ರೇಲ್ವೆ ಬಜೆಟ್ 2013 ಏನಂತಾರೆ...?
ಈ ಬಾರಿಯ ರೈಲ್ವೆ ಬಜೆಟ್ ತೀವ್ರ ನಿರಾಸೆ ಮೂಡಿಸಿದೆ. ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೇ ಬಿಂಬಿಸಲ್ಪಟ್ಟಿರುವ ತುಮಕೂರು ಪದೇ -ಪದೇ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ.
-ರಮೇಶ್, ಜೆಡಿಎಸ್ ಮುಖಂಡ
ಹೊಸ ರೈಲುಗಳಿರಲಿ. ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕುರಿತು ಯಾವುದೇ ಪ್ರಸ್ತಾಪವಾಗದಿರುವುದು ವಿಷಾದನೀಯ. ರೈಲ್ವೆ ದರ ಏರಿಸಿದರಷ್ಟೇ ಸಾಲದು. ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
-ಸೈಯದ್ ಅಲ್ತಾಫ್, ಜಿಲ್ಲಾ ಕಾರ್ಯದರ್ಶಿ
ಈ ಬಾರಿಯ ರೇಲ್ವೆ ಬಜೆಟ್ ತುಮಕೂರಿಗೆ ಕರಾಳ ದಿನ. ಕಳೆದ ಬಾರಿ ಹೇಳಿದ್ದ ಹಳೇ ಯೋಜನೆಗಳನ್ನೇ ಮತ್ತೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಹೊಸದೇನೂ ಇಲ್ಲ. ಹೊಸ ರೈಲ್ವೆ ಯೋಜನೆಗಳೂ ಇಲ್ಲ.
- ರಮೇಶ್, ಹೋರಾಟಗಾರ
ಭಾನುವಾರ ಮಧ್ಯಾಹ್ನ ತುಮಕೂರಿನಿಂದ ಬೆಂಗಳೂರಿಗೆ ಫುಷ್ಪುಲ್ ರೈಲು ಬಿಟ್ಟಿರುವುದು ಸಂತೋಷದ ವಿಷಯ. ಅದು ಬಿಟ್ಟರೆ ತುಮಕೂರಿಗೆ ಬೇರೆ ವಿಶೇಷ ಯೋಜನೆ ದೊರೆತಿಲ್ಲ.
-ಪಂಡಿತ್ ಜವಾಹರ್, ರೈಲ್ವೆ ಪ್ರಯಾಣಿಕ
ತುಮಕೂರಿಗೆ ಈ ಬಾರಿ ವಿಶೇಷವೇನಿಲ್ಲ. ಹೊಸ ಯೋಜನೆಗಳೂ ಇಲ್ಲ. ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಪ್ರಸ್ತಾಪವೂ ಇಲ್ಲ.
-ಸುಬ್ರಹ್ಮಣ್ಯ, ಕಾರ್ಮಿಕ ಮುಖಂಡ
ಹಳೇ ಯೋಜನೆಗಳನ್ನೇ ಮತ್ತೆ ಈ ರೈಲ್ವೆ ಬಜೆಟ್ನಲ್ಲಿ ಪ್ರಕಟಿಸಿರುವುದು ಹಳೇ ಮದ್ಯ, ಹೊಸ ಶೀಷೆಯಂತೆ ಎಂಬಂತಾಗಿದೆ. ಕನಿಷ್ಠ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ, ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರಸ್ತಾಪವನ್ನಾದರೂ ಮಾಡಬೇಕಿತ್ತು. ತುಮಕೂರಿನ ಜನತೆಗೆ ನಿರಾಸೆಯಾಗಿದೆ.
-ರವೀಂದ್ರನಾಥ ಠಾಗೂರ್, ವಕೀಲ
ಕೇಂದ್ರ ಸರ್ಕಾರ ಚುನಾವಣೆ ಮೇಲೆ ಕಣ್ಣಿಟ್ಟು ರೇಲ್ವೆ ಬಜೆಟ್ ಮಂಡಿಸುವ ಮೂಲಕ ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದು ಕರ್ನಾಟಕದ ಜನತೆಗೆ ಈ ಬಜೆಟ್ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿ ಕಂಬಿಗಳಿಲ್ಲದೆ ರೇಲು ಓಡಿಸುತ್ತಿರುವ ಬಜೆಟ್ ಇದಾಗಿದೆ.
-ಪ್ರೊ.ಮೂರ್ತಿ, ಹಿರಿಯ ಸಾಹಿತಿ
ಕೇಂದ್ರ ಸರ್ಕಾರ ಕರ್ನಾಟಕದ ಹಿತ ದೃಷ್ಟಿಯಿಂದ ಹೊಸ ಮಾರ್ಗಗಳನ್ನು ಪ್ರಾರಂಭಿಸಿ ಜನ ಸಾಮಾನ್ಯರು ಸುಲಭವಾಗಿ ಸಂಚರಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.
-ಎಂ..ಕೆ.ನಂಜುಂಡಯ್ಯ ಪುರಸಭೆ ಮಾಜಿ ಅಧ್ಯಕ್ಷ
ಕೇಂದ್ರ ಸರ್ಕಾರ ಸದಾ ಕಾಲ ಕರ್ನಾಟಕ ಮತ್ತು ತುಮಕೂರು ಜಿಲ್ಲೆ ಪರವಾಗಿ ರೇಲ್ವೆ ಬಜೆಟ್ ಮಂಡಿಸುವ ಮುಖೇನ ಬಡವರ ಪರವಾಗಿ ಧ್ವನಿ ಎತ್ತಿ ಹೊಸ ರೇಲ್ವೆ ಮಾರ್ಗಗಳನ್ನು ಆರಂಭಿಸುವ ಮೂಲಕ ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದೆ.
-ಕೆ.ಎನ್.ರಾಜಣ್ಣ , ಅಧ್ಯಕ್ಷರು, ಸಹಕಾರ ಬ್ಯಾಂಕ್
ಕರ್ನಾಟಕದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯಿಂದ ರೇಲ್ವೆ ಇಲಾಖೆ ಕಲಿಯುವುದು ಸಾಕಷ್ಟಿದೆ. ಆನ್ಲೈನ್ ಸೇವೆ, ಎಸ್ಎಮ್ಎಸ್ ಮಾಹಿತಿ, ಮುಂದಿನ ನಿಲ್ದಾಣದ ಕುರಿತು ಘೋಷಣೆ, ಸಮಯಪಾಲನೆ ಬಗ್ಗೆ ಕರ್ನಾಟಕದ ಸಂಸ್ಥೆಗಳಿಂದ ರೇಲ್ವೆ ಕಲಿಯಬೇಕು.
-ರೂಪೇಶ್ ಶಿರಾ, ಉದ್ಯೋಗಿ