ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯುವದಳ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

Srinivasa Murthy VN
Updated On : 1 Feb 2013, 12:31 pm

ತುಮಕೂರು: ಭಾರತ ಸರ್ಕಾರ ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಹಾಗೂ ಯುವಜನತೆಯನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಯುವದಳ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ನೆಹರು ಯುವ ಕೇಂದ್ರವು ಸಹ 2013-14 ನೇ ಸಾಲಿಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ರಾಷ್ಟ್ರೀಯ ಯುವದಳ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಅರ್ಹ ಯುವಜನರಿಂದ ಆಹ್ವಾನಿಸಿದೆ.
ಹುದ್ದೆ ಸಂಪೂರ್ಣ ತಾತ್ಕಾಲಿಕವಾಗಿದ್ದು, 2 ವರ್ಷಗಳಿಗೆ ಅಂತ್ಯಗೊಳ್ಳಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 2500 ರು. ಗಳನ್ನು ಗೌರವಧನವನ್ನಾಗಿ ನೀಡಲಾಗುವುದು. ಎಲ್ಲ ವರ್ಗದ ಅಭ್ಯರ್ಥಿಗಳು ಕನಿಷ್ಟ 18 ರಿಂದ 25 ವರ್ಷದೊಳಗಿರಬೇಕು. 10 ನೇ ತರಗತಿ ಪಾಸಾಗಿರಬೇಕು. ಎನ್ಸಿಸಿ, ಎನ್ಎಸ್ಎಸ್, ಕ್ರೀಡೆ  ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದವರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿ ಪಡೆಯಲು ನೆಹರು ಯುವಕೇಂದ್ರ, ಎಸ್ಎಸ್ಪುರಂ, ಡಾ. ರಾಧಾಕೃಷ್ಣನ್ ರಸ್ತೆ, (ಡಿಡಿಪಿಐ ಕ:ಕೇರಿ ರಸ್ತೆ) ಇಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ 0816-2272908 ಸಂಪರ್ಕಿಸುವಂತೆ ಕೋರಲಾಗಿದೆ.

ಹುತಾತ್ಮ ಸೈನಿಕರಿಗೆ ನಮನ
ತುಮಕೂರು: ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಡಿಎಸ್ಎಸ್ ಕಚೇರಿಯಲ್ಲಿ ಹುತಾತ್ಮ ಸೈನಿಕರಿಗೆ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಡಿಎಸ್ಎಸ್ ಜಿಲ್ಲಾ ಅಧ್ಯಕ್ಷ ಪಿ.ಎನ್. ರಾಮಯ್ಯ ವಹಿಸಿದ್ದರು. ದಲಿತ ವಿದ್ಯಾರ್ಥಿ ಒಕ್ಕೂಟದ ಎ. ರಂಜನ್, ಮನು, ಶ್ರೀನಿವಾಸ, ನಿಧಿಕುಮಾರ್, ಎ. ನಾಗೇಶ್, ಹನುಮಂತರಾಜು, ಎ. ಕೃಷ್ಣಮೂರ್ತಿ, ಮಾನಂಗಿ ಚಂದ್ರಯ್ಯ, ಚಂದ್ರಶೇಖರ್, ರಾಕೇಶ್, ಅರುಣ್ಕುಮಾರ್, ಶಿವು ಇದ್ದರು.

ಬಾಲಗಂಗಾಧರನಾಥ ಶ್ರೀಗಳಿಗೆ ಶ್ರದ್ಧಾಂಜಲಿ
ತುಮಕೂರು: ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಕಾಟೇನಹಳ್ಳಿ ಗ್ರಾಮದ ತ್ರಿಶಕ್ತಿ ಪೀಠದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಪುಣ್ಯ ಸ್ಮರಣೆ ಅಂಗವಾಗಿ ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಿತಿ ಅಧ್ಯಕ್ಷ ಎಸ್. ಉದಯ್, ಕಾರ್ಯದರ್ಶಿ ಮುದ್ದರಾಜು ಹಾಗೂ ನಿರ್ದೇಶಕರಾದ ರಂಗಹನುಮಯ್ಯ, ಕೃಷ್ಣಯ್ಯ, ರಂಗಯ್ಯ, ಮುತ್ತರಾಜು, ಚಿಕ್ಕಲಕ್ಕಯ್ಯ, ಮಾರುತಿ, ವೇಣುಗೋಪಾಲ್, ಹನುಮಂತರಾಯಪ್ಪ, ಕಾಂತರಾಜು, ಮಂಜುನಾಥ್ ಇದ್ದರು.

ಎಂಎಸ್ಎಂಇಯಿಂದ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಹುಳಿಯಾರು: ಪಟ್ಟಣದ ಕಿಯೋನಿಕ್ಸ್ ಸಂಸ್ಥೆಯಲ್ಲಿ ಎಂಎಸ್ಎಂಇ ಸಂಸ್ಥೆಯ ಸಹಯೋಗದಲ್ಲಿ  ಗ್ರಾಮೀಣ ಭಾಗದ ಜನರಿಗಾಗಿ ಪ್ರಾರಂಭವಾಗಿರುವ ಉದ್ಯಮಶೀಲತಾ ಉಚಿತ ತರಬೇತಿ ಕಾರ್ಯಕ್ರಮವನ್ನು ಸಂಸ್ಥೆಯ ಉಪನಿರ್ದೇಶಕ ಭಲದೇವ್ ಸಿಂಗ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
 ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಭಾರತೀಯ ಆರ್ಥಿಕತೆಯನ್ನು ಉತ್ತೇಜನಗೊಳಿಸಲು ಹಾಗೂ ಗ್ರಾಮೀಣ ಭಾಗದಲ್ಲಿ ಮಧ್ಯಮ ಕೈಗಾರಿಕೆಗಳನ್ನು ಪ್ರೋತ್ಸಾಹ ಪ್ರಾರಂಭಿಸಿ ಬೆಳೆಸುವುದಾಗಿದೆ. ಗ್ರಾಮೀಣ ಭಾಗದ ವಿದ್ಯಾವಂತ ಜನರಿಗೆ ಉಚಿತ ತರಬೇತಿ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಈ ಸಂಸ್ಥೆ ಎಂ.ಎಸ್.ಎಂ.ಇ ಸಂಸ್ಥೆಯಾಗಿದೆ ಎಂದರು. ಸರಕಾರಿ ಕೆಲಸವೇಬೇಕೆಂದು ಕಾಯುವ ಬದಲು ನಮ್ಮ ಬುದ್ಧಿ ಮಟ್ಟಕೆ ಅನುಸಾರ ನಮ್ಮದೇ ಆದ ಒಂದು ಕೈಗಾರಿಕೆಯನ್ನು ಪ್ರಾರಂಭಿಸಿ, ಯಾರ ಹಿಡಿತದಲ್ಲಿ ಇಲ್ಲದಂತೆ ಸಾಗುವ ಮಾರ್ಗವನ್ನು ಈ ತರಬೇತಿಯಲ್ಲಿ ಪಡೆಯಬಹುದಾಗಿದೆ. ಜೊತೆಗೆ ಕೈಗಾರಿಕೆಯ ಸ್ಥಾಪನೆ ಮಾಡಲು ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು, ಆ ಕೈಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಬಗೆ, ಅವುಗಳ ಮಾರಾಟ, ಬೇಡಿಕೆ ಸೇರಿದಂತೆ ಹತ್ತಾರು ವಿಷಯಗಳನ್ನು ಈ ತರಬೇತಿ ಕಾರ್ಯಕ್ರಮದಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಶಿವಪ್ರಕಾಶ್ ಮಾತನಾಡಿ, ನಮ್ಮಲ್ಲಿ ದೊರೆಯುವಂತ ಕಡಿಮೆ ವೆಚ್ಚದ ಕಚ್ಚಾಪದಾರ್ಥಗಳನ್ನು ಬಳಸಿಕೊಂಡು ಅವುಗಳಿಂದ ಉತ್ತಮ ಗುಣಮಟ್ಟದ ಸಿದ್ಧವಸ್ತುಗಳನ್ನು ತಯಾರಿಸುವ ಮೂಲಕ ನಮ್ಮದೇ ಆದ ಒಂದು ಉದ್ಯಮದ ಸ್ಥಾಪನೆಗೆ ಮುಂದಾಗುವಂತೆ ತಿಳಿಸಿದರು.  

ರಾಜಕೀಯ ದಾಳಕ್ಕೆ ಬಳಸುತ್ತಿರುವುದು ಸಾಧುವಲ್ಲ
ಶಿರಾ: ಪಟ್ಟಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜವು ದಾರ ಹರಿದು ಬಿದ್ದ ಪ್ರಕರಣವನ್ನು ಕೆಲವರು ರಾಜಕೀಯ ದಾಳಕ್ಕೆ ಬಳಸುತ್ತಿರುವುದು ಸಾಧುವಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ಎನ್. ರಾಜಸಿಂಹ ತಿಳಿಸಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯೂ ಆರಂಭಗೊಂಡಿದೆ. 4 ಮಂದಿ ಶಿಕ್ಷಕರ ಮೇಲೆ ಮೊಕದ್ದಮೆ ದಾಖಲಾಗಿದ್ದು, ವಿನಾಕಾರಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ರಾಷ್ಟ್ರದ ಅನೇಕ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ಘಟನೆ ಸಂಪೂರ್ಣ ಜವಾಬ್ದಾರಿ ದೈಹಿಕ ಶಿಕ್ಷಕರದ್ದಾಗಿರುತ್ತದೆ. ರಾಜಕಾರಣಿಗಳ ನೈತಿಕ ಜವಾಬ್ದಾರಿಯೂ ಹೆಚ್ಚಾಗಬೇಕು. ಮುದಿಮಡು ರಂಗಶಾಮಯ್ಯ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಮಾಡಿದ ಆರೋಪ ಸಲ್ಲದು ಎಂದು ರಾಜಸಿಂಹ ಅವರು ತಿಳಿಸಿದ್ದಾರೆ.

ಸೇವೆ ಮಾಡುವ ಮೂಲಕ ಶಾಂತಿ ಸಾಧನೆ: ರೋಟರಿ ಸಂಸ್ಥೆ ಗುರಿ
ಹುಳಿಯಾರು: ಪ್ರಸ್ತುತದಲ್ಲಿ ಪ್ರಪಂಚಾದ್ಯಂತ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತಿದ್ದು, ಆ ಸಮಸ್ಯೆಗಳಿಂದ ಹೊರಬರಲಾರದೇ ತಮ್ಮ ಜೀವನದ ನೆಮ್ಮದಿ, ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಜನರಿಗೆ ಸೇವೆ ಮಾಡುವ ಮೂಲಕ ಅವರಲ್ಲಿ ನೆಮ್ಮದಿ ನೆಲಸುವಂತೆ ಮಾಡುವ ಗುರಿಯನ್ನು ಹೊಂದಿ ಸಾಗುತ್ತಿರುವ ಸಂಸ್ಥೆ ರೋಟರಿ ಸಂಸ್ಥೆ ಎಂದು ಜಿಲ್ಲಾಪಾಲಕರಾದ ಭದ್ರಿಪ್ರಸಾದ್ ತಿಳಿಸಿದರು.
 ಪಟ್ಟಣದ ರೋಟರಿ ಬಾಲಭವನದಲ್ಲಿ ನಡೆದ ಆಡಳಿತಾಧಿಕಾರಿಗಳ (ಗವರ್ನರ್) ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಇಂದು ಕೆಲ ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸದೆ ಅವರನ್ನು ಚಿಕ್ಕವಯಸ್ಸಿನಲ್ಲೇ  ಉದ್ಯೋಗಕ್ಕೆ ಕಳುಹಿಸುತ್ತಿದ್ದು ವಿದ್ಯಾಭ್ಯಾಸದಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ. ಇವರಿಗೆ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಿಬೇಕೆದೆ ಎಂದರು.  ಜಿಲ್ಲಾಕಾರ್ಯದರ್ಶಿ ಸುರೇಶ್, ಹುಳಿಯಾರು ರೋಟರಿ ಸಂಸ್ಥೆ ಅಧ್ಯಕ್ಷ ಈ.ರವೀಶ್, ಕಾರ್ಯದರ್ಶಿ ಗಂಗಣ್ಣ, ಸದಸ್ಯರಾದ ಮಂಜುನಾಥ ಗುಪ್ತ, ಮಲ್ಲಿಕಾರ್ಜುನಯ್ಯ, ಎಚ್.ಡಿ.ದುರ್ಗರಾಜು, ಚಿ.ನಾ.ಹಳ್ಳಿ ರೋಟರಿಸಂಸ್ಥೆಯ ನಾಗರಾಜರಾವ್, ಕಾಡುದೇವರಮಠ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ಮಾದಿಗರಿಗೆ ಟಿಕೆಟ್ ನೀಡಿದ್ದರೆ ರಾಜಿನಾಮೆ ನೀಡಲಿ
ತುಮಕೂರು: ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಫೆಬ್ರವರಿ 3 ರಂದು ನಡೆಯುವ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾದಿಗ ಜನಾಂಗದ ಅಭ್ಯರ್ಥಿಗೆ ಟಿಕೆಟ್ ನೀಡುವ ಘೋಷಣೆ ಮಾಡದಿದ್ದರೆ ಜಿಲ್ಲಾ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವೈ.ಹೆಚ್. ಹುಚ್ಚಯ್ಯ ರಾಜಿನಾಮೆ ನೀಡಲಿ ಎಂದು ಬಾಬಾ ಅಂಬೇಡ್ಕರ್, ಜಗಜೀವನರಾಂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಒಂದು ವೇಳೆ ಟಿಕೆಟ್ ನೀಡುವ ಘೋಷಣೆ ಮಾಡದೇ ಇದ್ದರೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಸಮಿತಿಯ ಜಿಲ್ಲಾಧ್ಯಕ್ಷ ಕೆ.ವಿ. ಶ್ರೀನಿವಾಸ್ ಕಲ್ಕೆರೆ ಆಗ್ರಹಿಸಿದ್ದಾರೆ. ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 35 ರಿಂದ 65 ಸಾವಿರದವರೆಗೆ ಅಸ್ಪೃಶ್ಯ ಜನಾಂಗದ ಮತದಾರರಿದ್ದಾರೆ. ಈ ಜನಾಂಗಕ್ಕೆ ಅನ್ಯಾಯ ಮಾಡಿದ ಪಕ್ಷಗಳು ಮತ್ತು ವ್ಯಕ್ತಿಗಳನ್ನು ಜನಾಂಗ ಎಂದೂ ಕ್ಷಮಿಸುವುದಿಲ್ಲ ಎಂದಿದ್ದಾರೆ. ಕೊರಟಗೆರೆಯಲ್ಲಿ ಅಸ್ಪೃಶ್ಯ ಅಭ್ಯರ್ಥಿಗೆ ಅವಕಾಶ ಸಿಗದೇ ಇದ್ದರೆ ಜಿಲ್ಲೆಯ 9 ಸಾಮಾನ್ಯ ಕ್ಷೇತ್ರಗಳಲ್ಲಿ ಅಸ್ಪೃಶ್ಯರ ವಿರೋಧಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುವ ಗುರಿಯೊಂದಿಗೆ ಜನಾಂಗದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಸುಭದ್ರ ಪರಿಣಯ ನಾಟಕ ಯಶಸ್ವಿ
ತುಮಕೂರು: ಗೂಳೂರಿನಲ್ಲಿ ಮಹಿಳೆಯರೇ ಅಭಿನಯಿಸಿದ ಸುಭದ್ರ ಪರಿಣಯ ನಾಟಕ ಅತ್ಯಂತ ಯಶಸ್ವಿಯಾಯಿತು ಎಂದು ಊರುಕೆರೆ ಕಲಾವಿದ ಎಂ.ಎನ್. ಚೆಲುವರಾಜ್ ಪ್ರಶಂಸಿಸಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಸ್ತ್ರೀಯರೇ ಅಭಿನಯಿಸಿರುವ ಈ ನಾಟಕ ರಾತ್ರಿ 9.30 ಕ್ಕೆ ಆರಂಭವಾಗಿ ಬೆಳಗ್ಗೆ 6 ಕ್ಕೆ ಮುಕ್ತಾಯವಾಯಿತು. ಈ ನಾಟಕಕ್ಕೆ ಡಾ. ಎಚ್.ಎಂ. ರಂಗನಾಥಯ್ಯ ಅವರ ಸಂಗೀತ ಮನಮುಟ್ಟುವಂತಿತ್ತು.

