ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಜೆಪಿ ಪ್ರಚಾರ ಸಭೆಯಾದ ಧಾರ್ಮಿಕ ಸಮಾರಂಭ!

Srinivasa Murthy VN
Updated On : 22 Feb 2013, 11:02 am

ಚಿಕ್ಕನಾಯಕನಹಳ್ಳಿ: ನನ್ನನ್ನು ಹಿಟ್ಲರ್ ಎಂದಾದರೂ ಕರೆಯಲಿ, ನಾಯಿ ಎಂದಾದರೂ ಕರೆಯಲಿ. ರಾಜ್ಯದ 6 ಕೋಟಿ ಜನರ ಆಶೀರ್ವಾದ ನನ್ನ ಮೇಲಿರುವವರಗೆ ನನ್ನನ್ನು ಯಾರು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ಶುಕ್ರವಾರ ತಾಲೂಕಿನ ಕಸಬಾ ಹೋಬಳಿ ಸುಂಟರಮೆಳೆ ಸಿದ್ದರಾಮೇಶ್ವರ ಸ್ವಾಮಿಯ ನೂತನ ದೇಗುಲ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಭಾಷಣದ ಬಹುಪಾಲು ಸಮಯವನ್ನು ತಮ್ಮ ವಿರೋಧಿಗಳ ಟೀಕೆಗೆ ಬಳಸಿಕೊಂಡ ಮಾಜಿ ಸಿಎಂ, 40 ವರ್ಷಗಳ ಸತತ ಹೋರಾಟದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದ ನನ್ನನ್ನು, ಮೂರುವರೆ ವರ್ಷದಲ್ಲೇ ಕುರ್ಚಿ ಆಸೆಗಾಗಿ ನಮ್ಮವರೇ ಬೆನ್ನಿಗೆ ಚೂರಿ ಹಾಕಿದರು. ಕೇಳಿದ್ದರೆ ನಾನೇ ಕುರ್ಚಿ ಬಿಟ್ಟುಕೊಡುತ್ತಿದ್ದೆ.ಅದಕ್ಕಾಗಿ ರಾಜ್ಯದ ಬಿಜೆಪಿ ನಾಯಕರಿಂದ ಹಿಡಿದು, ರಾಜಭವನ ಮತ್ತು ಲೋಕಾಯುಕ್ತ ಮತ್ತು ಕೇಂದ್ರದ ನಾಯಕರೆಲ್ಲಾ ಒಟ್ಟಿಗೆ ಸೇರಿ  25 ದಿನಗಳ ಕಾಲ ಜೈಲಿಗೆ ತಳ್ಳಿದರು. ಅದರ ಪರಿಣಾಮ ಇಂದು ಬಿಜೆಪಿ ಬಂಡಿ ಖಾಲಿಯಾಗುತ್ತಿದೆ ಎಂದು ಲೇವಡಿ ಮಾಡಿದರು.
ನಾನು ನೊಂದಿದ್ದೇನೆ: ನನಗೀಗ 70 ವರ್ಷ, ಅಧಿಕಾರದ ಆಸೆಯಿಲ್ಲ.ಆದರೆ ಕರ್ನಾಟಕವನ್ನು ಕಲ್ಯಾಣರಾಜ್ಯವನ್ನಾಗಿ ಮಾಡಿ ಗುಜರಾತ್ ಮಾದರಿ ಆಡಳಿತ ನೀಡಬೇಕೆಂಬುದು ನನ್ನ ಗುರಿಯಾಗಿತ್ತು. ನಮ್ಮ ಜನ ನೆಮ್ಮದಿಯಿಂದ ಬದುಕಲು ಉತ್ತಮ ಆಡಳಿತ ನೀಡುವ ಸಲುವಾಗಿ ಹೊಸ ಪಕ್ಷವನ್ನು ಕಟ್ಟಿದ್ದೇನೆ ಎಂದರು.
ಬರೀ ರಾಜಕೀಯದಲ್ಲೇ ಕಾಲಕಳೆದಿದ್ದೇವೆ: ಮುಂದುವರಿದು ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಲು ಮುಂದಾದ ಅವರು,ರಾಜ್ಯದಲ್ಲಿ ಇಂದು ಆಡಳಿತ ನಡೆಸುತ್ತಿರುವವರಿಗೆ ಮುಂದಾಲೋಚನೆಯಿಲ್ಲದ ಪರಿಣಾಮ, ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅಭಿವೃದ್ಧಿ ಮಾಡಲು ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಆದರೆ ನಾವು ರಾಜಕೀಯ ಮಾಡುವುದರಲ್ಲೇ ಕಾಲಕಳೆಯುತ್ತಿದ್ದೇವೆ. ಕೇವಲ 40 ಸಾವಿರ ಕೋಟಿ ಯಷ್ಟಿದ್ದ ರಾಜ್ಯದ ಬಜೆಟ್ ಗಾತ್ರವನ್ನು ಯಾವುದೇ ಹೊಸ ತೆರಿಗೆ ಹಾಕದೆ  1 ಲಕ್ಷ ಕೋಟಿಗೇರಿಸಿದ ಕೀರ್ತಿ ನನ್ನ ಅವಧಿಯ ಸರ್ಕಾರಕ್ಕೆ ಸಲ್ಲುತ್ತದೆ.ಕಾವೇರಿ ನೀರಿನ ವಿಷಯದಲ್ಲಿ ನಮ್ಮ ಸಂಸದರು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ರಾಜಿನಾಮೆ ನೀಡಬೇಕಿತ್ತು: ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದಂತೆ ತಮ್ಮ ರಾಜಿನಾಮೆಯನ್ನು ಪ್ರಧಾನಿಗೆ  ಬಿಸಾಡ ಬೇಕಿತ್ತು. ಪುನ-ನಾನು ಮುಖ್ಯಮಂತ್ರಿಯಾದರೆ ಹಿಂದಿನ ನನ್ನ ಜನಪರ ಯೋಜನೆಗಳನ್ನು ಜಾರಿಗೆ ತರುತ್ತೇನೆ. ನನ್ನ ಅವಧಿಯಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಿದ್ದನ್ನು ವಿರೋಧ ಪಕ್ಷಗಳು ಟೀಕಿಸಿದವು. ರಾಜರ ಕಾಲದಲ್ಲಿಯು ಸಹ ಮಠಮಾನ್ಯಗಳಿಗೆ ರಾಜಾಶ್ರಯ ನೀಡಿದ್ದನ್ನು ಅವರು ಅರಿತುಕೊಳ್ಳಬೇಕಿದೆ.ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಯಾಗುವಲ್ಲಿ ಮಠಗಳ ಪಾತ್ರ ಅಪಾರವಾಗಿದೆ.ಇಲ್ಲದ್ದರೆ ನಮ್ಮ ಬಡಜನ ಶೈಕ್ಷಣಿಕವಾಗಿ ಇಂದು ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ.ಮಠಾಧೀಶರು ಸಮಾಜದ ಉಧ್ದಾರಕ್ಕಾಗಿ ಕಾವಿ ತೊಟ್ಟು ತಮ್ಮ ಜೀವನವನ್ನು ಗಂಧದಂತೆ ತೇಯುತ್ತಿದ್ದಾರೆ. ಅಂತಹ ತ್ಯಾಗಜೀವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದರು. ನಂತರ ತಾಲೂಕಿನ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿಯವರನ್ನು ವಿದ್ಯುಕ್ತವಾಗಿ ಕೆಜೆಪಿ ಪಕ್ಷಕ್ಕೆ ಸೇರಿಸಿಕೊಂಡು ತಮ್ಮ ಜೊತೆಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವಂತೆ ಕರೆನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜೆ.ಸಿ.ಮಾಧುಸ್ವಾಮಿ 12ನೇ ಶತಮಾನದ ಸಿದ್ದರಾಮರ ಕಾಯಕ ನಿಷ್ಠೆ ಮತ್ತು ಧಾರ್ಮಿಕ ನಿಷ್ಠೆಯನ್ನು ಪ್ರಸ್ತಾಪಿಸಿ ಲೋಕಕ್ಕೆ ಕೆರೆಕಟ್ಟೆಗಳ ಅಗತ್ಯತೆಯನ್ನು ತೋರಿಸಿಕೊಟ್ಟ ದಾರ್ಶನಿಕ ಎಂದರು. ಭಕ್ತನಿದ್ದಲ್ಲಿ ಭಗವಂತ, ಭಕ್ತನಿಲ್ಲದಿದ್ದರೆ ಭಗವಂತನಿಗೂ ಸಹ ನೆಲೆಯಿಲ್ಲ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಜೊತೆಯಲ್ಲಿರುತ್ತೇನೆ ಎಂದು ಕೆಜೆಪಿ ಸೇರುವ ಬಗ್ಗೆ ಇದ್ದ ಗೊಂದಲಕ್ಕೆ ತೆರೆಯೆಳೆದರು.
ಜನತೆಗೆ ಗೊಂದಲ: ಸಮಾರಂಭದಲ್ಲಿ ಮಾತನಾಡಿದ ಸಂಸದರು ಮತ್ತು ಬಹುತೇಕ ಸ್ವಾಮೀಜಿಗಳು ತಮ್ಮ ಸ್ಥಾನಮಾನ ಮರೆತು, ಯಡಿಯೂರಪ್ಪ ಮತ್ತು ಸಂಸದರನ್ನು ಹೊಗಳಿದ್ದು,ಕುಳಿತಿದ್ದ ಜನರಿಗೆ ಇದು ಧಾರ್ಮಿಕ ಸಮಾರಂಭವೋ,ಅಥವಾ ಕೆಜೆಪಿ ಪ್ರಚಾರ ಸಭೆಯೋ ಎಂಬ ಗೊಂದಲವುಂಟುಮಾಡಿತು. ಸ್ವಾಮೀಜಿಗಳು ಒಂದು ಹೆಜ್ಜೆ ಮುಂದೆ ಹೋಗಿ ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಮತ್ತು ಜೆ.ಸಿ.ಮಾಧುಸ್ವಾಮಿಯವರನ್ನು ಮಂತ್ರಿಯನ್ನಾಗಿ ಮಾಡುವುದಾಗಿ ವೇದಿಕೆಯಲ್ಲಿಯೇ ಘೋಷಿಸಿಬಿಟ್ಟರು.
ದೇವಾಲಯ ನಿರ್ಮಾಣದಲ್ಲಿ ಪ್ರಮುಖ ದಾನಿ ಎಸ್.ಎಲ್.ಶಾಂತಕುಮಾರ್, ಗೋಡೇಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಡಾ.ಅಬಿನವ ಮಲ್ಲಿಕಾರ್ಜುನ ಸ್ವಾಮೀಜಿ, ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement