ಅಖಾಡಕ್ಕೂ ಮುನ್ನ ತಾಲೀಮು ಶುರು
ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಪಂದ್ಯ ಎಂದೇ ಬಿಂಬಿತವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಜೆಡಿಎಸ್ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ಫೆ. 27 ರಂದು ನಡೆಯಲಿರುವ ಈ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾರ್ಗದರ್ಶನ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ಜೆಡಿಎಸ್ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೂ ಮುನ್ನ ಜೆಡಿಎಸ್ ವರಿಷ್ಠರನ್ನು ಗೂಳೂರು ಸರ್ಕಲ್‌ನಿಂದ ಮೆರವಣಿಗೆ ನಡೆಯುವ ಸ್ಥಳದವರೆಗೆ ಮೆರವಣಿಗೆ ಮೂಲಕ ಕರೆ ತರಲಾಗುವುದು.
ಅಭ್ಯರ್ಥಿ ಘೋಷಣೆ: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕೆಂಬ ಗೊಂದಲ ಮುಂದುವರೆದಿದ್ದು ಫೆ. 27 ರಂದು ನಡೆಯಲಿರುವ ಜೆಡಿಎಸ್ ಸಮಾವೇಶದಲ್ಲಿ ಅಭ್ಯರ್ಥಿ ಘೋಷಣೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಕೊರಟಗೆರೆಯಲ್ಲಿ ನಡೆದ ಸಮಾವೇಶದಲ್ಲಿ ದೇವೇಗೌಡರ ಸಮ್ಮುಖದಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೀಸಲು ಕ್ಷೇತ್ರಕ್ಕೆ ಸುಧಾಕರ್‌ಲಾಲ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದರು. ಈಗ ಇದೇ ಸಮಾವೇಶದಲ್ಲಿ ಅಭ್ಯರ್ಥಿ ಘೋಷಣೆ ಸಾಧ್ಯ ಎಂದು ಅಂದಾಜಿಸಲಾಗಿದೆ.
20 ಸಾವಿರ ಮಂದಿ ನಿರೀಕ್ಷೆ: ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಎಚ್. ನಿಂಗಪ್ಪ ಅವರು ಈ ಐತಿಹಾಸಿಕ ಸಮಾವೇಶಕ್ಕೆ 20 ಸಾವಿರ ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ಜಿ.ಪಂ., ತಾ.ಪಂ, ಹಾಗೂ ಗ್ರಾ.ಪಂ. ಸದಸ್ಯರು ಹಾಗೂ ನಗರಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಊಹಾಪೋಹಕ್ಕೆ ಕಿವಿಗೊಡಬೇಡಿ: ಸಮಾವೇಶದ ಬಗ್ಗೆ ವಿರೋಧ ಪಕ್ಷಗಳು ಇಲ್ಲಸಲ್ಲದ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಕೂಡದು ಎಂದು ಕಾರ್ಯಕರ್ತರಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಳಯ ಆಗಬಹುದೇನೋ: ಫೆ.27 ರೊಳಗೆ ಏನು ಬೇಕಾದರೂ ಆಗಬಹುದು ಎಂಬ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗೌರಿಶಂಕರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಂಗಪ್ಪ ಯಾರಿಗೊತ್ತು ಪ್ರಳಯವೇ ಆಗಬಹುದು ಎಂದು ವ್ಯಂಗ್ಯವಾಡಿದರು. ಯಾರ ಬಗ್ಗೆಯೂ ತಾವು ಲಘುವಾಗಿ ಮಾತನಾಡಲು ಹೋಗುವುದಿಲ್ಲ. ನಮ್ಮ ಗಮನ ಏನಿದ್ದರೂ ಸಮಾವೇಶದತ್ತ ಎಂದು ಪ್ರತಿಕ್ರಿಯಿಸಿದರು.
ತಾವು ಹುಲಿ ಎಂಬ ಗೌರಿಶಂಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾನು ಹುಲಿಯ ಪಟ್ಟೆ ನೋಡೇ ಇಲ್ಲ ಎಂದು ಚುಚ್ಚಿದರು.
ತಾವು ಯಾವತ್ತೂ ಜೆಡಿಎಸ್: ತಾವು ಹಿಂದೆ, ಈಗ, ಮುಂದೆ ಯಾವಾಗಲು ಜೆಡಿಎಸ್‌ನವನು ಎಂದ ನಿಂಗಪ್ಪ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ತಾವು ಜೆಡಿಎಸ್ ಆಕಾಂಕ್ಷಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಒಂದು ವೇಳೆ ಟಿಕೆಟ್ ನೀಡದೇ ಇದ್ದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪಕ್ಷದ ತೀರ್ಮಾನಕ್ಕೆ ತಾವು ಬದ್ಧ. ಆದರೆ ನನ್ನ ರಾಜಕೀಯ ಅನುಭವವನ್ನು, ಕ್ಷೇತ್ರದಲ್ಲಿನ ನನ್ನ ಜನಪ್ರಿಯತೆಯನ್ನು ವರಿಷ್ಠರು ಗಮನಿಸುತ್ತಾರೆ ಎಂದರು.
ಗೌರಿಶಂಕರ್ ಒಳ್ಳೆ ಹುಡುಗ: ಗೌರಿಶಂಕರ್ ನನ್ನ ಸ್ನೇಹಿತ ಚನ್ನಿಗಪ್ಪನ ಮಗ. ಒಳ್ಳೆಯ ಹುಡುಗ. ಆದರೆ ರಾಜಕೀಯವಾಗಿ ಹೊರಗಡೆ ಏನನ್ನೂ ಹೇಳಲು ಬರುವುದಿಲ್ಲ ಎಂದು ಜಾರಿಕೊಂಡರು.
ಮುಖ್ಯಾಂಶಗಳು...
1. ದೇವೇಗೌಡ, ಕುಮಾರಣ್ಣಗೆ ಭರ್ಜರಿ ಸ್ವಾಗತಕ್ಕೆ ನಿರ್ಧಾರ
2. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ 20 ಸಾವಿರ ಮಂದಿ
3. ರಾಜ್ಯ ಮಟ್ಟದ ನಾಯಕರೆಲ್ಲರೂ ಕಾರ್ಯಕ್ರಮದಲ್ಲಿ ಭಾಗಿ
4. ಗ್ರಾಮಾಂತರದ ಅಧಿಕೃತ ಅಭ್ಯರ್ಥಿ ಘೋಷಣೆ ಸಂಭವ
5. ಅಧಿಕೃತವಾಗಿ ಇದೊಂದು ಚುನಾವಣಾ ಪ್ರಚಾರ ಸಭೆ
ಎಲ್ಲಾ ವರ್ಗಕ್ಕೂ ಆದ್ಯತೆ: ಹುಲಿ
ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಲಾ ವರ್ಗಕ್ಕೂ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಸ್ಪಷ್ಟಪಡಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಕ್ಕಲಿಗರಿಗೆ 5 ಕ್ಷೇತ್ರದಲ್ಲಿ, ಮುಸ್ಲಿಮರಿಗೆ 8 ಕ್ಷೇತ್ರ, ಹಿಂದುಳಿದ ವರ್ಗಕ್ಕೆ 14, ಪರಿಶಿಷ್ಟ ಜಾತಿ 4, ಪರಿಶಿಷ್ಟ ವರ್ಗಕ್ಕೆ 2 ಹಾಗೂ ಇಬ್ಬರು ಲಿಂಗಾಯಿತರಿಗೆ ಟಿಕೆಟ್ ನೀಡುವ ಮೂಲಕ ಎಲ್ಲಾ ವರ್ಗದವರಿಗೂ ಮಣೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 35 ವಾರ್ಡ್‌ಗಳ ಪೈಕಿ 20 ವಾರ್ಡ್‌ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತುಮಕೂರು ಜಿಲ್ಲೆ ಯಾವತ್ತೂ ಜೆಡಿಎಸ್‌ನ ಭದ್ರ ಕೋಟೆ. ಈ ಬಾರಿ ಜೆಡಿಎಸ್ ಪರ ಅಲೆ ಇದೆ. ಹೀಗಾಗಿ 20 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುತ್ತೇವೆ ಎಂದರು. ಕಳೆದ ನಗರಸಭೆ ಅವಧಿಯಲ್ಲಿ ಸದಸ್ಯರು ನಡೆದುಕೊಂಡ ರೀತಿ ಬಗ್ಗೆ ಬೇಸರವಾಗಿದೆ. ಹೀಗಾಗಿ ಈ ಬಾರಿ ಒಳ್ಳೆಯವರಿಗೆ ಮಣೆ ಹಾಕಲಾಗಿದೆ ಎಂದರು.
ಬಂಡಾಯ ಇಲ್ಲವೇ ಇಲ್ಲ: ಈ ಚುನಾವಣೆಯಲ್ಲಿ ಬಂಡಾಯ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಒಂದಿಬ್ಬರು ಪಕ್ಷದ ವಿರುದ್ಧ ಸ್ಪರ್ಧಿಸಿದ್ದು ಅವರ ಮನವೊಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
5 ಲಕ್ಷ ಡಿಮ್ಯಾಂಡ್ ಇದ್ಯಾ...
ತುಮಕೂರು: ತಮ್ಮ ಪಕ್ಷದ ಬಿ ಫಾರಂ ಗೆ 5 ಲಕ್ಷ ಡಿಮ್ಯಾಂಡ್ ಇದ್ಯಾ...
ನಿಮ್ಮ ಬೆಂಬಲಿಗರೊಬ್ಬರು ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡುವಾಗ 5 ಲಕ್ಷ ಪಡೆದಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದು ಸ್ವತಃ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್. 5 ಲಕ್ಷ ಡಿಮ್ಯಾಂಡ್ ಕಡಿಮೆಯಾಯ್ತೋ, ಜಾಸ್ತಿಯಾಯ್ತೋ ಎಂಬ ಪ್ರಶ್ನೆಗೆ ನಕ್ಕು ಸುಮ್ಮನಾದರು.