ಹನುಮಂತರಾವ್ ನಿಧನಕ್ಕೆ ಸಂತಾಪ
ತುಮಕೂರು: ಸ್ವಾತಂತ್ರ್ಯ ಹೋರಾಟಗಾರ ಎಂ.ಎಸ್. ಹನುಮಂತರಾಯರ ನಿಧನಕ್ಕೆ  ಅಖಿಲ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಯೋಧರ ಮತ್ತು ಉತ್ತರಾಧಿಕಾರಿಗಳ ಮಹಾಸಂಸ್ಥೆಯ ಉಪಕಾರ್ಯದರ್ಶಿ ನರಸಿಂಹಮೂರ್ತಿ ಸಂತಾಪ ಸೂಚಿಸಿದ್ದಾರೆ. ಇವರ ನಿಧನಕ್ಕೆ  ಭಗವಂತನು ಶಾಂತಿ ನೀಡಲೆಂದು ಅವರು ತಿಳಿಸಿದ್ದಾರೆ.

ಕನ್ನಡ ಕರವೇಗೆ ಆಯ್ಕೆ
ತುಮಕೂರು: ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷರಾಗಿ ಅಕ್ಷಯ ಚೌದರಿ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಟಿ.ಇ. ರಘುರಾಮ್ ತಿಳಿಸಿದ್ದಾರೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ರಘುರಾಮ್ ಕರೆ ನೀಡಿದ್ದಾರೆ.

ಕಾದಾಟ: ಹೆಣ್ಣು ಚಿರತೆ ಸಾವು
ಮಧುಗಿರಿ: ಎರಡು ಚಿರತೆಗಳು ಕಿತ್ತಾಡಿಕೊಂಡು ಅದರಲ್ಲಿ ಒಂದು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ  ಗುರುವಾರ ರಾತ್ರಿ ನಡೆದಿದೆ.
ತಾಲೂಕಿನ ದೊಡ್ಡೇರಿ ಹೋಬಳಿ ಕುರುಬಹಳ್ಳಿ ಗ್ರಾಮದ ಜಿ.ಡಿ.ಗುಟ್ಟೆಯಲ್ಲಿ ಕರಡಿ ಮತ್ತು ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯ ಬೀತರಾಗಿದ್ದರು. ಆದರೆ, ಗುರುವಾರ ಎರಡು ಚಿರತೆಗಳು ಒಂದಕ್ಕೊಂದು ಕಿತ್ತಾಡಿಕೊಂಡು ಇದರಲ್ಲಿ ಹೆಣ್ಣು ಚಿರತೆ ತೀವ್ರ ಗಾಯಗೊಂಡು ಮೃತಪಟ್ಟಿದೆ. ಗ್ರಾಮಸ್ಥರು ಬಡವನಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.ಸ್ಥಳಕ್ಕೆ ಸಿಪಿಐ ಸತ್ಯನಾರಾಯಣಸ್ವಾಮಿ, ವಲಯ ಅರಣ್ಯಧಿಕಾರಿ ರವಿಕುಮಾರ್, ಪಶು ವೈದ್ಯಾಧಿಕಾರಿ ನವೀನ್ ಸೇರಿದಂತೆ ಮತ್ತಿತರರು  ಭೇಟಿ ನೀಡಿ ಪರಿಶೀಲಿಸಿದರು.

ಸಂಪತ್ ಕುಮಾರ್ಗೆ ಸೇವಾ ಪುರಸ್ಕಾರ ಪ್ರಶಸ್ತಿ
ತಿಪಟೂರು: ರಾಜ್ಯ ಸರ್ಕಾರಿ ನೌಕರರ ಸೇವೆಯನ್ನು ಗುರುತಿಸಿ ಸರ್ಕಾರ ಕೊಡಮಾಡುವ ಸರ್ವೋತ್ತಮ ಸೇವಾ ಪುರಸ್ಕಾರ ಪ್ರಶಸ್ತಿಯನ್ನು ತಿಪಟೂರು ನಗರಸಭೆಯಲ್ಲಿ ಡಿ ವೃಂದದ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಎಸ್. ಸಂಪತ್ಕುಮಾರ್ ಅವರಿಗೆ ತುಮಕೂರಿನಲ್ಲಿ ನಡೆದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ 10 ಸಾವಿರ ನಗದು ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಪಡೆದಿರುವ ಸಂಪತ್ ಅವರನ್ನು ನಗರಸಭಾ ಸಿಬ್ಬಂದಿ, ಕಲ್ಪತರು ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷರಾದ ಟಿ.ಎಸ್. ಲೋಕೇಶ್ವರ, ಕಲ್ಪತರು ಜನಪರ ವೇದಿಕೆ ಪದಾಧಿಕಾರಿಗಳಾದ ಮಾರನಗೆರೆ ನಿರಂಜನ್, ದಯಾನಂದ್ ಸಾಗರ್, ಸಂಗಮೇಶ್, ಗಣೇಶ್ ಮತ್ತಿತರರು ಅಭಿನಂದಿಸಿದ್ದಾರೆ.

ಇಂದು ಪ್ರತಿಭಾ ಶ್ರೀ ಸಮಾರೋಪ ಸಮಾರಂಭ
ತಿಪಟೂರು: ನಗರದ ಕಲ್ಪತರು ಪದವಿ ಪೂರ್ವ ಕಾಲೇಜು ವತಿಯಿಂದ ಪ್ರತಿಭಾ ಶ್ರೀ, ಸಾಂಸ್ಕೃತಿಕ ವೇದಿಕೆ, ಎನ್.ಎಸ್.ಎಸ್. ಬನಸಿರಿ ಇಕೋ ಕ್ಲಬ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶುಕ್ರವಾರ ಬೆಳಗ್ಗೆ 10.30ಕ್ಕೆ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.  ಅಧ್ಯಕ್ಷತೆಯನ್ನು ಕೆವಿಎಸ್ ಅಧ್ಯಕ್ಷ ಎನ್.ಬಸವಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಯುಗಧರ್ಮ ರಾಮಣ್ಮ, ಖಚಾಂಚಿ ಬಿ.ಆರ್.ವಿಶ್ವನಾಥ್, ಪ್ರಾಂಶುಪಾಲ ಎನ್. ಪರಮೇಶ್ವರಪ್ಪ, ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಪ್ರಾಂಶುಪಾಲ ಸೈಯದ್ ಮುಷ್ತಾಕ್ ಅಹಮದ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಪ್ರದೇಶ ಸಂರಕ್ಷಿಸಲು ಆಗ್ರಹ
ಕುಣಿಗಲ್: ತಾಲೂಕಿನ ಹೇರೂರು ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಸರ್ಕಾರದ ಯೋಜನೆಯಾದ ನಿರ್ಮಲ ಗ್ರಾಮ ಯೋಜನೆಯಲ್ಲಿ ಫಲಾನುಭವಿಗಳು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ರಸ್ತೆಯನ್ನು ಉಪಯೋಗಿಸಿಕೊಂಡು ಹಲವು ಸಮಸ್ಯೆಗೆ ಕಾರಣರಾಗಿದ್ದಾರೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕ ಪ್ರದೇಶ ಸಂರಕ್ಷಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
