ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಆದ್ಯತೆ ಇರಲಿ

Srinivasa Murthy VN
Updated On : 22 Feb 2013, 11:04 am

ಕೊರಟಗೆರೆ: ಕಡು ಬಡತನದಲ್ಲಿದ್ದು, ವಿದ್ಯಾಭ್ಯಾಸಕ್ಕೂ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿರುವ ಮಕ್ಕಳಿಗೆ ಆಚಾರ ವಿಚಾರ ಸಂಸ್ಕಾರ ಗಳಿಸುವ ಜತೆಗೆ ಸಮಾಜೋದ್ದಾರಕ್ಕೆ ನೆರವಾಗುವ ಶಿಕ್ಷಣವನ್ನು ಕಲಿಸಲು ಸಮಾಜದ ಸಂಘಟನೆಗಳು ಹೆಚ್ಚು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಮುಂದಾಗುವಂತೆ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ಹೊರವಲಯದ ಜಂಪೇನಹಳ್ಳಿ ಕೆರೆ ಸಮೀಪ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ವೀರಶೈವ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಮಾನವೀಯ ಮೌಲ್ಯಗಳೊಂದಿಗೆ ಉನ್ನತ ಶಿಕ್ಷಣ ನೀಡುವ ದೃಷ್ಠಿಯಿಂದ ವಿದ್ಯಾರ್ಥಿ ವಸತಿ ನಿಲಯಗಳ ಸ್ಥಾಪನೆಯ ಅವಶ್ಯಕತೆ ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಮಾನವೀಯ ಮೌಲ್ಯಗಳನ್ನು ಮರೆತು ಚಿಕ್ಕ ವಯಸ್ಸಿನಿಂದಲೇ ದುಶ್ಚಟಗಳಿಗೆ ಬಲಿಯಾಗಿ ಸಾವನ್ನಪ್ಪುತ್ತಿದ್ದು, ಪೋಷಕರೇ ಮಕ್ಕಳಿಗೆ ಅಂತ್ಯ ಸಂಸ್ಕಾರ ಮಾಡುತ್ತಿರುವ ದುಃಸ್ಥಿತಿ ಬಂದಿರುವುದು ವಿಷಾದನೀಯವಾಗಿದ್ದು ಮೊದಲು ವಿದ್ಯೆಯೊಂದಿಗೆ ಉತ್ತಮ ಗುಣಗಳನ್ನು ಕಲಿಸುವುದರೊಂದಿಗೆ ದೇಶಕ್ಕೆ ಸತ್ಪ್ರಜೆಗಳನ್ನಾಗಿ ನಿರ್ಮಾಣ ಮಾಡಲು ಚಿಂತಿಸಬೇಕಿದೆ ಎಂದರು.
ಚಿಕ್ಕತೊಟ್ಲಕೆರೆಯ ಅಟವಿ ಶಿವಲಿಂಗ ಸ್ವಾಮೀಜಿ ಮಾತನಾಡಿ ದಾನವಂತರು ಸಾಕಷ್ಟಿದ್ದು, ಮಠ ಮಾನ್ಯಗಳು ಅವರನ್ನು ಬಳಸಿಕೊಂಡು ಧರ್ಮದ ಜಾಗೃತಿ ಮೂಡಿಸಬೇಕು. ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ದೇವಾಲಯ ಎಂಬ ಭಾವನೆ ಮೂಡುವ ರೀತಿಯಲ್ಲಿ ನಿರ್ಮಾಣವಾಗಬೇಕೆಂದರು.
ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸ್ವಾಮೀಜಿ ರಾಜಕೀಯವಾಗಿ ಬಳಸಿಕೊಂಡು ಮತ ಪ್ರಚಾರಕರನ್ನಾಗಿ ಮಾಡದೆ ಧರ್ಮ ಪ್ರಚಾರಕರನ್ನಾಗಿ ಮಾಡಿದಲ್ಲಿ ಸಮಾಜವು ಉತ್ತಮಗೊಳ್ಳಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನಿಗೆ ಪ್ರಜ್ಞೆಯು ಶಿಕ್ಷಣದಿಂದ ಮಾತ್ರ ಬರಲಿದ್ದು ಸರ್ಕಾರಗಳು ಶಿಕ್ಷಣಕ್ಕಾಗಿ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರೂ 2011ರ ಸಾಕ್ಷರತಾ ಜನಗಣತಿಯಲ್ಲಿ ರಾಜ್ಯವು ಶೇ. 72 ರಷ್ಟು ಅಕ್ಷರಸ್ಥರನ್ನು ಹೊಂದಿದೆ ಎಂದರು.
ಸಮಾರಂಭದಲ್ಲಿ ಹೊಳವನಹಳ್ಳಿ ಹರಪಗೊಂಡನಹಳ್ಳಿ ಮಠದ ನಂಜುಂಡೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಮಾಹಸಭಾ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ರಾಜ್ಯ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ, ಜಿಲ್ಲಾಧ್ಯಕ್ಷ ಸಿ.ವಿ. ಮಹದೇವಯ್ಯ, ಮಾಜಿ ಅಧ್ಯಕ್ಷ ಸಿ. ವೀರಭದ್ರಯ್ಯ, ಮಾಜಿ ಸಂಸದ ಮಲ್ಲಿಕಾರ್ಜುನಯ್ಯ, ತಾಲೂಕು ಅಧ್ಯಕ್ಷ ಪರ್ವತಯ್ಯ,
ಜಿ.ಪಂ.ಸದಸ್ಯರಾದ ಸುಧಾಕರಲಾಲ್, ದಾಕ್ಷಾಯಿಣಿ ರಾಜಣ್ಣ, ಪ್ರಸನ್ನಕುಮಾರ್, ಮುಖಂಡರಾದ ಮಹಾಲಿಂಗಪ್ಪ, ಚಂದ್ರಶೇಖರಯ್ಯ, ಸದಾಶಿವಯ್ಯ, ಮಲ್ಲಿಕಾರ್ಜುನಯ್ಯ, ರುದ್ರಪ್ರಸಾದ್, ಆರ್.ಎಸ್.ರಾಜಣ್ಣ, ವಿಶ್ವೇಶ್ವರಯ್ಯ, ಗಂಗಮ್ಮ, ಸಿದ್ದಗಿರಿನಂಜುಂಡಸ್ವಾಮಿ, ಕೆ.ಎಂ.ಸುರೇಶ್, ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement