೆ ಗೃಹ ಆಧರಿತ ಉದ್ದಿಮೆ ನಿರ್ವಹಣೆ ಬಗ್ಗೆ ತರಬೇತಿ ಪಡೆದು, ಅವುಗಳನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಜೊತೆಯಲ್ಲಿ, ಸ್ವಸಹಾಯ ಸಂಘಗಳು ಹಮ್ಮಿಕೊಳ್ಳುವ ಸಾಮಾಜಿಕ, ಶೈಕ್ಷಣಿಕ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮಗಳಲ್ಲೂ ಪರಿಣಾಮಕಾರಿಯಾಗಿ ಪಾಲ್ಗೊಂಡು ಆರ್ಥಿಕವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಬಲರಾಗಿ ಶಕ್ತಿಶಾಲಿ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ಅಭಿವೃದ್ಧಿ ಹೊಂದಲಿ: ಐಡಿಎಫ್ ದತ್ತಿಮಂಡಳಿ ಸದಸ್ಯರಾದ ಎಚ್.ಇ. ಶಿವಪ್ಪ, ಐಡಿಎಫ್ ಸುಜೀವನ ಒಕ್ಕೂಟದ ವತಿಯಿಂದ ಗ್ರಾಮಾಂತರ ಪ್ರದೇಶದ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಕ್ಕೂಟ ಕಲ್ಪಿಸಿರುವ ಹಲವು ಯೋಜನೆಗಳ ಸದುಪಯೋಗವನ್ನು ಗ್ರಾಮಾಂತರ ಪ್ರದೇಶದ ಜನತೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕೆಂದರು.
ಖೇದಕರ: ತಾಪಂ ಸದಸ್ಯೆ ಉಮಾ ವೆಂಕಟೇಶ್, ಪುರುಷ ಪ್ರಧಾನ ಸಮಾಜದಲ್ಲಿ ಸರಿಸಮಾನರಾಗಿ ಎಲ್ಲಾ ರಂಗಗಳಲ್ಲೂ ಮಹಿಳೆಯರು ದುಡಿಯುತ್ತಾ ಸಾಧಿಸಿ ತೋರಿಸುತ್ತಿದ್ದಾರೆ. ಆದರೂ ಕೆಲವೊಂದು ಕಹಿಘಟನೆಗಳು ಸ್ತ್ರೀಯರ ಮನೋಬಲ ಕುಂದುವಂತೆ ಘಟಿಸುತ್ತಿರುವುದು ಖೇದಕರ. ಇಂತಹ ಹಲವು ಎಡರು ತೊಡರುಗಳನ್ನು ಮೆಟ್ಟಿನಿಲ್ಲುವ ಆತ್ಮಾಭಿಮಾನವನ್ನು ಮಹಿಳೆಯರು ಹೊಂದಬೇಕೆಂದರಲ್ಲದೆ, ಪ್ರಸ್ತುತ ಶಿಬಿರದಲ್ಲಿ ಯಶಸ್ವಿಯಾಗಿ ತರಬೇತಿ ಪೂರೈಸಿರುವ ಮಹಿಳೆಯರ ಪೈಕಿ ಆರ್ಥಿಕವಾಗಿ ದುರ್ಬಲರಾದವರಿಗೆ ತಾಪಂ ನಿಧಿಯಿಂದ ಹತ್ತು ಟೈಲರಿಂಗ್ ಮೆಷಿನ್ ಕೊಡಿಸುವ ಭರವಸೆ ನೀಡಿದರು.
ಜೀವನೋಪಾಯ ಉತ್ತೇಜನ ಅಧಿಕಾರಿ ಅಶ್ವತ್ಥಪ್ಪ, ಕಲಿಕಾ, ಮೌಲ್ಯಮಾಪನಾಧಿಕಾರಿಯಾದ ಮನುಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement