ಸಾಮಾಜಿಕ ಚಿಂತನೆಗಳ ಪರಿವರ್ತಕ ಸಿದ್ಧರಾಮರು
ತಿಪಟೂರು: ಹನ್ನೆರಡನೇ ಶತಮಾನದ ಶರಣರಲ್ಲಿ ಸೊನ್ನಲಿಗೆ ಸಿದ್ಧರಾಮರು ಇಂದಿನ ಜನಮನದಲ್ಲಿ ಶ್ರೇಷ್ಠ ಶರಣರಾಗಿ ಪ್ರತಿಷ್ಠಾಪಿತವಾಗಿದ್ದಾರೆ. ಜಾತಿಭೇದ ಮಾಡದೆ ವ್ಯವಸಾಯ, ಪಶುಪಾಲನೆ, ಕೆರೆಕಟ್ಟೆ ಕಟ್ಟಡಗಳನ್ನು ನಿರ್ಮಿಸುವಲ್ಲಿ ಶ್ರಮಿಸಿದ ದೈವಿಕ ವ್ಯಕ್ತಿ ಪವಾಡ ಪುರುಷನಾಗಿ, ಎಲ್ಲ ಜನಾಂಗಗಳಲ್ಲಿಯೂ ಆರಾಧಿಸಲ್ಪಡುವ ಶರಣನಾಗಿ ಹೊರಹೊಮ್ಮಿದವರು ಸಿದ್ಧರಾಮರು ಎಂದು ನಿವೃತ್ತ ಪ್ರಾಚಾರ್ಯ ಎಚ್.ಎಸ್. ಯೋಗಾನಂದಮೂರ್ತಿ ತಿಳಿಸಿದರು.
ನಗರದ ತಾಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಆಯೋಸಿದ್ದ ಶ್ರೀ ಸಿದ್ಧರಾಮ ಜಯಂತಿ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜ್ಞಾನ ಯೋಗಿಯಾಗಿ, ಕರ್ಮಯೋಗಿಯಾಗಿ, ಶಿವಯೋಗಿಯಾಗಿ ಸಾಮಾಜಿಕ ಚಿಂತನೆಗಳ ಪರಿವರ್ತಕನಾಗಿ, ಜಾತಿ ಭೇದವಿಲ್ಲದೆ ಹಲವು ಸಿದ್ಧಾಂತಗಳನ್ನು ಬದುಕಿನಲ್ಲಿ ತೋರಿಸಿಕೊಟ್ಟ ಸಿದ್ಧರಾಮೇಶ್ವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ ಯುವಪೀಳಿಗೆ ಜಾಗೃತರಾಗಿ ಭವಿಷ್ಯದ ಬದುಕಿನಲ್ಲಿ ಅವರ ಮಾರ್ಗದರ್ಶನವನ್ನು ಅಳವಡಿಸಿಕೊಂಡು ಉತ್ತಮ ಸಾಧನೆಯತ್ತ ಸಾಗಬೇಕೆಂದರು.
ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ಧರಾಮ ಶರಣರ ಜೀವನ ಸರ್ವಾನುಕರಣೀಯ ಎಂದರು. ಜಿ.ಗಂಗಪ್ಪನವರು ಸಿದ್ಧರಾಮೇಶ್ವರನ ತತ್ವಗಳನ್ನು ಉಪಕಥೆಯ ಮೂಲಕ ವಿವರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಾಲಕೃಷ್ಣ ಮಾತನಾಡಿ ನಿವೃತ್ತ ನೌಕರರ ಸಂಘವು ನೌಕರ ಕುಂದು ಕೊರತೆಗಳನ್ನು ಕುರಿತ ಚರ್ಚೆಗಳಿಗೆ ಸೀಮಿತವಾಗದೆ ಕಲೆ, ಸಾಹಿತ್ಯ, ಆಧ್ಯಾತ್ಮಿಕ, ಸಾಮಾಜಿಕ ಚಿಂತನೆಗಳ ಕಡೆಗೆ ಗಮನಹರಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.
ವಿ.ಎನ್. ಮಹದೇವಯ್ಯ, ಫಾಲಾಕ್ಷಮೂರ್ತಿ, ಜಿ.ಗಂಗಾಧರ್, ಬಸವರಾಜು, ಪರಶುರಾಮನಾಯಕ್, ಎಸ್.ಸುಮನ ಮತ್ತಿತರರಿದ್ದರು. ಎಚ್.ಎಚ್. ಗಂಗಾಧರಾಚಾರ್, ಗಂಗಣ್ಣ, ರಾಮಶೆಟ್ಟಿ, ಶಿವಲಿಂಗಪ್ಪ ಅವರಿಂದ ಸಾಹಿತ್ಯ ಕಾರ್ಯಕ್ರಮಗಳು ನಡೆದವು.
ಶ್ರೀನಿವಾಸಮೂರ್ತಿ ಪ್ರಾರ್ಥಿಸಿ, ಕೆ.ಬಾಲಕೃಷ್ಣ ಸ್ವಾಗತಿಸಿ, ಕೆ.ಪಿ.ವೆಂಕಟರಾಮು ವಂದಿಸಿದರು.