ರು. 3 ಲಕ್ಷ ಮೌಲ್ಯದ ಚಿನ್ನಾಭರಣ ಮೃತರ ಕುಟುಂಬಕ್ಕೆ ಹಸ್ತಾಂತರ: ಸಿಬ್ಬಂದಿ ಪ್ರಾಮಾಣಕತೆಗೆ ಶ್ಲಾಘನೆ
ಕುಣಿಗಲ್: ಕಳೆದ ಭಾನುವಾರ ರಾತ್ರಿ ನಡೆದ ಭೀಕರ ಸರಣಿ ಅಪಘಾತದಲ್ಲಿ, ಮೃತಪಟ್ಟ ಮಹಿಳೆಗೆ ಸೇರಿದ ಸುಮಾರು ಮೂರು ಲಕ್ಷ ರು.ಮೌಲ್ಯದ ಚಿನ್ನಾಭರಣವನ್ನು ಕುಣಿಗಲ್ 108 ವಾಹನದ ಸಿಬ್ಬಂದಿ ಮೃತರ ಕಡೆಯವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಜೊತೆಗೆ ಪ್ರಾಮಾಣಿಕತೆ ಮೆರೆದು ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಭಾನುವಾರ ರಾತ್ರಿ ಪಟ್ಟಣದ ಹೊರವಲಯದ ಬೈಪಾಸ್‌ನ ರಾಹೆ 48ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಎರಡು ಕಾರುಗಳು ಸೇರಿದಂತೆ ಒಟ್ಟಾರೆ ಎಂಟು ವಾಹನಗಳು ಒಮ್ಮೆಲೆ ಅಪಘಾತಕ್ಕೀಡಾಗಿ, ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೆ, ಒಂದೆಡೆ ಗಾಯಾಳುಗಳ ಆಕ್ರಂದನ ಮತ್ತೊಂದೆಡೆ ವಾಹನದ ಅಡಿಯಲ್ಲಿ ಸಿಲುಕಿಕೊಂಡ ಗಾಯಾಳುಗಳ ರಕ್ಷಣೆ, ಜೊತೆಯಲ್ಲಿ ಗಾಯಾಳುಗಳ ಪ್ರಾಣ ರಕ್ಷಣೆಗೆ ಕುಣಿಗಲ್, ಯಡೆಯೂರು, ಹುಲಿಯೂರುದುರ್ಗ ಸೇರಿದಂತೆ ಸಮೀಪದ ಸ್ಥಳಗಳ 108 ವಾಹನಗಳು ಸಕಾಲದಲ್ಲಿ ಆಗಮಿಸಿ, ಸಿಬ್ಬಂದಿಗಳು ಹತ್ತಕ್ಕೂ ಹೆಚ್ಚು ಬಾರಿ ಸಂಚರಿಸಿ ಗಾಯಾಳುಗಳ ಪ್ರಾಣರಕ್ಷಣೆಗೆ ಮುಂದಾದರು.
ಈ ಮಧ್ಯೆ ತೀವ್ರವಾಗಿ ಗಾಯಗೊಂಡಿದ್ದ ಸುಶೀಲಾಬಾಯಿ ಚಿಕಿತ್ಸೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದು, ಆಕೆ ಧರಿಸಿದ್ದ ಒಟ್ಟಾರೆ ಸುಮಾರು 120 ಗ್ರಾಂ ತೂಕದ ಚಿನ್ನದ ಮಾಂಗಲ್ಯ, ಎರಡು ಎಳೆ ಸರ, ನಾಲ್ಕು ಬಳೆ, ಉಂಗುರ ಅಂದಾಜು ಮೂರುಲಕ್ಷ ರು.ಮೌಲ್ಯದ ಚಿನ್ನಾಭರಣವನ್ನು ಕುಣಿಗಲ್ 108 ವಾಹನದ ಚಾಲಕ ಮಹೇಶ್ , ಇಎಂಟಿ ಮಂಜುನಾಥ್ ಸಂರಕ್ಷಿಸಿ, ಅವರ ಸಂಬಂಧಿಕರಿಗೆ ಪಿಎಸೈಗ ಗುರುಪ್ರಸಾದ್ ಸಮ್ಮುಖದಲ್ಲಿ ಹಸ್ತಾಂತರಿಸಿ ಮಾನವೀಯತೆ ಜೊತೆಯಲ್ಲಿ ಪ್ರಾಮಾಣಿಕತೆ ಮರೆದರು.
ಸೊಗಡು ಭಾಮೈದ ನಾಮಪತ್ರ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅವರ ಭಾಮೈದ ನಾಗೇಶ್ ಅವರು ಬುಧವಾರ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬುಧವಾರ ಒಂದೇ ದಿನ ತುಮಕೂರು ನಗರಸಭೆಗೆ 10 ನಾಮಪತ್ರಗಳು ಸಲ್ಲಿಕೆಯಾದವು. ಇದರಲ್ಲಿ 1 ಬಿಜೆಪಿ, 4 ಜೆಡಿಎಸ್, 4 ಪಕ್ಷೇತರ ಹಾಗೂ ಒಬ್ಬರು ಕೆಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ತಿಪಟೂರು ನಗರಸಭೆಗೆ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕಾಂಗ್ರೆಸ್ 2, ಬಿಜೆಪಿ 1 ಹಾಗೂ ಜೆಡಿಎಸ್ 1 ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾದರೆ. ಶಿರಾ ನಗರಸಭೆಗೆ 8 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕಾಂಗ್ರೆಸ್ 1, ಜೆಡಿಎಸ್1, ಪಕ್ಷೇತರರು 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.