ಚುನಾವಣೆಗೂ ಮುನ್ನ ಜೆಡಿಎಸ್ ಹಿಟ್ ವಿಕೆಟ್
ತುಮಕೂರು: ತುಮಕೂರು ನಗರಸಭೆಯ 35 ವಾರ್ಡ್ಗಳಲ್ಲಿ ಕನಿಷ್ಠ 20 ರಲ್ಲಿ ಗೆಲ್ಲುತ್ತೇವೆಂದು ಬೀಗುತ್ತಿದ್ದ ಜೆಡಿಎಸ್ಗೆ ಆರಂಭದಲ್ಲೇ ಆಘಾತವಾಗಿದೆ. ವಾರ್ಡ್ ನಂಬರ್ 1 ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಿದ್ದ ಕೆಂಪರಾಮಯ್ಯ ಅವರು ಸೂಚಕರ ಸಹಿ ಹಾಕದೇ ಇದ್ದುದ್ದರಿಂದ ನಾಮಪತ್ರ ತಿರಸ್ಕೃತವಾಗಿದೆ.
ತುಮಕೂರು ನಗರಸಭೆಯ ಮೊದಲ ವಾರ್ಡ್ನ ಅಭ್ಯರ್ಥಿ ನಾಮಪತ್ರ ಸೇರಿ 22 ನಾಮಪತ್ರ ತಿರಸ್ಕೃತಗೊಂಡಿದೆ. ಒಟ್ಟಾರೆಯಾಗಿ ಜಿಲ್ಲೆಯ 3 ನಗರಸಭೆ, ನಾಲ್ಕು ಪುರಸಭೆ ಹಾಗೂ 3 ಪ.ಪಂ. ನಿಂದ ಒಟ್ಟು 157 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಅತಿ ಹೆಚ್ಚು ನಾಮಪತ್ರ ತಿರಸ್ಕೃತಗೊಂಡ ಕುಖ್ಯಾತಿಗೆ ಮಧುಗಿರಿ ಪಾತ್ರವಾಗಿದೆ. ಆದರೆ ಒಂದೇ ಒಂದು ನಾಮಪತ್ರವೂ ತಿರಸ್ಕೃತಗೊಳ್ಳದೇ ಚಿಕ್ಕನಾಯಕನಹಳ್ಳಿಗೆ ಹೆಚ್ಚುಗಾರಿಕೆಯನ್ನು ಮೆರೆದಿದೆ.
ಮಧುಗಿರಿಯಲ್ಲಿ ಒಟ್ಟು 35 ನಾಮಪತ್ರಗಳು ತಿರಸ್ಕೃತಗೊಂಡಿದ್ದು 150 ಮಂದಿ ನಾಮಪತ್ರಗಳು ಪುರಸ್ಕೃತಗೊಂಡಿವೆ. ಹಾಗೆಯೇ ತುಮಕೂರಿನಲ್ಲಿ 22 ನಾಮಪತ್ರಗಳು ತಿರಸ್ಕೃತಗೊಂಡಿದ್ದು 294 ನಾಮಪತ್ರ ಪುರಸ್ಕೃತಗೊಂಡಿವೆ.
1 ನಾಮಪತ್ರ ಪರಿಶೀಲನೆಯನ್ನು ಮುಂದೂಡಲಾಗಿದೆ. ಹಾಗೆಯೇ ತಿಪಟೂರು ನಗರಸಭೆಯಲ್ಲಿ 9 ನಾಮಪತ್ರ ತಿರಸ್ಕೃತಗೊಂಡಿವೆ. ಶಿರಾದಲ್ಲಿ 31 ನಾಮಪತ್ರಗಳು. ಹಾಗೆಯೇ ಕುಣಿಗಲ್ನಲ್ಲಿ 20, ಗುಬ್ಬಿ 11, ತುರುವೇಕೆರೆ 1, ಪಾವಗಡ 25, ಕೊರಟಗೆರೆ 3 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿವೆ. ತುಮಕೂರು ನಗರಸಭೆಯ 21 ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಂಗಳಮ್ಮ ಎಂಬುವರ ನಾಮಪತ್ರ ಪುರಸ್ಕೃತಗೊಂಡಿದೆ. ಇದೇ ವಾರ್ಡ್ಗೆ ಬಿ ಫಾರಂನೊಂದಿಗೆ ಕಮಲಾ ಕೃಷ್ಣಮೂರ್ತಿ ಅವರು ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ ಮೊದಲು ನಾಮಪತ್ರವನ್ನು ಸುಮಂಗಳಮ್ಮ ಅವರು ಸಲ್ಲಿಸಿದ ಕಾರಣ ಅವರ ನಾಮಪತ್ರ ಪುರಸ್ಕೃತಗೊಂಡು ಕಮಲಾ ಕೃಷ್ಣಮೂರ್ತಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ನಾಮಪತ್ರ ಸಲ್ಲಿಸಲು ಕಳೆದ 23 ರಂದು ಕಡೆಯ ದಿನವಾಗಿತ್ತು. ಸೋಮವಾರ ಬೆಳಗ್ಗೆ ನಾಮಪತ್ರ ಪರಿಶೀಲನೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿತ್ತು. ಅವರ ಸಮ್ಮುಖದಲ್ಲೇ ಪರಿಶೀಲನೆ ನಡೆಯಿತು. ಇನ್ನು ನಾಮಪತ್ರ ಹಿಂತೆಗೆದುಕೊಳ್ಳಲು ಬುಧವಾರ ಕಡೆಯ ದಿನ. ಅಂದು ಎಷ್ಟು ಮಂದಿ ಕಣದಲ್ಲಿ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.
ನಾಮಪತ್ರ ಪರಿಶೀಲನೆ ವೇಳೆ ಸಣ್ಣ ಜಟಾಪಟಿ
ತುಮಕೂರು: ನಾಮಪತ್ರದ ಅಫಿಡವಿಟ್ನಲ್ಲಿ ಲೋಪವಾಗಿದ್ದು ಅದನ್ನು ತಿರಸ್ಕರಿಸುವುದಾಗಿ ಚುನಾವಣಾಧಿಕಾರಿ ಹೇಳಿದ್ದು ಕೆಜೆಪಿ ಮುಖಂಡರನ್ನು ಕೆರಳಿಸಿದ ಘಟನೆ ಇಲ್ಲಿ ನಡೆದಿದೆ.
21ನೇ ವಾರ್ಡ್ನ ಕೆಜೆಪಿ ಅಭ್ಯರ್ಥಿ ಸರೋಜಮ್ಮ ಅವರು ನಾಮಪತ್ರ ಸಲ್ಲಿಸಿದ್ದರು. ಅವರ ಅಫಿಡವಿಟ್ನಲ್ಲಿ ಇಲ್ಲ ಎಂದು ಬರೆಯುವ ಬದಲು ಡ್ಯಾಷ್ ಚಿಹ್ನೆ ಹಾಕಿದ್ದರು. ಇದನ್ನು ಗಮನಿಸಿದ ಚುನಾವಣಾಧಿಕಾರಿ ಈ ನಾಮಪತ್ರ ತಿರಸ್ಕೃತಗೊಳಿಸುವುದಾಗಿ ಹೇಳಿದರು. ಆಗ ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಮಧ್ಯ ಪ್ರವೇಶಿಸಿ ಡ್ಯಾಷ್ ಎಂಬ ಸಿಂಬಲ್ ಇಲ್ಲ ಎನ್ನುವುದನ್ನೇ ಧ್ವನಿಸುತ್ತದೆ ಎಂದು ಸಮಜಾಯಿಷಿ ನೀಡಿದರು. ಆಗ ಚುನಾವಣಾಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಮಂಗಳವಾರ ಬೆಳಗ್ಗೆ 21ನೇ ವಾರ್ಡ್ನ ಕೆಜೆಪಿ ಅಭ್ಯಥಿಯ ನಾಮಪತ್ರ ಪುರಸ್ಕೃತವೋ, ತಿರಸ್ಕೃತವೋ ಎಂಬುದನ್ನು ಘೋಷಿಸುವುದಾಗಿ ತಿಳಿಸಿದರು. ಈಗಾಗಲೇ ಕೆಜೆಪಿ 35 ವಾರ್ಡ್ಗಳ ಪೈಕಿ 32 ವಾರ್ಡ್ಗಳಿಗೆ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. 23ನೇ ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಗದೀಶ್ ಎಂಬುವರನ್ನು ಕೆಜೆಪಿ ಬೆಂಬಲಿಸಿದೆ. ಉಳಿದಂತೆ 2 ವಾರ್ಡ್ಗಳಲ್ಲಿ ಸಮರ್ಥ ಅಭ್ಯರ್ಥಿ ಸಿಗದೇ ಇದ್ದುದ್ದರಿಂದ ಯಾವೊಬ್ಬರನ್ನು ಕಣಕ್ಕಿಳಿಸಿಲ್ಲ ಎಂದು ಕನ್ನಡಪ್ರಭಕ್ಕೆ ಹೆಬ್ಬಾಕ ರವಿಶಂಕರ್ ಮಾಹಿತಿ ನೀಡಿದರು.