ಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ
ಶಿರಾ: ಇಲ್ಲಿನ ನಗರಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನವನ್ನು ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿಗಳಾದ ಕಾಂತರಾಜು ತಿಳಿಸಿದರು.
ನಗರದಲ್ಲಿ 31 ವಾರ್ಡ್‌ಗಳ ಪೈಕಿ ಈ ಹಿಂದೆ 39 ಮತಗಟ್ಟೆಗಳಿದ್ದು ಪ್ರಸಕ್ತ ಚುನಾವಣೆಗಾಗಿ ಹೆಚ್ಚುವರಿಯಾಗಿ 2 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 42 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದರು.
ಸೂಕ್ಷ್ಮ 5, ಅತಿ ಸೂಕ್ಷ್ಮ 6 ಹಾಗೂ 30 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ. ತಾಲೂಕು ಕಚೇರಿಯನ್ನು ಮಸ್ಟರಿಂಗ್ ಕೇಂದ್ರವನ್ನಾಗಿಸಿಕೊಂಡು ಚಂಗಾವರ ರಸ್ತೆಯ ಸೆಂಟ್ ಆನ್ಸ್ ಶಾಲೆಯನ್ನು ಡಿ ಮಸ್ಟರಿಂಗ್ ಕೇಂದ್ರವನ್ನಾಗಿಸಿ ಇದೇ ಶಾಲೆಯನ್ನು ಭದ್ರತಾ ಕೊಠಡಿ ಮತ್ತು ಮತ ಎಣಿಕೆ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ. ಸದರಿ ಚುನಾವಣೆಗಾಗಿ 50 ಮಂದಿ ಪ್ರಿಸಿಡಿಂಗ್ಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ನಗರಸಭಾ ವ್ಯಾಪ್ತಿಯಲ್ಲಿ 18554 ಪುರುಷ ಮತದಾರರು, 18497 ಮಹಿಳಾ ಮತದಾರರು ಸೇರಿದಂತೆ ಒಟ್ಟು 37051 ಮತದಾರರಿದ್ದಾರೆ.
ಅತಿ ಸೂಕ್ಷ್ಮ ಮತಗಟ್ಟೆಗಳು: ರಂಗನಾಥ ನಗರ ವಾರ್ಡ್ ಸಂಖ್ಯೆ 5, ಕಚೇರಿ ಮೊಹಲ್ಲ ವಾರ್ಡ್ ಸಂಖ್ಯೆ 11, ಮೆಹಬೂಬ್ ನಗರ ವಾರ್ಡ್ ಸಂಖ್ಯೆ 17, ಅಸಾರ್ ಮೊಹಲ್ಲಾ ವಾರ್ಡ್ ಸಂಖ್ಯೆ 20, ಬಾಲಾಜಿ ದೇವಸ್ಥಾನದ ಹತ್ತಿರ ಮುಖ್ಯ ರಸ್ತೆ ವಾರ್ಡ್ ಸಂಖ್ಯೆ 23 ಗಳ ಮತಗಟ್ಟೆಯನ್ನು ಅತಿ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.
ಸೂಕ್ಷ್ಮ ಮತಗಟ್ಟೆಗಳು: ಜ್ಯೋತಿ ನಗರದ 4 ಮತ್ತು 5 ನೇ ಮತಗಟ್ಟೆ, (ವಾರ್ಡ್ ಸಂಖ್ಯೆ 4), ಶಿರಾನಿ ಮೊಹಲ್ಲಾ ವಾರ್ಡ್ ಸಂಖ್ಯೆ 12, ಕೋಟೆ ವಾರ್ಡ್ ಸಂಖ್ಯೆ 13, ಬೇಗಂ ಮೊಹಲ್ಲಾ ವಾರ್ಡ್ ಸಂಖ್ಯೆ 18 ಮತ್ತು 19, ಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು ಮತದಾನ ವ್ಯವಸ್ಥಿತವಾಗಿ ನಡೆಯಲು ಆರಕ್ಷಕ ಅಧಿಕಾರಿಗಳ ನೆರವನ್ನು ಕೊರಲಾಗಿದೆ ಎಂದು ಚುನಾವಣಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.