ಚಾಮುಂಡೇಶ್ವರಿ ದೇವಿಗೆ ಕುಂಕುಮಾರ್ಚನೆ
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಬೀರಸಂದ್ರ ಗ್ರಾಮದ ಚಾಮುಂಡೇಶ್ವರಿ ದೇವಿಗೆ ಬನದ ಹುಣ್ಣಿಮೆ ಅಂಗವಾಗಿ ದುರ್ಗಾಹೋಮ, ಅಭಿಷೇಕ, ಕುಂಕುಮಾರ್ಚನೆ ಕಾರ್ಯಕ್ರಮವು ಭಾನುವಾರ ನಡೆಯಲಿದೆ. ಕುಪ್ಪೂರು ಮಠದ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಲೋಕಸಭಾ ಸದಸ್ಯ ಜಿ.ಎಸ್. ಬವಸರಾಜು ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಹುಲಿನಾಯ್ಕರ್, ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ, ಎಪಿಎಂಸಿ ಅಧ್ಯಕ್ಷ ದಿವಾಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಭಾಗವಹಿಸಲಿದ್ದಾರೆ.
ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ
ತುಮಕೂರು: ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ತಕ್ಷಣ ಸ್ಪಂದಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ. ಕಾಲೇಜಿನಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು ಕೊಠಡಿ ಕೊರತೆ ಇದೆ.
ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೊಠಡಿ ಕೊರತೆ ಕಾರಣದಿಂದ ಅನೇಕ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಾಖಲಾತಿ ಸಿಗುತ್ತಿಲ್ಲ ಎಂದಿದ್ದಾರೆ. ಈ ಬಾರಿ ಸಹಜವಾಗಿ ದಾಖಲಾತಿ ಬಯಸುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಮೂಲಭೂತ ಸೌಕರ್ಯ ಒದಗಿಸಬೇಕೆಂದು ನಗರ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.
ಪತ್ರಿಕೆಗಳು ಸ್ಥಳೀಯರ ಆಶೋತ್ತರಕ್ಕೆ ಸ್ಪಂದಿಸಲಿ: ರಾಜಣ್ಣ
ಮಧುಗಿರಿ: ಪತ್ರಿಕೆಗಳು ಸ್ಥಳೀಯ ಗ್ರಾಮೀಣ ಪ್ರದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು. ಮಧುಗಿರಿ ಕಸಬಾ ಜಡೇಗೊಂಡನಹಳ್ಳಿಯಲ್ಲಿ ಏಕಶಿಲಾ ಎಂಬ ಹೊಸ ಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ನಿಷ್ಪಕ್ಷಪಾತವಾಗಿ ವರದಿ ನೀಡುವ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ನೈತಿಕ ತಳ ಹದಿಯ ಮೇಲೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಪತ್ರಿಕೆಯನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪತ್ರಿಕೆ ಬೆಳೆಸಬೇಕು. ಪತ್ರಕರ್ತರು ಕೇವಲ ವರದಿ ಮಾಡಿದರೆ ಸಾಲದು, ಅವುಗಳ ಬೆನ್ನತ್ತಿ ಸಮಸ್ಯ ಬಗೆಹರಿಸಲು ನಿರಂತರವಾಗಿ ಶ್ರಮಿಸಬೇಕು ಎಂದರು.
ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿದರು. ಸಿದ್ದಾಪುರ ಗೇಟ್ನಲ್ಲಿರುವ ಸಾಯಿ ಸಾಕ್ಷಿಗಣಪತಿ ವೃದ್ಧಾಶ್ರಮದ ವೆಂಕಟನಾಗ್ ಪತ್ರಿಕೆಗೆ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತುಂಗೋಟಿ ರಾಮಣ್ಣ, ಏಕಶಿಲಾ ಪತ್ರಿಕೆ ಸಂಪಾದಕ ಕಂಬಣ್ಣ ಮೊದಲಾದವರು ಉಪಸ್ಥಿತರಿದ್ದರು.
ಗಿಡ ನೆಡುವ ಕಾರ್ಯಕ್ರಮ
ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ವತಿಯಿಂದ ಎನ್ಸಿಸಿ ಆಶ್ರಯದಲ್ಲಿ ಕುಣಿಗಲ್ ತಾಲೂಕು ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಯ ತಪೋ ಕ್ಷೇತ್ರದ ಬಳಿ ಆಯುರ್ವೇದ ಗುಣವುಳ್ಳ ಸಂಜೀವಿನಿ ಔಷಧಿ ಸಸ್ಯಗಳು, ಹೂ ಮತ್ತು ನೆರಳಿನ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎನ್ಸಿಸಿ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಬಿ. ಶಿವಪ್ರಸಾದ್ ಔಷಧಿ ಸಸ್ಯಗಳ ಮಹತ್ವ, ಪರಿಸರ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಿಲಿಟರಿ ಶೋಧ ಸುಬೇದಾರ್, ಮೇಜರ್ ಎಸ್.ಎಂ. ಶುಕ್ಲ, ಹವಾಲ್ದಾರ್ ಗಣೇಶ್, ಹನುಮಂತಪ್ಪ, ಬಿ. ಶಿವಪ್ರಸಾದ್ ಮುಂತಾದವರು ಇದ್ದರು.
ದಲಿತ ವಿಮೋಚನಾ ಸೇನೆ ಪದಾಧಿಕಾರಿಗಳು
ದಲಿತ ವಿಮೋಚನಾ ಸೇನೆಗೆ ಈ ಕೆಳಕಂಡವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಮುನಿರಾಜ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾಗಿ ಮೊಕ್ತಿಯಾರ್ ಅಹಮದ್ ಖಾನ್, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅಬ್ದುಲ್ ವಹಾಬ್ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್. ಶಿವಕುಮಾರ್, ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವಮ್ಮ, ಕೊರಟಗೆರೆ ತಾಲೂಕು ಅಧ್ಯಕ್ಷರಾಗಿ ವೆಂಕಟೇಶ್, ಮಧುಗಿರಿ ಗ್ರಾಮಾಂತರ ಅಧ್ಯಕ್ಷರಾಗಿ ನರಸೀಯಪ್ಪ, ಮಧುಗಿರಿ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಕೊರಟಗೆರೆ ದೊಡ್ಡಕ್ಕ, ಮಧುಗಿರಿಗೆ ಕಾರ್ಯದರ್ಶಿಯಾಗಿ ಹನುಮಕ್ಕ, ಕೊರಟಗೆರೆಗೆ ನಂಜಮ್ಮ, ಕೊರಟಗೆರೆ ಗೆ ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್, ಉಪಾಧ್ಯಕ್ಷರಾಗಿ ನಾರಾಯಣಪ್ಪ, ವೆಂಕಟರವಣಯ್ಯ ನೇಮಕಗೊಂಡಿದ್ದಾರೆ.
29 ರಂದು ಪುಸ್ತಕ ಬಿಡುಗಡೆ
ಸಿದ್ದಗಂಗಾ ವಿದ್ಯಾಸಂಸ್ಥೆ ಹಾಗೂ ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿರಕ್ತ ತೋಂಟದಾರ್ಯನ ಪಾಲ್ಕುರಿಕೆ ಸೋಮೇಶ್ವರ ಪುರಾಣ ಕೃತಿ ಬಿಡುಗಡೆ ಸಮಾರಂಭ ಜ. 29 ರಂದು ಸಂಜೆ 4 ಗಂಟೆಗೆ ಸಿದ್ದಗಂಗೆಯ ವಿದ್ಯಾಸಂಸ್ಥೆ ಕಚೇರಿ ಆವರಣದಲ್ಲಿ ಏರ್ಪಾಟಾಗಿದೆ. ಸಿದ್ದಗಂಗಾ ಶ್ರೀಗಳು ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಕವಿ ಹಾಗೂ ವಿಮರ್ಶಕ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಮಾತನಾಡಲಿದ್ದಾರೆ. ಡಾ.ಎಸ್. ವಿದ್ಯಾಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಂಜುಂಡಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಬ್ಯಾಂಕ್ ಹುದ್ದೆಗೆ ಉಚಿತ ಕಾರ್ಯಾಗಾರ
ಬ್ಯಾಂಕ್ ಹುದ್ದೆಗಳ ನೇಮಕಾತಿ ಹಿನ್ನೆಲೆಯಲ್ಲಿ ತುಮಕೂರಿನ ವಿಎಫ್ಟಿ ಸಂಸ್ಥೆಯ ವತಿಯಿಂದ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಟಿ.ಎಲ್. ರೇಖಾ ರೆಡ್ಡಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ. 28. ಹೆಚ್ಚಿನ ಮಾಹಿತಿಗಾಗಿ 9845523459, 988 6023459 ಸಂಪರ್ಕಿಸುವಂತೆ ಕೋರಲಾಗಿದೆ.
ತಿಮ್ಮಲಾಪುರ ಶಾಲೆಯಲ್ಲಿ ಗಣರಾಜ್ಯೋತ್ಸವ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ತಿಮ್ಮಲಾಪುರ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 64ನೇ ಗಣರಾಜ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಜಶೇಖರಯ್ಯ ಧ್ವಜಾರೋಹಣ ನೆರವೇರಿಸಿದರು. ಹೊನ್ನವಳ್ಳಿ ಕ್ಲಸ್ಟರ್ ಸಿಆರ್ಪಿ ಮಂಜುಳಮ್ಮ, ಮುಖ್ಯ ಶಿಕ್ಷಕಿಯರಾದ ಎಚ್.ಸಿ. ಸರ್ವಮಂಗಳಮ್ಮ, ಎಸ್.ಕೆ.ತಾರಕೇಶ್ವರಿ, ವೇದಾವತಿ, ಎಸ್.ಡಿ.ಎಂ.ಸಿ ಸದಸ್ಯರಾದ ಶಿವಕುಮಾರ್, ಮಂಜುನಾಥ್ ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.