 ಹೇರೂರು ಗ್ರಾಮದಲ್ಲಿ ಇತ್ತೀಚೆಗೆ ಸರ್ಕಾರದ ನರೇಗ ಯೋಜನೆ ಹಾಗೂ ನಿರ್ಮಲ ಗ್ರಾಮ ಯೋಜನೆಯಡಿಯಲ್ಲಿ ಬಹುತೇಕ ಫಲಾನುಭವಿಗಳಿಗೆ ಶೌಚಾಲಯ ಮಂಜೂರು ಮಾಡಿದ್ದು, ಫಲಾನುಭವಿಗಳು ಸಾರ್ವಜನಿಕ ಪ್ರದೇಶವಾದ ರಸ್ತೆ, ಚರಂಡಿಗಳ ಮೇಲೆ ನಿರ್ಮಿಸಲು ಮುಂದಾಗಿದ್ದಾರೆ. ಮತ್ತೆ ಕೆಲವರು ಗ್ರಾಪಂ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಮೀಸಲಿಟ್ಟ ಪ್ರದೇಶವನ್ನು ದುರ್ಬಳಕೆ ಮಾಡಿಕೊಂಡು ನಿರ್ಮಿಸುತ್ತಿದ್ದು, ಸಾರ್ವಜನಿಕ ಪ್ರದೇಶದ ಸಂರಕ್ಷಣೆ ಮಾಡುವಂತೆ ಗ್ರಾಪಂ ಪಿಡಿಒ, ಜನಪ್ರತಿನಿಧಿಗಳಿಗೆ ಹಲವು ದೂರು ನೀಡಿದ್ದರೂ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಸಾರ್ವಜನಿಕ ಪ್ರದೇಶ ವ್ಯಾಪಕ ಒತ್ತುವರಿಯಾಗುತ್ತಿದೆ. ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಕೂಡಲೆ ಗಮನ ಹರಿಸಿ ಸಾರ್ವಜನಿಕ ಪ್ರದೇಶ ಅತಿಕ್ರಮಿಸಿ ಶೌಚಾಲಯ ನಿರ್ಮಿಸಿರುವ ಫಲಾನುಭವಿಗಳ ಅನುದಾನ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ವಾಟರ್ ಫಿಲ್ಟರ್ ವಿತರಣೆ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಎಚ್. ಭೈರಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 64ನೇ ಗಣರಾಜ್ಯೋತ್ಸವ ಅಂಗವಾಗಿ ಹಾಲ್ಕುರಿಕೆ ಗ್ರಾ.ಪಂ.ಸದಸ್ಯರಾದ ಎಚ್.ಆರ್. ಬಸವರಾಜು ಅವರು ವಾಟರ್ ಫಿಲ್ಟರ್ ಅನ್ನು ಉಚಿತವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ತಾ.ಶ್ರೀ ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ.ಕುಮಾರ್, ಶಿಕ್ಷಕಿಯರಾದ ಪ್ರಣಿತಕುಮಾರ್, ಸೀಮಾ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುಧಾ, ನಿವೃತ್ತ ಶಿಕ್ಷಕ ಚನ್ನಬಸವಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.  

'ಟೀಕಿಸುವುದನ್ನು  ನಿಲ್ಲಿಸಬೇಕು'
ತುಮಕೂರು: ಬಿಜೆಪಿ ಸಿದ್ಧಾಂತ, ಪ್ರಣಾಳಿಕೆ, ಕಮಲದ ಚಿಹ್ನೆಯಿಂದ, ಕಾರ್ಯಕರ್ತರ ಪರಿಶ್ರಮದಿಂದ ಗೆದ್ದಿರುವ ತುಮಕೂರು ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು, ನೈತಿಕತೆ ಬಿಟ್ಟು, ಕೆಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಚ್.ಎನ್. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪತ್ಕಾಲದಲ್ಲಿ ರಾಜಕೀಯ ಮರುಜನ್ಮ ನೀಡಿದಂತಹ ಬಿಜೆಪಿ ಪಕ್ಷವನ್ನು ಗರ್ಭಗುಡಿ ಸಂಸ್ಕೃತಿಯೆಂದು ಟೀಕಿಸಿ, ಕೀಳು ಮನೋಭಾವನೆ ವ್ಯಕ್ತಪಡಿಸುವ ಮೂಲಕ ಹಾಗೂ ದಡ ಸೇರಿದ ನಂತರ ತೆಪ್ಪವನ್ನು ಒದೆಯುವಂತಹ ತಮ್ಮ ನಿಜ ಸಂಸ್ಕೃತಿಯನ್ನು ತೋರಿಸಿದ್ದಾರೆ ಎಂದು ಚಂದ್ರಶೇಖರ್ ಟೀಕಿಸಿದ್ದಾರೆ. ಬಿಜೆಪಿ ಜತೆ ಮದುವೆ, ಕೆಜೆಪಿ ಜತೆ ಸಂಸಾರ ಮಾಡುವಂತಹ ಅನೈತಿಕ ಪ್ರವೃತ್ತಿ ಹಿರಿಯ ರಾಜಕಾರಣಿಗಳಿಗೆ ತರವಲ್ಲ. ಅನ್ಯ ಪಕ್ಷವನ್ನು ಸೇರುವ ಇರಾದೆ ಇದ್ದರೆ, ತಕ್ಷಣ ಬಿಜೆಪಿಯಿಂದ ಗೆದ್ದಿರುವ ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ, ತಮ್ಮ ನೈತಿಕತೆ ಎತ್ತಿಹಿಡಿಯಬೇಕು. ಬಿಜೆಪಿ ಟೀಕಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಮುನಿಯಪ್ಪ ಬಿಎಸ್ಪಿ ಅಭ್ಯರ್ಥಿ
ಮಧುಗಿರಿ: ಬಹುಜನ ಸಮಾಜ ಪಾರ್ಟಿ ಸಂಘಟನೆಗಾಗಿ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯವತಿ ಫೆ.10 ರಂದು ಬೆಂಗಳೂರಿಗೆ ಬರುತ್ತಿದ್ದು ಅಂದು 5 ಲಕ್ಷಕ್ಕೂ ಅಧಿಕ ಬಿಎಸ್ಪಿ ಕಾರ್ಯಕರ್ತರು ಸೇರಲಿದ್ದು ಮಧುಗಿರಿ ತಾಲೂಕಿನಿಂದ 5 ಸಾವಿರಕ್ಕೂ ಹೆಚ್ಚು ಜನರು ಬೃಹತ್ ರ್ಯಾಲಿಯಲ್ಲಿ  ಭಾಗವಹಿಸಲಿದ್ದಾರೆ ಎಂದು ಬಿಎಸ್ಪಿ ರಾಜ್ಯ ಖಜಾಂಚಿ ಕೋರಮಂಗಲ ಮುನಿಯಪ್ಪ ತಿಳಿಸಿದ್ದಾರೆ. ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಧುಗಿರಿ ತಾಲೂಕಿನಲ್ಲಿ ಬಿಎಸ್ಪಿ ಪದಾಧಿಕಾರಿಗಳು ಪಕ್ಷವನ್ನು ಸದೃಢವಾಗಿ ಕಟ್ಟುತ್ತಿದ್ದು  ಮನೆ ಮನೆಗೂ ತೆರಳಿ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ  ನಾನು ಸ್ಪರ್ಧಿಸುವುದು ಖಚಿತ ಎಂದ ಮುನಿಯಪ್ಪ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನನ್ನು ಆಯ್ಕೆ ಮಾಡಿದಲ್ಲಿ ಶಾಶ್ವತ ನೀರಾವರಿ, ಜಿಲ್ಲಾ ಕೇಂದ್ರ ಹಾಗೂ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನೀಗಿಸುವ ಜೊತೆಗೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಬಿಎಸ್ಪಿ ಸಂಘಟನೆ ಸಹಿಸದ ವಿರೋಧ ಪಕ್ಷಗಳು ನಮ್ಮ ಮೇಲೆ ಇಲ್ಲಸಲ್ಲದ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಖಂಡಿಸಿದ ಮುನಿಯಪ್ಪ ಆ ಪಕ್ಷಗಳು ನಮ್ಮ ವಿರುದ್ಧ ಏನೇ ತಂತ್ರಗಾರಿಕೆ ಮಾಡಿದರು ಕೂಡ ನಾವು ಜಗ್ಗುವುದಿಲ್ಲ. ಮಧುಗಿರಿ ಕ್ಷೇತ್ರದಿಂದ ಈ ಸಲ  ಆನೆಯನ್ನು ವಿಧಾನ ಸೌಧಕ್ಕೆ ಕಳಿಸಲು ಎಲ್ಲ ತಯಾರಿ ನಡೆದಿದೆ ಎಂದು  ವಿಶ್ವಾಸ ವ್ಯಕ್ತಪಡಿಸಿದ  ಅವರು ಫೆ.10 ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿರುವ ರ್ಯಾಲಿಗೆ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement