ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾವೇರಿ ಐ ತೀರ್ಪಿನಿಂದ ರಾಜ್ಯಕ್ಕೆ ಲಾಭ: ಟಿಬಿಜೆ

Srinivasa Murthy VN
Updated On : 26 Feb 2013, 11:06 am

ತುಮಕೂರು: ಕಾವೇರಿ ಐ ತೀರ್ಪಿನಿಂದ ಕರ್ನಾಟಕಕ್ಕೆ ಲಾಭವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಟಿ.ಬಿ. ಜಯಚಂದ್ರ  ಅಭಿಪ್ರಾಯಪಟ್ಟಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮಿಳ್ನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಹಾಗೂ ಕೇರಳಕ್ಕೆ 30 ಟಿಎಂಸಿ ನೀರು ಲಭ್ಯವಾಗುವಂತೆ ತೀರ್ಪು ನೀಡಲಾಗಿದೆ. ಕಾವೇರಿ ಕೊನೆ ಮಧ್ಯಂತರ ತೀರ್ಪಿನ ನಂತರ ಈಗ ತಮಿಳ್ನಾಡಿಗೆ ಬಿಡಬೇಕಿರುವ ನೀರಿನ ಪ್ರಮಾಣ 205 ರಿಂದ 192 ಟಿಎಂಸಿಗಿಳಿದಿದೆ. ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ರಾಜ್ಯದ ಗಡಿಭಾಗವಾದ ಬಿಳಿಗುಂಡ್ಲುವಿನವರೆಗೆ ಕಾವೇರಿ ನೀರಿನ ಲಭ್ಯತೆ 538 ಟಿಎಂಸಿ. ಒಟ್ಟಾರೆ 192 ಟಿಎಂಸಿ ನೀರನ್ನು ತಮಿಳ್ನಾಡಿಗೆ ನೀಡಿದರೂ ಇನ್ನೂ 325 ಟಿಎಂಸಿ ನೀರು ಉಳಿಯಲಿದೆ. ಈ ನೀರನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ರಾಜ್ಯಕ್ಕಿದೆ. ಈ ಮಧ್ಯಂತರ ಆದೇಶದಿಂದ 1892 - 1924 ರ ನಡುವೆ ಬ್ರಿಟಿಷ್ ಆಡಳಿತಾವಧಿಯಲ್ಲಿ ಆದ ಒಪ್ಪಂದ ತಾನೇ -ತಾನಾಗಿ ರದ್ದಾಗುತ್ತದೆ. ಜತೆಗೆ ಸಮುದ್ರಕ್ಕೆ ಹರಿಯುವ ನೀರನ್ನು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಬಳಸಿಕೊಳ್ಳಲು ಅವಕಾಶವಿದೆ. ಮೇಕೆ ದಾಟು ಬಳಿ ವಿದ್ಯುತ್ ಉತ್ಪಾದಿಸಿ, ಇದೇ ನೀರನ್ನು ತಮಿಳ್ನಾಡಿಗೆ ಬಿಡಬಹುದಾಗಿದೆ. ಈ ಮಧ್ಯಂತರ ಕೊನೆ ತೀರ್ಪಿನಿಂದ ಬೆಂಗಳೂರಿಗೆ  ಹೇಮಾವತಿ ನೀರು ತರಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ರಾಜ್ಯ ಸರ್ಕಾರ ಇಚ್ಚಾ ಶಕ್ತಿ ಪ್ರದರ್ಶಿಸಬೇಕು. ವಿವಿಧ ಯೋಜನೆಗಳನ್ನು ರೂಪಿಸಿ, ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಯಚಂದ್ರ ಪ್ರತಿಪಾದಿಸಿದರು.

ಎನ್‌ಎಸ್‌ಎಸ್ ಶಿಬಿರ
ಶಿರಾ:
ಪಟ್ಟಣದ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಗಜಮಾರನಹಳ್ಳಿ ಗ್ರಾಮದಲ್ಲಿ ಸ್ವಸ್ತ ಸಮಾಜ ನಿರ್ಮಾಣದಲ್ಲಿ ನೈರ್ಮಲ್ಯ ಮತ್ತು ವ್ಯಕ್ತಿಗತ ಆರೋಗ್ಯ ಹಾಗೂ ಕ್ರಿಯಾಶೀಲ ಸಮಾಜ ನಿರ್ಮಾಣಕ್ಕಾಗಿ ಕ್ರಿಯಾಶೀಲ ಮನಸ್ಸಿನ ಯುವಕರು ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಪ್ರಾಚಾರ್ಯ ಎಸ್.ಜೆ.ನಾಗರಾಜು ತಿಳಿಸಿದ್ದಾರೆ. ಫೆ. 27 ರಿಂದ ಮಾ. 5 ವರೆಗೆ ನಡೆಯುವ ಸದರಿ ಶಿಬಿರವನ್ನು ಶಾಸಕ ಟಿ.ಬಿ.ಜಯಚಂದ್ರ ಅವರು ಉದ್ಘಾಟಿಸುವರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಗುಳಿಗೇನಹಳ್ಳಿ ನಾಗರಾಜು ಧ್ವಜಾರೋಹಣ ನೆರವೇರಿಸುವರು. ಕಾರ್ಯದರ್ಶಿ ಎಚ್.ಜಿ. ಲಿಂಗಯ್ಯ ನವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಿ.ಪಂ. ಸದಸ್ಯ ಕೃಷ್ಣಮೂರ್ತಿ ಅವರು ಪ್ರತಿಜ್ಞಾ ವಿಧಿ ಬೋಧಿಸುವರು. ಪ್ರಾಚಾರ್ಯ ಎಸ್.ಜೆ.ನಾಗರಾಜು ಅಧ್ಯಕ್ಷತೆ ವಹಿಸುವರು. ಶಿಬಿರಾಧಿಕಾರಿ ಜಿ.ಎಂ.ಪಾಂಡುರಂಗಪ್ಪ ಪ್ರಾಸ್ತವಿಕ ನುಡಿಗಳನ್ನಾಡುವರು.

ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ
ಪಾವಗಡ:
ಪ್ರಸಕ್ತ ಸಾಲಿನ ಬಸವ ವಸತಿ ಯೋಜನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ  ಅರ್ಹರು ಮನೆಗಳನ್ನು ನಿರ್ಮಿಸಿಕೊಂಡು 6 ತಿಂಗಳು ಕಳೆದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲವೆಂದು ಫಲಾನುಭವಿಗಳು ಆರೋಪಿಸಿದ್ದಾರೆ. 2012-13ನೇ ಸಾಲಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ  3500 ಮನೆಗಳು ಮಂಜೂರಾತಿಯಾಗಿದ್ದು ಕಳೆದ ವರ್ಷ ಏಪ್ರಿಲ್, ಮೇ ಮಾಹೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಂದ ಆಯ್ಕೆಯ ಪ್ರಕ್ರಿಯೆ ನಡೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಗ್ರಾಮ ಸಭೆಗಳ ಮೂಲಕ ಆಯ್ಕೆಯಾದ ಫಲಾನುಭವಿಗಳು ಮನೆಗಳ ಪಾಯಗಳನ್ನು ಹಾಕಿಕೊಂಡು ಸರ್ಕಾರದ ಆದೇಶದಂತೆ ಫಲಾನುಭವಿಗಳ ಖಾತೆಗೆ ಆನ್‌ಲೈನ್ ಮೂಲಕ ಹಣ ಬಿಡುಗಡೆ ಮಾಡಲು ಮನೆಗಳಿಗೆ ಸಂಬಂಧಪಟ್ಟ ವಿವರಗನ್ನು ನೀಡಿದರೂ ಸುಮಾರು 6 ತಿಂಗಳು ಕಳೆದರೂ ಇದುವರೆವಿಗೂ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದ್ದಾರೆ.  

ಯಡಿಯೂರಪ್ಪ ಚುನಾವಣಾ ಪ್ರಚಾರ
ತುಮಕೂರು:
ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗರಸಭೆ ಚುನಾವಣೆ ನಿಮಿತ್ತ ನಗರದ ವಿವಿಧೆಡೆ ಈ ಕೆಳಕಂಡ ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮೊದಲು ಸಿರಾಗೇಟ್- ಕನಕ ವೃತ್ತದ ವಾರ್ಡ್ ನಂ 1, 2, 3 ನಂತರ ಚಿಕ್ಕಪೇಟೆ ಸರ್ಕಲ್ ವ್ಯಾಪ್ತಿಯ  ವಾರ್ಡ್ ನಂ 4, 5, 7, ಬಳಿಕ ಬಿ ಜಿ ಪಾಳ್ಯ ಸರ್ಕಲ್‌ನ ವಾರ್ಡ್ ನಂ 6, 9, 10, 12, 13, 14 ಬಳಿಕ ಬನಶಂಕರಿ ಸರ್ಕಲ್‌ನ  ವಾರ್ಡ್ ನಂ 11, 17, 18, 28, 29 ಇದಾದ ಬಳಿಕ ಟೌನ್‌ಹಾಲ್ ಸರ್ಕಲ್-  ವಾರ್ಡ್ ನಂ 15 ರೋಡ್ ಶೋ. ನಂತರ ಕೆ.ಎರ್.ಆರ್‌ಟಿಸಿ ಬಸ್ ಸ್ಟ್ಯಾಂಡ್ ಮೂಲಕ ರೋಡ್ ಶೋ.ರೋಡ್ ಶೋ- ಟೌನ್‌ಲ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಮೂಲಕ ಗುಂಚಿ ಸರ್ಕಲ್ ಸೇರಿದಂತೆ ಎಲ್ಲಾ ವಾರ್ಡ್‌ಗಳಲ್ಲಿ ಸಭೆ ನಡೆಯಲಿದ್ದು ಕಡೆಗೆ ಕ್ಯಾತ್ಸಂದ್ರದಲ್ಲಿ ಮುಕ್ತಾಯಗೊಳ್ಳಲಿದೆ.

ಸುಳ್ಳು ದಾಖಲೆ ಪತ್ರ: ಆರೋಪ
ಗುಬ್ಬಿ :
ಪಟ್ಟಣ ಪಂಚಾಯ್ತಿಗೆ 5ನೇ ವಾರ್ಡಿನಿಂದ ಸ್ವರ್ಧಿಸಿರುವ ಕಾಂಗ್ರೆಸ್‌ನ ಕೆ.ಎಂ.ನೇತ್ರಾವತಿ ನಾಯಕ ಜಾತಿಗೆ ಸೇರಿದವರೆಂದು ಸುಳ್ಳು ದಾಖಲೆ ಪತ್ರವನ್ನು ಸೃಷ್ಟಿಸಿ ಕೊಟ್ಟಿರುತ್ತಾರೆ ಎಂದು ಜಾತ್ಯತೀತ ಜನತಾದಳ ಪರಿಶಿಷ್ಟ ಘಟಕದ ಅಧ್ಯಕ್ಷ ಜಿ.ವಿ.ಮಂಜುನಾಥ್ ಆರೋಪಿಸಿದ್ದಾರೆ. ಇವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸೆಲ್‌ಗೆ ದೂರು ನೀಡಲಾಗುವುದು ಮತ್ತು ಕಾನೂನು ಹೋರಾಟಕ್ಕೂ ಸಿದ್ಧರಿದ್ದು ಇಂತವರಿಗೆ ಸಹಕಾರ ನೀಡಿದ ಸಂಬಂಧಪಟ್ಟ ಅಧಿಕಾರಿ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಕೆ.ಎಂ. ನೇತ್ರಾವತಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಅಕ್ರಮ ಮರಳು ಸಾಗಾಣೆ: ಲಾರಿ ವಶ
ಶಿರಾ:
ಶಿರಾ ತಾಲೂಕು ಮರಳಪ್ಪನಹಳ್ಳಿ ಗೇಟ್ ಬಳಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ತಹಸೀಲ್ದಾರ್ ಕಾಂತರಾಜು ಪತ್ತೆ ಮಾಡಿ ಸದರಿ ಲಾರಿಯನ್ನು ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಉಬ್ಬಸ ರೋಗ ತಪಾಸಣಾ ಶಿಬಿರ
ಶಿರಾ:
ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿರುವ ಪ್ರಸಾದ್  ಕ್ಲ್ಲಿನಿಕ್ ಮತ್ತು ಲ್ಯಾಬ್ ಆವರಣದಲ್ಲಿ ಉಚಿತ ಅಸ್ತಮಾ ಮತ್ತು ಉಬ್ಬಸ ರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.  ಹೃದಯ ರೋಗ ಹಾಗ ಅಸ್ತಮಾ ತಜ್ಞರಾದ ಡಾ.ಯಲ್ಲಪ್ಪ, ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಪ್ರಸಾದ್ ಅವರಿಂದ ಈ ಉಚಿತ ಶಿಬಿರ ನಡೆಯಲಿದ್ದು ಫೆ. 27, ಬುಧವಾರ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಸಂಪರ್ಕಿಸಬಹುದು. 500 ರೂ. ವೆಚ್ಚವಾಗುವ ಸ್ಪೈರೋ ಮೆಟ್ರಿ ಪರೀಕ್ಷೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ಆಯುಧ ಸಂಬಂಧ ಪೊಲೀಸ್ ಠಾಣೆಗೆ ಒಪ್ಪಿಸಿ
ತುಮಕೂರು:
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯುಧಗಳ ಪರವಾನಗಿಯನ್ನು ಹೊಂದಿರುವ ಪರವಾನಗಿದಾರರು ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಒಪ್ಪಿಸಿ ಸ್ವೀಕೃತಿ ಪಡೆಯುವಂತೆ ಜಿಲ್ಲಾಧಿಕಾರಿ ಆರ್.ಕೆ. ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ 7 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಸಂಬಂಧ ಫೆಬ್ರವರಿ 15 ರಿಂದ ಮಾರ್ಟ್ 11 ರವರೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸುವ ಸಂಬಂಧ ಪರವಾನಗಿದಾರರು ಆಯುಧಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಅವರು ಕೋರಿದ್ದಾರೆ.

ವಿಶೇಷ ಅನುದಾನ: ಶಾಸಕ ವೆಂಕಟರಮಣಪ್ಪಗೆ ಕೃತಜ್ಞತೆ
ಪಾವಗಡ:
ಶಾಸಕರ ವಿಶೇಷ ಅನುದಾನದಲ್ಲಿ ತಾಲೂಕಿನ ರಾಜವಂತಿ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ 15 ಲಕ್ಷ ಹಾಗೂ ದೇವಸ್ಥಾನದ ಅಭಿವೃದ್ಧಿಗೆ 10ಲಕ್ಷ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಡ್ರೈವರ್ ರಾಮಾಂಜಿನಪ್ಪ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಸಕ ವೆಂಕಟರಮಣಪ್ಪ ಅವರು ರಾಜವಂತಿ ಗ್ರಾಪಂ ವ್ಯಾಪ್ತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಲಕ್ಷಾಂತರ ರು. ಹಣ ಬಿಡುಗಡೆ ಮಾಡುವ ಮೂಲಕ ಸಹಕರಿಸಿದ್ದಾರೆ ಎಂದರು. ತಅಲ್ಲದೆ ಪ್ರಸಕ್ತ ಸಾಲಿನಲ್ಲಿ ರಾಜವಂತಿ ಗ್ರಾಮದ ಅಭಿವೃದ್ಧಿಗೆ ಶಾಸಕರ ನಿಧಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 15ಲಕ್ಷ ಹಾಗೂ ದೇವಸ್ಥಾನದ ಅಭಿವೃದ್ಧಿಗೆ 10ಲಕ್ಷ ರು. ಮಂಜೂರು ಮಾಡಿರುವುದಾಗಿ ಅವರು ತಿಳಿಸಿದ್ದು, ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಎಸ್ಸಿ, ಎಸ್‌ಟಿ ಹಾಗೂ ಇತರೆ ಬಡ ಫಲಾನುಭವಿಗಳ ಅನುಕೂಲಕ್ಕೆ ಸುಮಾರು 30 ಕೊಳವೆ ಬಾವಿಗಳು ಸೇರಿದಂತೆ  ವಿವಿಧ ಯೋಜನೆ ಅಡಿಯಲ್ಲಿ ಅನೇಕ ಬಡವರಿಗೆ ಮನೆಗಳ ಮಂಜೂರಾತಿ ಕಲ್ಪಿಸಿದ್ದಾರೆ ಎಂದರು. ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಪರವಾಗಿ ಶಾಸಕ ವೆಂಕಟರಮಣಪ್ಪ ಹಾಗೂ ಯುವ ಮುಖಂಡ ಎಚ್.ವಿ.ವೆಂಕಟೇಶ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement