ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆ ಮಾಂಗಲ್ಯ ಸರ ಕಸಿದು ಪರಾರಿ

Srinivasa Murthy VN
Updated On : 4 Jul 2013, 12:03 pm

ಶಿರಾ: ಪಾಲಿಷ್ ಮಾಡಿಕೊಡುವ ನೆಪದಲ್ಲಿ ಬಂದ ಇಬ್ಬರು, ಮಹಿಳೆಯ ಕೊರಳಿನಲ್ಲಿದ್ದ ಮಾಂಗಲ್ಯದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.  ಶಿರಾ ತಾಲೂಕು ತಾವರೆಕೆರೆಯ ಪ್ರೇಮ ಎಂಬುವವರ ಮನೆಗೆ ಇಬ್ಬರು ಆಗಂತಕರು ಬಂದರು. ಒಡವೆಗಳನ್ನು ಪಾಲಿಷ್ ಮಾಡಿಕೊಡುವುದಾಗಿ ಹೇಳಿದರು. ಮೊದಲಿಗೆ ಬೆಳ್ಳಿಯ ಕಾಲು ಚೈನ್ ಪಾಲಿಷ್ ಮಾಡಿದರು. ನಂತರ ಚಿನ್ನದ ಮಾಂಗಲ್ಯದ ಸರವನ್ನು ಕೇಳಿದರು. ಆಗ ಪ್ರೇಮ ಅವರು ನಿರಾಕರಿಸಿದರು. ಒಡನೆಯೇ ಸದರಿ ಆಗಂತುಕರು ಆಕೆಯ ಕೊರಳಿನಲ್ಲಿದ್ದ 35 ಗ್ರಾಂ ತೂಕದ ಸುಮಾರು 80000 ರು. ಮೌಲ್ಯದ ಚಿನ್ನದ ಮಾಂಗಲ್ಯದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿವೇಕಾನಂದರ ಜೀವನ ಸಂದೇಶ ಎಲ್ಲೆಡೆ ಪಸರಿಸಲಿ
ಗುಬ್ಬಿ:
ಸ್ವಾಮಿ ವಿವೇಕಾನಂದರ 150 ನೇ ಜನ್ಮವರ್ಷಾಚರಣೆ ಪ್ರಯುಕ್ತ ಭವ್ಯ ರಥಯಾತ್ರೆ ರಾಜ್ಯಾದ್ಯಂತ ವಿವೇಕಾನಂದರ ಜೀವನ ಸಂದೇಶವನ್ನು ಪ್ರಚುರಪಡಿಸಲಿದೆ ಎಂದು  ಮೆರವಣಿಗೆ ಉದ್ಘಾಟನೆಯಲ್ಲಿ ಮಾತನಾಡಿದ  ತುಮಕೂರಿನ ರಾಮಕೃಷ್ಣ  ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮಿ ತಿಳಿಸಿದರು. ಸ್ವಾಮಿ ವಿವೇಕಾನಂದರ 150 ನೇ ಜನ್ಮವರ್ಷಾ ಚರಣೆಯನ್ನು ಅರ್ಥಪೂರ್ಣವಾಗಿರಲು ಬೆಂಗಳೂರಿನ ರಾಮಕೃಷ್ಣ ಮಠ ಇತರ ಸಂಸ್ಥೆಗಳು ಹತ್ತು ಸಾವಿರ ಕಿ.ಮೀ.ದೂರ ಕ್ರಮಿಸಿದ ರಥಯಾತ್ರೆಯು ಗುಬ್ಬಿ ಪಟ್ಟಣಕ್ಕೆ ಆಗಮಿಸಿದೆ ಎಂದರು.  ಈ ರಥಯಾತ್ರೆಯಲ್ಲಿ ಎಲ್ಲಾ ವಿವಿಧ ಸಂಘ ಸಂಸ್ಥಗಳು ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗುಬ್ಬಿಯ ಚಿದಂಬರಾಶ್ರಮದ ವಿದ್ಯಾರ್ಥಿಗಳು ಮತ್ತು ರಥಯಾತ್ರೆಯ ಗೌರವಾಧ್ಯಕ್ಷ ಕೆ.ಎಲ್. ಗೋಪಾಲಕೃಷ್ಣ ಶೆಟ್ಟಿ, ಕಾರ್ಯಧ್ಯಕ್ಷ ಪಿ.ಸಿ. ಬಾಲಕೃಷ್ಣ ಶೆಟ್ಟಿ, ಪದಾಧಿಕಾರಿಗಳಾದ ಬಸವರಾಜು, ರಂಗನಾಥ ಶರ್ಮಾ, ನರಸಿಂಹಮೂರ್ತಿ, ವಾಸವಿ ಮಹಿಳಾ ಮಂಡಳಿಯ ರಜನೀ ಸುರೇಶ್, ಪ್ರಭಾಕೃಷ್ಣ, ಭಾಗವಹಿಸಿದರು.

ಬೆಳೆ ವಿಮೆ ಅವಧಿ ವಿಸ್ತರಿಸಲು ಮನವಿ
ಶಿರಾ:
ಕಳೆದ ಆರೇಳು ವರ್ಷಗಳಿಂದ ಶಿರಾ ತಾಲೂಕಿನಲ್ಲಿ ಮಳೆಯಿಲ್ಲದೇ ಬರಡು ಭೂಮಿಯಾಗಿದ್ದು ರೈತರು ಸಂಕಷ್ಟದ ಹಾದಿ ಹಿಡಿಯುವಂತಾಗಿದೆ. ಈ ಭಾರಿಯು ಮಳೆಯಾಗದೆ ಬಿತ್ತನೆ ಅವಧಿ ಮುಗಿದಿದ್ದು ಈಗಾಗಲೇ  ಬೆಳೆ  ವಿಮೆ ಅವಧಿ ಜೂನ್ 30 ಕ್ಕೆ ನಿಗದಿ ಪಡಿಸಿದ್ದನ್ನು ಇನ್ನೂ ವಿಸ್ತರಿಸುವಂತೆ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬರಗೂರು ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮಳೆಗಾಗಿ ಶತರುದ್ರಾಭಿಷೇಕ ಪರ್ಜನ್ಯಜಪ
ಮಧುಗಿರಿ:
ಉತ್ತರ ಭಾರತದಲ್ಲಿ ಜಲ ಪ್ರವಾಹ ಉಂಟಾಗಿ ಸಾವಿರಾರು ಜನರು ಕೊಚ್ಚಿ ಹೋಗಿದ್ದರೆ ಇತ್ತ  ಮಧುಗಿರಿ ತಾಲೂಕಿಲ್ಲಿ  ಮಳೆ ಇಲ್ಲದೆ ರೈತರು, ಕೂಲಿ ಕಾರ್ಮಿಕರು ಹಾಗೂ ಕೃಷಿಕ ಸಮುದಾಯ ಸತತ ಬರಗಾಲಕ್ಕೆ ಸಿಕ್ಕಿ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಮಳೆರಾಯನ ಆಗಮನಕ್ಕಾಗಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಡಿ ವರ್ತಕರು, ಮಿಲ್ ಮಾಲೀಕರು ಒಗ್ಗೂಡಿ ಶತರುದ್ರಾಭಿಷೇಕ ಪರ್ಜನ್ಯಜಪದೊಂದಿಗೆ ವರುಣನ ಕೃಪೆಗೆ ಪ್ರಾರ್ಥಿಸಿದರು.  ಮಧುಗಿರಿ ತಾಲೂಕಿನಲ್ಲಿ ಈಗ್ಗೆ 8 ವರ್ಷ ಸಕಾದಲ್ಲಿ ಮಳೆ ಬಾರದೇ ರೈತರು ತಮ್ಮ ಜನ-ಜಾನುವಾರು ಕಾಪಾಡಿಕೊಳ್ಳಲು ಇನ್ನಿಲ್ಲದ ಪಡಿಪಾಟಿಲು ಬೀಳುತ್ತಿದ್ದಾರಲ್ಲದೆ  ಸತತ ಬರಗಾಲಕ್ಕೆ ಸಿಕ್ಕಿ ನರಳುತ್ತಿದ್ದಾರೆ. ಹೀಗಾಗಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ವೇ.ಬ್ರ.ನಾಗರಾಜಶಾಸ್ತ್ರಿ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ್ ಮಿಲ್ ಮಾಲೀಕ ಆರ್.ಸಿ. ವಿಜಯ್‌ಕುಮಾರ್ ಜೈನ್, ಮಂಡಿ ವರ್ತಕರಾದ ಜಿ.ಆರ್. ಶ್ರೀನಾಥ್, ಡಿ.ಜಿ.ಶಂಕರನಾರಾಯಣಶೆಟ್ಟಿ, ವರ್ಧಮಾನ್ ಜೈನ್, ಶಿವಕುಮಾರ್, ಬಸವರಾಜು, ಜಿ.ಆರ್.ಧನಪಾಲ್, ಭದ್ರಣ್ಣ ಇನ್ನು  ಅನೇಕರು ಉಪಸ್ಥಿತರಿದ್ದರು.

