ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಪುಟದಿಂದ ಶಿಂಧೆ ವಜಾ ಮಾಡಿ

Srinivasa Murthy VN
Updated On : 24 Jan 2013, 9:49 am

ತುಮಕೂರು: ಕೇಂದ್ರ ಗೃಹಮಂತ್ರಿ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ಖಂಡಿಸಿ ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂದು ಅಪ್ರಬುದ್ಧ ಹೇಳಿಕೆ ನೀಡಿರುವ ಸುಶೀಲ್ ಕುಮಾರ್ ಶಿಂಧೆಯವರನ್ನು ಸಂಪುಟದಿಂದ ವಜಾ ಮಾಡಬೇಕು. ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು  ಎಂದು ಬಿಜೆಪಿ ಆಗ್ರಹಿಸಿದೆ.
ಕಾಂಗ್ರೆಸ್‌ನ ಚಿಂತನಾ ಬೈಟಕ್‌ನಲ್ಲಿ ಶಿಂಧೆಯವರು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಹಿಂದು ಆತಂಕವಾದ, ಕೇಸರಿ ಭಯೋತ್ಪಾದನೆಗಳಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಎಂದು ಹುರುಳಿಲ್ಲದ ಬೇಜವಾಬ್ದಾರಿ ಆರೋಪವನ್ನು ಹೊರಿಸಿರುವುದು ಖಂಡನೀಯ. ಅದರಲ್ಲೂ ದೇಶದ ಗೃಹಮಂತ್ರಿ ಹೊಣೆ ಹೊತ್ತಿರುವ ಅವರು ಈ ಆರೋಪವನ್ನು ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರ ಸಮ್ಮುಖದಲ್ಲಿಯೇ ಮಾಡಿರುವುದು ಬೇಜವಾಬ್ದಾರಿ ಸಂಗತಿಯಾಗಿದೆ ಎಂದು ಬಿಜಿಪಿ ಅಭಿಪ್ರಾಯಪಟ್ಟಿದೆ.
ಘನಘೋರ ಅಪಚಾರ: ಶಿಂಧೆ ಭಾರತದ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಚಿಂತನೆಗೆ ಘನಘೋರ ಅಪಚಾರ ಮಾಡಿದ್ದಾರೆ. ಸರ್ವಧರ್ಮ, ಸಮಭಾವ, ಪರಧರ್ಮ ಸಹಿಷ್ಣುತೆಯನ್ನು ಬೋಧಿಸುವ ಹಿಂದು ಚಿಂತನೆಗಳು ಎಂದಿಗೂ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದೇ ಇಲ್ಲ. ಭಯೋತ್ಪಾದನೆ ಎಂಬ ಪದವೇ ಹಿಂದು ಇತಿಹಾಸದಲ್ಲಿ ಕಾಣುವುದಿಲ್ಲ ಎಂದು ಬಿಜೆಪಿ ಹೇಳಿದೆ. ಭಾರತದ ರಾಷ್ಟ್ರಧ್ವಜದ ಒಂದು ಭಾಗವೇ ಆಗಿರುವ ಕೇಸರಿಯನ್ನು ಭಯೋತ್ಪಾದನೆಯೊಂದಿಗೆ ತಳಕು ಹಾಕಿರುವುದು ಕಾಂಗ್ರೆಸ್ ನಾಯಕರು ಈ ನಾಡಿನ ಸಂಸ್ಕೃತಿಗೆ ಮಾಡಿದ ಅಪಮಾನವಾಗಿದೆ. ವಿವೇಕಾನಂದರ 150 ನೇ ವರ್ಷಾಚರಣೆಯ ಸಂದರ್ಭದಲ್ಲಿ ಶಿಂಧೆ ಹೇಳಿಕೆ ಭಾರತೀಯರ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ ಎಂದು ಬಿಜೆಪಿ ತಿಳಿಸಿದೆ.
ಸಾಕ್ಷಿ ಒದಗಿಸಲಿ: ಸ್ವತಃ ಗೃಹಮಂತ್ರಿಗಳಾಗಿರುವ ಶಿಂಧೆಯವರು ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ನಡೆಯುತ್ತಿದ್ದಲ್ಲಿ, ಅದಕ್ಕೆ ಸಾಕ್ಷಿಗಳನ್ನು ಒದಗಿಸಲಿ, ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೃಥಾ ಆರೋಪಗಳನ್ನು ಹೊರಿಸುವ ಹೀನ ಸಂಸ್ಕೃತಿಯನ್ನು ಶಿಂಧೆ ಸೇರಿದಂತೆ ಕಾಂಗ್ರೆಸ್ಸಿಗರು ತ್ಯಜಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ನಾಟಿಕೆಗೇಡು: ಈಗಾಗಲೇ ಭಾರತದ ಮೇಲೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದು ವೇದ್ಯವಾಗಿದೆ. ಭಾರತದ ಗಡಿಯಲ್ಲಿ ಭಯೋತ್ಪಾದಕರನ್ನು ನುಗ್ಗಿಸಲು ಪಾಕ್ ಸೈನ್ಯವೇ ಸಹಕರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸುಶಿಲ್ ಕುಮಾರ್ ಶಿಂಧೆಯವರ ಹೇಳಿಕೆಯನ್ನು ಕಾಂಗ್ರೆಸ್ ಹಾಗೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ತೊಯಿಬಾ, ಹಿಜ್‌ಬುಲ್ ಮುಜಾಹಿದ್ದಿನ್‌ಗಳು ಒಪ್ಪಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.
ಆಧಾರ ರಹಿತ ಹೇಳಿಕೆಗಳನ್ನು ನೀಡಿ ದೇಶದ ಕೋಟ್ಯಂತರ ಹಿಂದುಗಳ ಗೌರವಕ್ಕೆ ಚ್ಯುತಿ ತಂದಿರುವ ಶಿಂಧೆ, ಪರೋಕ್ಷವಾಗಿ ಪಾಕ್ ಪ್ರೇರಿತ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಸುಶೀಲ್ ಕುಮಾರ್ ಶಿಂಧೆಯವರನ್ನು ಕೂಡಲೇ ಸಂಪುಟದಿಂದ ವಜಾ ಮಾಡುವಂತೆ ಬಿಜೆಪಿ ಆಗ್ರಹಿಸಿದೆ.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ಪಂಚಾಕ್ಷರಯ್ಯ ಇತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement