ಸ್ವಾವಲಂಬಿ ಬದುಕಿಗೆ ವೃತ್ತಿ ಶಿಕ್ಷಕರ ಪಾತ್ರ ಮಹತ್ವ
ತುಮಕೂರು: ವಿದ್ಯಾವಂತ ನಿರುದ್ಯೋಗಿಗಳ ಸ್ವಾವಲಂಬಿ ಬದುಕಿಗೆ ವೃತ್ತಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.
ನಗರದ ಡಯಟ್ನಲ್ಲಿ ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಮಾವೇಶ ಹಾಗೂ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಓದು ಬರಹವನ್ನು ಅರ್ಧಕ್ಕೆ ನಿಲ್ಲಿಸಿದ ವಿದ್ಯಾರ್ಥಿಗಳು ತಾವು ಶಾಲೆಯ ವೃತ್ತಿ ಶಿಕ್ಷಕರಿಂದ ಕಲಿತ ಕರಕುಶಲ ಕಲೆ, ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಯಾಗಿ ಬದುಕಬಹುದು. ಈ ನಿಟ್ಟಿನಲ್ಲಿ ವೃತ್ತಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಮಹತ್ವದ್ದು ಎಂದರು. ಇಂದು ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯುವಕರು ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ. ಇನ್ನು ವಿದ್ಯಾವಂತರು ತಮ್ಮ ಮಕ್ಕಳನ್ನು ಐ.ಟಿ.,ಬಿ.ಟಿ.ಮೆಡಿಕಲ್, ಎಂಜಿನಿಯರಿಂಗ್ ನಂತಹ ತಾಂತ್ರಿಕ ವಿಷಯಗಳಿಗೆ ಸೇರಿಸಲು ಮುಗಿ ಬೀಳುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಮಾಡುವಂತವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದರು.
ಅರ್ಥ ಮಾಡಿಕೊಳ್ಳಬೇಕು: ರಾಷ್ಟ್ರತಿಯಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಅನ್ನವನ್ನು ತಿಂದು ಬದುಕಲು ಮಾತ್ರ ಸಾಧ್ಯ. ಹಣವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಕನಿಷ್ಠ ತಮ್ಮ ಮಕ್ಕಳು ಕೃಷಿ ಪದ್ಧತಿಯ ಪ್ರಾಥಮಿಕ ಹಂತವನ್ನಾದರೂ ಪರಿಚಯಿಸುವ ಕೆಲಸವನ್ನು ತಂದೆ ತಾಯಿಗಳು ಹಾಗೂ ವೃತ್ತಿ ಶಿಕ್ಷಕರು ಮಾಡಬೇಕೆಂದು ಗೋವಿಂದರಾಜು ನುಡಿದರು.
ಇಂದು ಪ್ರೌಢಶಾಲೆ ಹಂತದಲ್ಲಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕ್ರಾಫ್ಟ್ ಮತ್ತು ದೈಹಿಕ ಶಿಕ್ಷಣವನ್ನು ವಿಭಾಗ ಎರಡರಲ್ಲಿ ಪಠ್ಯವಾಗಿ ಸೇರಿಸಲು ಎಲ್ಲಾ ಚಿಂತನೆಗಳು ನಡೆದಿದೆ. ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆಯಿದೆ. ತದನಂತರ ಇವರ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ ಎಂದ ಸಿಇಓ, ವಸ್ತುಪ್ರದರ್ಶನ ಮತ್ತು ಮತ್ತಿತರ ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಸದ್ಯದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗಿಡ ನೆಡಿ: ಕಾಡನ್ನು ಕಡಿದು ನಾಶ ಮಾಡಿರುವುದೇ ಮಳೆ ಸಕಾಲಕ್ಕೆ ಬಾರದಿರುವುದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ವೃತ್ತಿ ಶಿಕ್ಷಣ ಶಿಕ್ಷಕರು ತಮ್ಮಲ್ಲಿರುವ ಸಂಪನ್ಮೂಲ ಬಳಕೆ ಮಾಡಿಕೊಂಡು ಶಾಲಾ ಆವರಣದಲ್ಲಿ ಗಿಡ ನೆಟ್ಟು ಬೆಳೆಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಾಮಾಜಿಕ ಅರಣ್ಯ ಇಲಾಖೆಯಿಂದ ಅಗತ್ಯವಿರುವ ಗಿಡಗಳನ್ನು ನೀಡಲು ಸಿದ್ಧರಿದ್ದೇವೆ. ಕಾಡು ಬೆಳೆಸುವುದು, ಮಳೆ ನೀರುಕೊಯ್ಲು ಯೋಜನೆ ಅಳವಡಿಕೆ ಹಾಗೂ ಸೋಲಾರ್ ದೀಪ ಅಳವಡಿಕೆಗೆ ಈ ಮೂರು ವಿಷಯಗಳ ಕಡೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ವೃತ್ತಿ ಶಿಕ್ಷಣ ಶಿಕ್ಷಕರು ಗಮನಹರಿಸಬೇಕೆಂದು ಗೋವಿಂದರಾಜು ನಿರ್ದೇಶನ ನೀಡಿದರು.
ಸಂತಸದ ವಿಚಾರ: ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಪ್ರೇಮ ಮಾತನಾಡಿ, ವಿದ್ಯಾರ್ಥಿಗಳ ಸ್ವಾವಲಂಬಿ ಜೀವನಕ್ಕೆ ವೃತ್ತಿ ಶಿಕ್ಷಕರು ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಆಲೋಚನೆಗಳಿಗೆ ಮೂರ್ತ ರೂಪಕೊಟ್ಟು ಹಲವಾರು ಪ್ರಾತ್ಯಕ್ಷಿಕೆಗಳನ್ನು ತಯಾರಿಸಿ ನಿಮ್ಮ ಮುಂದೆ ಪ್ರದರ್ಶಿಸಿದ್ದಾರೆ. ಇದು ನಿಜಕ್ಕೂ ಸಂತೋಷ ಪಡುವಂತಹ ವಿಚಾರ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮೋಹನ್ ಕುಮಾರ್, ಇಂದು ಆರು ತಾಲೂಕುಗಳ 150 ಪ್ರೌಢಶಾಲೆಗಳ ಸುಮಾರು ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಹಲವಾರು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದ್ದಾರೆ. ಬಡಗಿ, ಕಮ್ಮಾರ, ದರ್ಜಿ, ತೋಟಗಾರಿಕೆ, ಕೃಷಿ ಹಾಗೂ ಕರಕುಶಲ ಕಲೆಗಳ ಪ್ರದರ್ಶನ ಅದ್ಭುತವಾಗಿದೆ. ವೃತ್ತಿ ಶಿಕ್ಷಕರ ರಾಜ್ಯ ಮಟ್ಟದ ಸಮಾವೇಶವನ್ನು ತುಮಕೂರಿನಲ್ಲಿಯೇ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ವೃತ್ತಿ ಶಿಕ್ಷಕ ವಿಷಯ ಪರಿವೀಕ್ಷಕ ಎಲ್. ವೆಂಕಟೇಶ್, ಡಯಟ್ನ ಉಪಪ್ರಾಂಶುಪಾಲರಾದ ಸುಜಾತ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಪರಶಿವಮೂರ್ತಿ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಬಿ. ಮಹಾಲಿಂಗಪ್ಪ, ಅಧ್ಯಕ್ಷ ಡಿ.ಆರ್. ನರಸಿಂಹಮೂರ್ತಿ, ಉಪಾಧ್ಯಕ್ಷ ಕೆ.ಬಿ. ಜಯಣ್ಣ, ಕಾರ್ಯದರ್ಶಿ ಶಿವಾನಂದ ಸೇರಿದಂತೆ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಸಿಇಓ ಗೋವಿಂದರಾಜು ಮತ್ತು ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ ಅವರು ಮಕ್ಕಳು ತಯಾರಿಸಿದ್ದ ವಿವಿಧ ಮಾದರಿಗಳನ್ನು ವೀಕ್ಷಿಸಿದರು.