ಹಾಡು-ಕುಣಿತದಲ್ಲಿ ಮಿಂದೆದ್ದ ಉತ್ಸವ
ತುಮಕೂರು: ಚುಮುಚುಮು ಚಳಿಯಲ್ಲಿ ಅಮೋಘ ಹಾಡು ಕುಣಿತಕ್ಕೆ ಜಿಲ್ಲಾ ಉತ್ಸವ ಸಾಕ್ಷಿಯಾಯಿತು.
ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಜನ ಈ ಹಾಡು, ನೃತ್ಯವನ್ನು ವೀಕ್ಷಿಸಿದ್ದರು. ಮೊದಲಿಗೆ ಅರ್ಚನ ಉಡುಪ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು. ನಂತರ ಝಗಮಗಿಸುವ ಬೆಳಕಿನಲ್ಲಿ ನಿರುಪಮ ರಾಜೇಂದ್ರ ಅವರ ಅಮೋಘ ನೃತ್ಯ ಕಾರ್ಯಕ್ರಮ ನೋಡುಗರ ಕಣ್ಮನವನ್ನು ಸೂರೆಗೊಂಡಿತು. ಕಡೆಗೆ ನಡೆದದ್ದು ಹರಿಹರನ್ ಅವರ ಹಾಡುಗಾರಿಕೆ, ಕನ್ನಡ, ಹಿಂದಿ ಭಾಷೆಯಲ್ಲಿನ ಅವರ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಲಾಗಿರುವ ವಿಶಾಲವಾದ ವೇದಿಕೆಯಲ್ಲಿ ಹಾಡು, ನೃತ್ಯಗಳ ಜುಗಲಬಂದಿ ನಡೆಯಿತು. ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದರೂ ಕಡೆ ಕಡೆಗೆ ಜನ ಸೇರಿದರು. ರಾತ್ರಿ 11.30 ರವರೆಗೆ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಜನ ಮಿಂದೆದ್ದರು.
ಜಿಲ್ಲಾ ಉತ್ಸವದ ಎರಡನೇ ದಿನ ಕೂಡ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ, ರಂಗಗೀತೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಿತು. ನಂತರ ಸಾಹಿತ್ಯ ಗೋಷ್ಠಿ ನಡೆಯಿತು. ಜೂನಿಯರ್ ಕಾಲೇಜಿನ ಮೈದಾನದಲ್ಲಿ ಸಂಜೆ 5.30 ರಿಂದ ಸುಮಾರು 6 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಮನರಂಜನಾ ಕಾರ್ಯಕ್ರಮದ ಮಧ್ಯೆ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ಬಾಬು, ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಡಿಸಿ ಆರ್.ಕೆ. ರಾಜು, ಜಿ.ಪಂ. ಸಿಇಓ ಗೋವಿಂದರಾಜು, ಎಸ್ಪಿ ರಮಣಗುಪ್ತ, ಜಿ.ಪಂ. ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ನಗರಸಭೆ ಪ್ರಭಾರ ಅಧ್ಯಕ್ಷ ಅಸ್ಲಾಂಪಾಷ, ಟೂಡಾ ಅಧ್ಯಕ್ಷ ಶ್ರೀಧರಮೂರ್ತಿ ಮುಂತಾದವರು ಉಪಸ್ಥಿತರಿದ್ದರು.