ಜನಪರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಜನತೆಯಿಂದ ತಕ್ಕಪಾಠ: ಸಚಿವರ ಎಚ್ಚರಿಕೆ
ಕುಣಿಗಲ್: ಶಾಸಕರ ರಾಜಿನಾಮೆ ಪ್ರಹಸನ ಹುಡುಗಾಟಿಕೆ ವಿಷಯವಲ್ಲ. ರಾಜ್ಯದ ಮತದಾರರು ಎಲ್ಲವನ್ನು ಗಂಭೀರವಾಗಿ ನೋಡುತ್ತಿದ್ದು, ಉತ್ತಮ ಕೆಲಸ ಮಾಡುವವರಿಗೆ ತೊಂದರೆ ಮಾಡಿದರೆ ತಕ್ಕ ಪಾಠ ಕಲಿಸಲಿದ್ದಾರೆಂದು ಯಡಿಯೂರಪ್ಪನವರ ಹೆಸರನ್ನು ಪ್ರಸ್ತಾಪಿಸದೆ, ಸಚಿವ ಸುರೇಶ್ ಕುಮಾರ್ ಮಾಜಿ ಸಿಎಂಗೆ ಪರೋಕ್ಷ ಎಚ್ಚರಿಕೆ ನೀಡಿದರು.ತಾಲೂಕಿನ ಅಮೃತೂರಿನಲ್ಲಿ ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮವಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ಏಳಿಗೆ ಸಹಿಸದೆ ಕೆಲವರು ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತ, ದಿನಬೆಳಗಾದರೆ ಪತ್ರಿಕೆಗಳಲ್ಲಿ ಸುದ್ದಿ ಮಾಡಿ ಜನತೆಯನ್ನು ಗೊಂದಲದಲ್ಲಿ ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ನೆಮ್ಮದಿ ಹಾಳಾಗುತ್ತದೆ ಹೊರತು ಇನ್ನೇನು ಆಗುವುದಿಲ್ಲ, ರಾಜಿನಾಮೆ ಪ್ರಹಸನವೂ ಅಷ್ಟೇ. ಇದರಿಂದ ಯಾವುದೇ ತೊಂದರೆ ಇಲ್ಲ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಪಾಲಿನ ಅವಧಿಯನ್ನು ಪೂರ್ಣವಾಗಿ ಮುಗಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ಡಿ.ಕೃಷ್ಣಕುಮಾರ್, ತಾಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಪ್ರಮುಖರಾದ ಸೋಮಶೇಖರ್, ರಂಗಸ್ವಾಮಿ, ನಾರಾಯಣಗೌಡ, ತಿಮ್ಮಪ್ಪ,ವರಲಕ್ಷ್ಮೀ, ಗೌರಮ್ಮ, ಅಮೃತೂರು ಹೋಬಳಿ ಬಿಜೆಪಿ ಅಧ್ಯಕ್ಷ ದಿನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.