ನಾಳೆಯಿಂದ ತಿಮ್ಮಪ್ಪಸ್ವಾಮಿ ಮಠದಲ್ಲಿ ಜಾತ್ರಾ ಮಹೋತ್ಸವ
ಕೊರಟಗೆರೆ: ತಾಲೂಕಿನ ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೆಶ್ವರಿ ಸುಕ್ಷೇತ್ರ ತಿಮ್ಮಪ್ಪಸ್ವಾಮಿ ಮಠದಲ್ಲಿ ಫೆ.21 ರಿಂದ 25 ವರೆಗೆ 3 ನೇ ವರ್ಷದ ದನಗಳ ಜಾತ್ರಾ ಮಹೋತ್ಸವ ಏರ್ಪಡಿಸಿರುವುಗಿ ಪೀಠಾಧ್ಯಕ್ಷ ಬಸವ ಮಹಾಲಿಂಗಸ್ವಾಮಿ ತಿಳಿಸಿದ್ದಾರೆ.
ಅವರು ಪಟ್ಟಣದ ಸುವರ್ಣಮುಖಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ದನಗಳ ಜಾತ್ರೆಯು 5 ದಿನಗಳ ಕಾಲ ನಡೆಯಲಿದ್ದು, ಜಾತ್ರೆಗೆ ಬರುವ ರಾಸುಗಳಿಗೆ ಉಚಿತ ಪಶು ವೈದ್ಯಕೀಯ ಚಿಕಿತ್ಸೆ, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರಾತ್ರಿ ವೇಳೆ ವಿದ್ಯುತ್ ವ್ಯವಸೆಯೊಂದಿಗೆ ಭಕ್ತಾದಿಗಳಿಗೆ ಸುತ್ತಮುತ್ತಲ ಗ್ರಾಮಸ್ಥರಿಂದ ಮತ್ತು ಡಾ.ಜಿ. ಪರಮೇಶ್ವರ್ ಅಭಿಮಾನಿ ಬಳಗ ದಿಂದ ಉಚಿತ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು ರೈತ ಬಾಂದವರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಕರೆತರುವಂತೆ ಕೋರಿದ್ದಾರೆ.
ಫೆ.21 ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಜಿ.ಪಂ.ಅಧ್ಯಕ್ಷೆ ಪ್ರೇಮಾಮಹಾಲಿಂಗಪ್ಪ ದನಗಳ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸುವರು ತುಮಕೂರು ಸಿದ್ದಗಂಗ ಮಠದ ಕಿರಿಯ ಶ್ರೀ ಸಿದ್ದಲಿಂಗಮಹಾಸ್ವಾಮಿ, ಸಿದ್ದರಬೆಟ್ಟ ಬಾಳೆಹೊನ್ನೂರು ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯಸ್ವಾಮಿ, ತಂಗನಹಳ್ಳಿ ತಿಮ್ಮಪ್ಪಸ್ವಾಮಿ ಮಠದ ಬಸವಮಹಾಲಿಂಗಸ್ವಾಮಿಗಳು ಸಾನಿಧ್ಯ ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಶಿವಣ್ಣ, ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಮಾಜಿ ಶಾಸಕ ಗೌರಿಶಂಕರ್, ಅಬಕಾರಿ ಇಲಾಖೆ ಆಯುಕ್ತ ಡಾ.ಸಿ.ಸೋಮಶೇಖರ್, ಜಿ.ಪಂ.ಸದಸ್ಯರಾದ ಸುಧಾಕರಲಾಲ್, ದಾಕ್ಷಾಯಿಣಿ ರಾಜಣ್ಣ, ಪ್ರಸನ್ನಕುಮಾರ್, ಪಿ.ಎನ್. ಕೃಷ್ಣಮೂರ್ತಿ, ಸೇರಿದಂತೆ ಇನ್ನಿತರರು ಭಾಗವಹಿಸುವರು.
ಪ್ರತಿಕಾ ಗೋಷ್ಠಿಯಲ್ಲಿ ಸಂಕೇನಹಳ್ಳಿ ಪ್ರಕಾಶ್, ಗಂಗಾಧರಪ್ಪ ಇತರರು ಹಾಜರಿದ್ದರು.
ತಹಸೀಲ್ದಾರ್ರಿಂದ ಅಧಿಸೂಚನೆ
ಶಿರಾ: ಸ್ಥಳೀಯ ನಗರಸಭೆ ಚುನಾವಣೆಗೆ ಸಂಬಂಧಪಟ್ಟಂತೆ ತಹಸೀಲ್ದಾರ್ ಅವರು ಅಧಿಸೂಚನೆ ಹೊರಡಿಸಿದ್ದು ಅದರಂತೆ ಫೆ. 23 ಶನಿವಾರ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾವಾಗಿದೆ. ನಾಮಪತ್ರಗಳನ್ನು ಪರಿಶೀಲಿಸುವ ಫೆ. 25, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ಫೆ. 27, ಮತದಾನ ಅವಶ್ಯವಿದ್ದರೆ ಮಾ. 7 ಗುರುವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯುತ್ತದೆ. ಮರು ಮತದಾನ ಅವಶ್ಯಕವಿದ್ದಲ್ಲಿ ಮಾ. 9 ಶನಿವಾರ, ಮತದಾನ ನಡೆಯುತ್ತದೆ. ಮಾ.11 ರಂದು ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.