ವಿನೂತನ ಕೃಷಿ ವಿಸ್ತರಣಾ ಪದ್ಧತಿ ತರಬೇತಿ
ತಿಪಟೂರು:
ತಾಲೂಕಿನ ಬಿದರೆಗುಡಿ ಕಾವಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಇಕ್ರಿಸ್ಯಾಟ್ ಹೈದರಾಬಾದ್ ಹಾಗೂ ಇಪ್ಕೋ-ಕಿಸಾನ್ ಸಂಚಾರ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಭೂಚೇತನ ಅನುವುಗಾರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಅನೂಪ್, ಕೃಷಿಯಲ್ಲಿ ಅನೇಕ ಸಮಸ್ಯೆಗಳನ್ನು ನಮ್ಮ ರೈತರು ಅನುಭವಿಸುತ್ತಿದ್ದು, ಎಲ್ಲಾ ರೈತರನ್ನು ಸಂಪರ್ಕಿಸಿ ಪರಿಹಾರ ದೊರಕಿಸಿಕೊಡುವುದು ಕಷ್ಟದ ಕೆಲಸವಾಗಿದ್ದು,ಅಂತಹ ಸಮಯದಲ್ಲಿ ಟ್ಯಾಬ್ಲೆಟ್‌ನಂತಹ ವಿನೂತನ ಸಾಧನಗಳು ರೈತರಿಗೆ ಮಾಹಿತಿ ತಲುಪಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.  ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಜಿ.ಎಂ.ಸುಜಿತ್ ಮಾತನಾಡುತ್ತಾ ಅನೇಕ ವಿಸ್ತರಣಾ ಪದ್ಧತಿಗಳನ್ನು ನಾವು ಅನುಸರಿಸುತ್ತಿದ್ದು, ವಿನೂತವಾಗಿ ಬಂದಿರುವ ಇಂತಹ ತಂತ್ರಜ್ಞಾನಗಳಿಂದ ಹೆಚ್ಚಿನ ರೈತರಿಗೆ ಮಾಹಿತಿ ರವಾನಿಸಲು ಸಾಧ್ಯವಾಗುತ್ತದೆ. ರೋಗ ಮತ್ತು ಕೀಟ ಬಾಧೆಗಳನ್ನು ಫೋಟೋ ವಿಡಿಯೋ ಮೂಲಕ ಈ ತಂತ್ರಜ್ಞಾನದಿಂದ ರೈತರಿಗೆ ಅರಿವು ಮೂಡಿಸಬಹುದು ಹಾಗೂ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ ಎಂದು ವಿವರಿಸಿದರು.  ನಂತರ  ಇಕ್ರಿಸ್ಯಾಟ್ ಹೈದರಾಬಾದ್‌ನ ವಿಜ್ಞಾನಿಗಳು,ಇಪ್ಕೋ-ಕಿಸಾನ್ ಸಂಚಾರ್‌ನ ಅಧಿಕಾರಿಗಳು ಟ್ಯಾಬ್ಲೆಟ್ ಸಾಧನವನ್ನು ಬಳಸುವ ವಿಧಾನಗಳನ್ನು ಪರಿಚಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement