ಗ್ರಾಮೀಣ ನಾಟಕ ಭಾರತೀಯ ಸಂಸ್ಕೃತಿಯ ಪ್ರತೀಕ
ಮಧುಗಿರಿ: ಗ್ರಾಮೀಣ ನಾಟಕಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು ಹಳ್ಳಿಗಳಲ್ಲಿ ನಾಟಕ ಕಲೆ ಇನ್ನೂ ಜೀವಂತವಾಗಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು. ಭಾಸ್ಕರಾಚಾರ್ ನುಡಿದರು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಕೊಲ್ಲಾಪುರದಮ್ಮ ದೇವಿ ವೃತ್ತದಲ್ಲಿ ಅಭಿನಯ ರಂಗ ಕೇಂದ್ರ ಕರ್ನಾಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮೀಣ ನಾಟಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಾಟಕ ಕಲೆ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಮನರಂಜನೆಯ ವಿವಿಧ ವಿದ್ಯುನ್ಮಾನ ಮಾಧ್ಯಮಗಳ ಅಬ್ಬರದ ನಡುವೆಯೂ ಕಲೆ ಜೀವಂತಿಕೆ ತೋರಿವೆ. ಭಾರತೀಯ ಸಂಸ್ಕೃತಿಯ ನಾಟಕಗಳು ಎಂತಹ ಬಿರುಗಾಳಿ ಬಂದರೂ ಬದುಕುಳಿಯುತ್ತವೆ. ಎಲ್ಲರನ್ನು ತನ್ನತ್ತ ಸೆಳೆಯುತ್ತವೆ. ನಗರಗಳಲ್ಲಿ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ರೋಸಿ ಹೋಗಿರುವ ಜನತೆಗೆ ನೈಜ ಬದುಕಿಗೆ ಗ್ರಾಮೀಣ ನಾಟಕ ಸಂಭ್ರಮದ ಸಂಕೇತ, ರಂಗಭೂಮಿ ಕೇವಲ ಪಾಠ ಹೇಳುವ ಶಾಲೆ ಅಲ್ಲ, ಅದು ಒಂದು ವಿಶ್ವವಿದ್ಯಾಲಯ ಎಂದ ಅವರು, ಹಬ್ಬ ಹರಿ ದಿನಗಳಲ್ಲಿ ಹಳ್ಳಿಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸರ್ಕಾರ, ಇಲಾಖೆಗಳು ಉತ್ತೇಜನ ನೀಡುವ ಜೊತೆಗೆ ಒಳ್ಳೆಯ ಪೌರಾಣಿಕ ನಾಟಕ ಪ್ರದರ್ಶಿಸುವ ಮೂಲಕ ಜನತೆಗೆ ಸಂತೋಷವನ್ನುಂಟು ಮಾಡಬೇಕಿದೆ ಎಂದರು.
ಜೀವಂತ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸಿನಿಮಾ, ಟಿವಿ ಸಂಸ್ಕೃತಿ ಇದ್ದರೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ನಾಟಕೋತ್ಸವಗಳು ಜೀವಂತವಾಗಿವೆ ಎಂಬುದಕ್ಕೆ ಇಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿ ಎಂದರು.
ಸಂತಸದ ಸಂಗತಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಿಗೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅರುಣಾಕುಮಾರಿ ಚಿನ್ನಪ್ಪರೆಡ್ಡಿ ಮಾತನಾಡಿ, ಅಭಿನಯ ರಂಗ ಕೇಂದ್ರ ಕರ್ನಾಟಕ ಸಂಸ್ಥೆ ಪ್ರತಿ ವರ್ಷ ಇಲ್ಲಿ ನಾಟಕೋತ್ಸವ ಏರ್ಪಡಿಸಿ ಜನರಿಗೆ ಬಿತ್ತರಿಸುತ್ತಾ ಮನರಂಜನೆ ನೀಡುತ್ತಿರುವುದು ಸಂತೋಷದ ವಿಚಾರ ಎಂದರು.
ಸಮಾರಂಭದಲ್ಲಿ ಅಭಿನಯ ರಂಗ ಕೇಂದ್ರ ಕರ್ನಾಟಕ ಸಂಚಾಲಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ಪಿ. ಅಶ್ವತ್ಥನಾರಾಯಣ, ತಾ.ಪಂ.ಸದಸ್ಯೆ ನಾಗಮಣಿ, ಗ್ರಾ.ಪಂ.ಉಪಾಧ್ಯಕ್ಷೆ ಮಂಜುಳಾ, ಸಯ್ಯದ್ ನಾಸೀರುದ್ದೀನ್, ಹನುಮಂತರಾಜು, ವೆಂಕಟಪ್ಪ, ದೀಪಾ, ವೆಂಕಟರೆಡ್ಡಿ, ಯಾಸ್ಮಿನ್ ತಾಜ್ ಉಲ್ಲಾ,
ಬಾಲಾಜಿ, ಮಂಜುನಾಥ್, ಅಶ್ವತ್ಥನಾರಾಯಣರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಶ್ವತ್ಥನಾರಾಯಣ ಸ್ವಾಗತಿಸಿ ವಂದಿಸಿದರು.