ಭಾವನಾತ್ಮಕತೆ ಇಲ್ಲದಿದ್ದಲ್ಲಿ ಶಾಂತಿ ಸಾಧ್ಯವಿಲ್ಲ
ಕುಣಿಗಲ್: ಹೈದರಾಬಾದ್ ಸ್ಫೋಟ ನಡೆಸಿದ ಕ್ರೂರಿಗಳು, ನಿಜಕ್ಕೂ ಮನುಕುಲದ ದೊಡ್ಡ ಶತೃಗಳು ಎಂದು
ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಮರಿಯಪ್ಪ ರಾಹೆ 48ಕ್ಕೆ ಹೊಂದುಕೊಂಡಂತೆ ಉಚಿತವಾಗಿ ನೀಡಿದ್ದ ನಿವೇಶನದಲ್ಲಿ, ನೂತನವಾಗಿ ನಿರ್ಮಾಣಗೊಂಡ ಪಂಚವಟಿ ಆಂಜನೇಯಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವುದೇ ದೇಶವು ಬೌದ್ಧಿಕವಾಗಿ, ವೈಚಾರಿಕವಾಗಿ ಅಭಿವೃದ್ಧಿ ಹೊಂದಿದರೂ, ಭಾವನಾತ್ಮಕವಾಗಿ ಅಭಿವೃದ್ಧಿ ಹೊಂದದಿದ್ದರೆ, ಆ ಅಭಿವೃದ್ಧಿ ಸ್ಥಿರವಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ಯಾವುದೇ ರಾಷ್ಟ್ರದ ಜನತೆಯನ್ನು ಬಂದೂಕು, ಬಾಂಬುಗಳ ಬೆದರಿಕೆಯಿಂದ ನಿಯಂತ್ರಿಸಿ ಆಡಳಿತ ನಡೆಸಲಾಗದು, ಶಾಂತಿಯುತ, ಸುಭಿಕ್ಷ ಆಡಳಿತಕ್ಕಾಗಿ ಧರ್ಮಾಧರಿತ ತತ್ವ ಸಿದ್ಧಾಂತಗಳ, ಸಾಧು ಸಂತರು ಮನುಕುಲದ ಉದ್ದಾರಕ್ಕೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪರಸ್ಪರ ಸಹಕಾರ, ಸಮಾನ ಬಾಳ್ವೆಯ ಪರಿಕಲ್ಪನೆ ಹಿನ್ನೆಲೆಯಲ್ಲಿ ಆಡಳಿತ ನೀಡಿದಾಗ ಅದು ಸ್ಥಿರವಾಗಿರುತ್ತದೆ, ಎಲ್ಲಾ ವ್ಯಕ್ತಿಗಳಲ್ಲೂ ಸಾಧಿಸುವ ಶಕ್ತಿ, ಛಲ ಇರುತ್ತದೆ. ಆದರೆ, ಆ ಶಕ್ತಿಯ ಜಾಗೃತಿಗೆ ಸಕಾರಾತ್ಮಕವಾಗಿ. ಅರಿವು ಮೂಡಿಸಿದಾಗ ಸಾಮಾನ್ಯ ವ್ಯಕ್ತಿಯೂ ಅಸಮಾನ್ಯ ಸಾಧನೆ ಮಾಡುತ್ತಾನೆ ಎಂದರು.
ಯಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠಾಧೀಶರಾದ, ರೇಣಕಾ ಶಿವಾಚಾರ್ಯ ಸ್ವಾಮೀಜಿ, ಸನಾತನ ರಾಷ್ಟ್ರವಾದ ಭಾರತ ದೇಶಧಲ್ಲಿನ ಯುವಜನತೆ ಹಲವು ಕಾರಣಗಳಿಂದ ವಾಮ ಮಾರ್ಗ ಅನುಸರಿಸುತ್ತಾ ಹಲವು ಸಮಸ್ಯೆಗಳಿಗೆ ಕಾರಣಲಾಗುತ್ತಿದ್ದಾರೆ, ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡಲು ಕುಟುಂಬದಲ್ಲಿನ ಹಿರಿಯರು ದಿನದ ಸ್ವಲ್ಪಕಾಲವಾದರೂ ಅವರೊಡನೆ ಸಹೃದಯವಾಗಿ ಚರ್ಚಿಸಿ, ಕುಟುಂಬದಲ್ಲಿ ದಿನಂಪ್ರತಿ ಸಾಮೂಹಿಕ ಭೋಜನ, ಚರ್ಚೆಯಂತಹ ಆರೋಗ್ಯಕರ ಚಟುವಟಿಕೆ ನಡೆಸಿದಾಗ ಯುವಜನತೆಗೆ ಸೂಕ್ತ ಮಾರ್ಗದರ್ಶನ ದೊರೆತು, ಕೌಟುಂಬಿಕ ಸಾಮರಸ್ಯವೂ ಹೆಚ್ಚುತ್ತದೆ ಎಂದರು.
ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಅಧ್ಯಕ್ಷತೆ ವಹಿಸಿದ್ದು, ಕಿತ್ನಾಮಂಗಲ ಅರೇಶಂಕರ ಮಠಾಧೀಶರಾದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಜೆಡಿಎಸ್ ಮುಖಂಡರಾದ ಅನಸೂಯಮ್ಮ ವೈ.ಕೆ.ರಾಮಯ್ಯ, ದೇವಾಲಯ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.