ಕೆಎಸ್ಆರ್ಟಿಸಿಯಿಂದ ಮನೆ ಬಾಗಿಲಿಗೆ ಸೇವೆ ಆರಂಭ
ಕ.ಪ್ರ. ವಾರ್ತೆ ತುಮಕೂರು ಜು.3
ತುಮಕೂರಿನ ವಿವಿಧ ಬಡಾವಣೆಗಳಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅವರ ಮನೆ ಬಾಗಿಲಿನಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಮಂಗಳವಾರ ಎಸ್.ಎಸ್.ಪುರಂ ಮುಖ್ಯರಸ್ತೆಯಿಂದ ನೇರವಾಗಿ ಬೆಂಗಳೂರಿಗೆ ತೆರಳುವ ಹೊಸ ಬಸ್ ಮಾರ್ಗಕ್ಕೆ ಚಾಲನೆ ನೀಡಲಾಯಿತು.
ನಗರದ ಎಸ್.ಎಸ್.ಪುರಂ ಮುಖ್ಯರಸ್ತೆಯ ನಮ್ಮೂರ ಆಹಾರದ ಬಳಿಯಿಂದ ಶೆಟ್ಟಿಹಳ್ಳಿ, ಜಯನಗರ, ಬೈಪಾಸ್ ಮೂಲಕ ಬೆಂಗಳೂರು ತಲುಪುವ ಕೆ.ಎಸ್.ಆರ್.ಟಿ.ಸಿ ವಾಹನಕ್ಕೆ ಸಂಸದ ಜಿ.ಎಸ್. ಬಸವರಾಜು, ಶಾಸಕ ಡಾ.ರಫೀಕ್ ಅಹಮದ್ ಚಾಲನೆ ನೀಡಿದರು.
ಈ ಭಾಗದ ಸಾರ್ವಜನಿಕರ ಕೋರಿಕೆಯ ಮೇರೆಗೆ ಶಾಸಕರು ತುಮಕೂರು ಜಿಲ್ಲಾ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ಮನವಿ ಮಾಡಿದ್ದು, ಪ್ರಯೋಗಿಕವಾಗಿ ಮಂಗಳವಾರ ಬಡಾವಣೆ ಬಸ್ ಸೇವೆ ಆರಂಭವಾಗಿದೆ.
ಶಾಸಕ ಡಾ.ರಫೀಕ್ ಅಹಮದ್ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಬಸ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರ ಕೋರಿಕೆಯ ಮೇರೆಗೆ ಬಡಾವಣೆಗಳ ಮೂಲಕ ಬೆಂಗಳೂರು ನಗರಕ್ಕೆ ಸೇವೆ ಕಲ್ಪಿಸಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಎಸ್.ಎಸ್.ಪುರಂ ಮುಖ್ಯರಸ್ತೆಯ ಮೂಲಕ ಬೆಂಗಳೂರು ನಗರಕ್ಕೆ ನೇರ ಬಸ್ ಸೇವೆ ಆರಂಭಿಸಿದ್ದಾರೆ. ಅವರಿಗೆ ಈ ಬಡಾವಣೆಯ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಸೇವೆ ಸಲ್ಲಿಸಲು ಕ್ರಮ: ಮುಂದಿನ ದಿನಗಳಲ್ಲಿ ನಗರದ ಗುಬ್ಬಿ ಗೇಟ್, ಶಿರಾಗೇಟ್ ಮತ್ತಿತರ ದೂರದ ಬಡಾವಣೆಗಳಿಂದಲೂ ನೇರವಾಗಿ ಬೆಂಗಳೂರಿಗೆ ಸೇವೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ವಿಶ್ವನಾಥ್ ಮಾತನಾಡಿ, ಸಾರ್ವಜನಿಕರ ಕೋರಿಕೆ ಮೇರೆಗೆ ಪ್ರಯೋಗಿಕವಾಗಿ ಇಂದಿನಿಂದ ಎಸ್.ಎಸ್.ಪುರಂ, ಶೆಟ್ಟಿಹಳ್ಳಿ ಮುಖ್ಯರಸ್ತೆ, ಜಯನಗರ, ಬೈಪಾಸ್ ಮೂಲಕ ನೇರವಾಗಿ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣಕ್ಕೆ ಚಾಲನೆ ನೀಡಲಾಗಿದೆ.
ಬೆಳಗ್ಗೆ 7.15 ಕ್ಕೆ ಈ ಭಾಗದಲ್ಲಿ ಸಂಚರಿಸುವ ವಾಹನ 9 ಗಂಟೆಗೆ ಬೆಂಗಳೂರು ತಲುಪಲಿದೆ.ಪ್ರಯಾಣಿಕರ ಸ್ಪಂದನೆಯನ್ನು ನೋಡಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಗತ್ಯವಿರುವ ಬಡಾವಣೆಗಳಿಗೆ ನೇರ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.
10 ರೂಟ್ಗಳ ಬೇಡಿಕೆ: ತುಮಕೂರು ನಗರ ಸಾರಿಗೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇನ್ನು 10 ಹೊಸ ರೂಟ್ಗಳ ಬೇಡಿಕೆಯಿದೆ. ಈಗಾಗಲೇ ಬಸ್ ವ್ಯವಸ್ಥೆ ಮಾಡಿದ್ದು, ತಕ್ಷಣದಲ್ಲಿಯೇ ಅಗತ್ಯವಿರುವ ಕಡೆಗಳಿಗೆ ಸೇವೆ ಒದಗಿಸಲು ಕೆ.ಎಸ್.ಆರ್.ಟಿ.ಸಿ ಬದ್ಧವಿದೆ ಎಂದು ವಿಶ್ವನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪಟೇಲ್ ನಾಗರಾಜರಾವ್, ವಿಜಯಾರುದ್ರೇಶ್, ಕರುಣಾರಾಧ್ಯ, ಮುಂಜಾನೆ ಮಿತ್ರ ಬಳಗ, ಮಯೂರ ಯುವವೇದಿಕೆಯ ಅಧ್ಯಕ್ಷ ಸತ್ಯನಾರಾಯಣ, ಟಿ.ಜಿ.ಜಗದೀಶ್,
ಎನ್.ಆರ್.ಸ್ವಾಮಿ, ಸುರೇಶ್, ಹೆಚ್.ಆರ್.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.